ಮಂಗಳೂರು(ಬೆಳಗಾವಿ): ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರ ಮನೆಗೆ ಶುಕ್ರವಾರ(ಅ.27) ದಾಳಿ ಮಾಡಿದ ಅರಣ್ಯ ಇಲಾಖೆ ಅಧಿಕಾರಿಗಳು, ಹುಲಿ ಉಗುರಿನ ಪೆಂಡೆಂಟ್ ವಶಕ್ಕೆ ಪಡೆದಿದ್ದಾರೆ.
ಉಪ ಅರಣ್ಯ ಸಂರಕ್ಷಣಾಧಿಕಾರಿ ಶಂಕರ ಕಲ್ಲೋಳಿಕರ, ಹೆಚ್ಚುವರಿ ಅರಣ್ಯ ಸಂರಕ್ಷಣಾಧಿಕಾರಿ ಸುರೇಶ ತೇಲಿ ನೇತೃತ್ವದಲ್ಲಿ ಅಧಿಕಾರಿಗಳ ತಂಡ ದಾಳಿ ಮಾಡಿ, ಮೃಣಾಲ್ ಹೆಬ್ಬಾಳಕರ ಅವರನ್ನು ವಿಚಾರಣೆ ನಡೆಸಿದೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಕೊರಳಲ್ಲಿ ಹುಲಿ ಉಗುರಿನ ಪೆಂಡೆಂಟ್ ಇರುವ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಈ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿಗಳು ನೋಟಿಸ್ ನೀಡಿ, ದಾಳಿ ಮಾಡಿದ್ದಾರೆ. ಮಾಹಿತಿ ಕಲೆಹಾಕಿ, ಪೆಂಡೆಂಟ್ ವಶಕ್ಕೆ ಪಡೆದಿರುವ ಅಧಿಕಾರಿಗಳು ಅದನ್ನು ಎಫ್.ಎಸ್.ಎಲ್.ಗೆ ಕಳುಹಿಸುವುದಾಗಿ ತಿಳಿಸಿದ್ದಾರೆ.
ನನ್ನ ಮದುವೆಯ ಸಮಾರಂಭದಲ್ಲಿ ಆತ್ಮೀಯರು ನನಗೆ ಈ ಪೆಂಡೆಂಟ್ ಕಾಣಿಕೆ ನೀಡಿದ್ದಾರೆ. ಇದು ನಿಜವಾದ ಹುಲಿ ಉಗುರಿನದ್ದಲ್ಲ. ಪ್ಲಾಸ್ಟಿಕ್ ನಿಂದ ಮಾಡಿದ್ದು. ಈ ವಿಚಾರವಾಗಿ ಅರಣ್ಯಾಧಿಕಾರಿಗಳ ವಿಚಾರಣೆಗೆ ಸಂಪೂರ್ಣ ಸಹಕಾರ ನೀಡುತ್ತೇನೆ’ ಎಂದು ಮೃಣಾಲ್ ಹೇಳಿದ್ದಾರೆ.