ಮಂಗಳೂರು: ಈರುಳ್ಳಿ ಬೆಲೆಯಲ್ಲಿ ಸಾಕಷ್ಟು ಏರಿಕೆಯಾಗಿದ್ದು ಗ್ರಾಹಕರು ಕಣ್ಣೀರು ಹಾಕುವಂತಾಗಿದೆ. ದೇಶದ ವಿವಿಧ ಭಾಗಗಳಲ್ಲಿ ಶೇ.50 ರಷ್ಟು ಬೆಲೆ ಹೆಚ್ಚಳವಾಗಿದ್ದು ಗ್ರಾಹಕನ ಜೇಬಿಗೆ ಕತ್ತರಿ ಬಿದ್ದಿದೆ.
ಮಳೆ ಇಲ್ಲದೆ ಬಿತ್ತನೆ ಪ್ರದೇಶದಲ್ಲಿ ಬೆಳೆಹಾನಿಯಾದ ಹಿನ್ನೆಲೆಯಲ್ಲಿ ಮಾರುಕಟ್ಟೆ ಬೇಡಿಕೆ ಜಾಸ್ತಿಯಾಗಿದ್ದು ಪೂರೈಕೆ ಕಡಿಮೆಯಾಗಿದೆ. ಇದರಿಂದಾಗಿ ದಾಸ್ತಾನಿನಲ್ಲೂ ಏರುಪೇರಾಗಿದ್ದು ಈರುಳ್ಳಿ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ. ಜಿಲ್ಲೆಯಲ್ಲಿ ಕಳೆದ ಒಂದು ವಾರದಲ್ಲಿ ಈರುಳ್ಳಿ ದರ ದುಪ್ಪಟ್ಟಾಗಿದೆ. ವಾರದ ಹಿಂದೆ ಕಿಲೋ ಒಂದಕ್ಕೆ 35 ರೂಪಾಯಿ ಇದ್ದ ಈರುಳ್ಳಿ ಬೆಲೆ ಇಂದು 70 ರೂಪಾಯಿಗೆ ತಲುಪಿದೆ. ಮಾರುಕಟ್ಟೆಯಲ್ಲಿ ಈರುಳ್ಳಿ ಬೇಡಿಕೆ ಜಾಸ್ತಿಯಾಗಿದ್ದು ಈರುಳ್ಳಿ ದರ ಏರಿಕೆಯಾಗುವ ಎಲ್ಲಾ ಸೂಚನೆಗಳು ಕಂಡುಬಂದಿದೆ. ಮುಂದಿನ ದಿನಗಳಲ್ಲಿ ಈರುಳ್ಳಿ ಬೆಲೆ ಶತಕದ ಸನಿಹಕೆ ಬಂದರೂ ಅಚ್ಚರಿಯಿಲ್ಲ. ಇನ್ನೊಂದೆಡೆ ಕರಾವಳಿಗರಿಗೆ ಪ್ರಿಯವಾದ ಕುಚ್ಚಲಕ್ಕಿ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು ಕೆಜಿ ಬೆಲೆ 50 ರೂಪಾಯಿ ಗೆ ತಲುಪಿದೆ.