ನಿಗಮ, ಮಂಡಳಿಗಳಿಗೆ ಮೊದಲ ಹಂತದಲ್ಲಿ ಶಾಸಕರು, 2ನೇ ಹಂತದಲ್ಲಿ ಕಾರ್ಯಕರ್ತರಿಗೆ ಅವಕಾಶ-ಸೌಜನ್ಯ ಪ್ರಕರಣದ ಬಗ್ಗೆ ಕೇಂದ್ರ ಸರಕಾರ ನಿರ್ಧಾರ ತೆಗೆದುಕೊಳ್ಳಬೇಕು-ಪರಮೇಶ್ವರ್‌ ಮನೆಯಲ್ಲಿ ರಾಜಕೀಯ ಮಾತುಕತೆ ನಡೆದಿಲ್ಲ-ರಾಜಕೀಯದಲ್ಲಿ ಹರೀಶ್‌ ಪೂಂಜ “ಬಚ್ಚಾ”- ಮಂಗಳೂರಿನಲ್ಲಿ ಸಿಎಂ ಹೇಳಿಕೆ

ಮಂಗಳೂರು: ರಾಜ್ಯದಲ್ಲಿ ನಿಗಮ ಮಂಡಳಿಗಳಿಗೆ ಶೀಘ್ರ ಅಧ್ಯಕ್ಷರ ನೇಮಕ ಮಾಡಲಾಗುವುದು. ಮೊದಲ ಹಂತದಲ್ಲಿ ಶಾಸಕರಿಗೆ ಆದ್ಯತೆ ನೀಡಿ, ಎರಡನೇ ಹಂತದಲ್ಲಿ ಕಾರ್ಯಕರ್ತರಿಗೆ ಅವಕಾಶ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಉಡುಪಿಯಲ್ಲಿ ಆಯೋಜಿಸಿರುವ ವಿಶ್ವ ಬಂಟರ ಸಮ್ಮೇಳನದಲ್ಲಿ ಭಾಗವಹಿಸಲು ಬಂದಿರುವ ಮುಖ್ಯಮಂತ್ರಿ, ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿ, ಗೃಹ ಸಚಿವರ ಮನೆಯ ಔತಣ ಕೂಟದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.‌ಶಿವಕುಮಾರ್ ಗೈರಾಗಿದ್ದ ಬಗ್ಗೆ ಕೇಳಿದ ಪ್ರಶ್ನೆಗೆ, ಸಚಿವ‌ ಜಿ. ಪರಮೇಶ್ವರ ಅವರು ಮನೆಗೆ ಊಟಕ್ಕೆ ಕರೆದಿದ್ದರು. ನಾನು ಮತ್ತು ಕೆಲವು ಸಚಿವರು ಹೋಗಿದ್ದೆವು. ಅಲ್ಲಿ ಲೋಕಾಭಿರಾಮ ಮಾತುಕತೆ ಬಿಟ್ಟರೆ ಯಾವುದೇ ರಾಜಕೀಯ ನಡೆದಿಲ್ಲ. ಅದಕ್ಕೆ ಬೇರೆ ಅರ್ಥ ಕಲ್ಪಿಸಬೇಕಾಗಿಲ್ಲ ಎಂದು ಪ್ರತಿಕ್ರಿಯಿಸಿದರು.

ಸೌಜನ್ಯ ಕೊಲೆ ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಸಿದೆ. ಹೀಗಾಗಿ ಮರುತನಿಖೆ ಬಗ್ಗೆ ಕೇಂದ್ರ ಸರ್ಕಾರ ನಿರ್ಧಾರ ಕೈಗೊಳ್ಳಬೇಕು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಸಿಎಂ ಅಂದ್ರೆ ಕಲೆಕ್ಷನ್ ಮಾಸ್ಟರ್ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ ‘ನಾನು 1983ರಲ್ಲಿ ಶಾಸಕನಾಗಿ,‌ನಂತರ ಸಚಿವ ನಾದವನು. ಹರೀಶ್ ಪೂಂಜ ಇನ್ನೂ ಬಚ್ಚಾ ‘ ಎಂದರು.ಕಾರ್ಕಳದ ಪರಶುರಾಮ ಮೂರ್ತಿ ಅಸಲಿಯೋ ನಕಲಿಯೋ ತನಿಖೆ ಮಾತ್ರ ನಡೆಯಲಿದೆ ಎಂದು ಅವರು ಹೇಳಿದರು.

ಬೆಂಗಳೂರಿನಿಂದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಜೊತೆ ಬಂದ ಸಿ ಎಂ ಅವರನ್ನು ವಿಮಾನ ನಿಲ್ದಾಣದಲ್ಲಿ ಶಾಸಕ ಅಶೋಕ್‌ ಕುಮಾರ್‌ ರೈ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಹರೀಶ್‌ ಕುಮಾರ್‌, ಮಾಜಿ ಸಚಿವ ರಮಾನಾಥ್‌ ರೈ, ಅಭಯ್‌ ಚಂದ್ರ ಜೈನ್‌, ಐವನ್‌ ಡಿಸೋಜ, ಜೆ ಆರ್‌ ಲೋಬೋ, ಶಕುಂತಲಾ ಶೆಟ್ಟಿ, ಮತ್ತಿತರ ಗಣ್ಯರು ಸ್ವಾಗತಿಸಿದರು.

ವೀಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

 

LEAVE A REPLY

Please enter your comment!
Please enter your name here