ಮಂಗಳೂರು(ಕೇರಳ): ಕೇರಳದ ಕಳಮಶ್ಶೇರಿಯಲ್ಲಿರುವ ಕನ್ವೆನ್ಸನ್ ಸೆಂಟರ್‌ನಲ್ಲಿ ಕ್ರಿಶ್ಚಿಯನ್ನರ ಉಪಪಂಗಡವೆನ್ನಲಾಗುವ ಯಹೋವನ ಸಾಕ್ಷಿಗಳ ಪ್ರಾರ್ಥನಾ ಸಭೆಯಲ್ಲಿ ನಡೆದ ಸ್ಫೋಟ ಘಟನೆಗೆ ಸಂಬಂಧಿಸಿದಂತೆ ‘ಬಾಂಬ್ ಇಟ್ಟಿದ್ದು ನಾನೇ’ ಎಂದು ಸ್ಫೋಟದ ಹೊಣೆ ಹೊತ್ತ ವ್ಯಕ್ತಿಯೊಬ್ಬ ಪೊಲೀಸರಿಗೆ ಶರಣಾಗಿರುವುದಾಗಿ ಕೇರಳದ ಮಾಧ್ಯಮಗಳು ವರದಿ ಮಾಡಿದೆ.ಕಳಮಶ್ಶೇರಿಯಲ್ಲಿ ಬಾಂಬ್ ಇಟ್ಟಿದ್ದೇನೆ ಎಂದು ಹೇಳಿಕೊಂಡ ಆತ ಇಂದು ಮಧ್ಯಾಹ್ನ ಒಂದೂವರೆ ಗಂಟೆಗೆ ಪೊಲೀಸ್ ಸ್ಟೇಷನ್ ತಲುಪಿದ್ದಾನೆ ಎಂದು ಮಲಯಾಳಂ ಮಾಧ್ಯಮಗಳು ಹೇಳಿವೆ.
ಘಟನೆ ದೇಶಾದ್ಯಂತ ಚರ್ಚೆಗೆ ಗ್ರಾಸವಾದ ನಡುವೆಯೇ ಕೊಚ್ಚಿ ಮೂಲದ ವ್ಯಕ್ತಿಯೊಬ್ಬ ತ್ರಿಶೂರ್ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾನೆ. ಆತನನ್ನು ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದು, ಸ್ಪೋಟದ ಹಿಂದೆ ಯಾರಿದ್ದಾರೆ ಎಂದು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದಾರೆ. ಶರಣಾದ ವ್ಯಕ್ತಿಯು ಕೊಚ್ಚಿ ಮೂಲದವನೆಂದು ತಿಳಿದುಬಂದಿದೆ. ವಿಚಾರಣೆ ವೇಳೆ ಶರಣಾದ ವ್ಯಕ್ತಿ ಕೊಚ್ಚಿ ಮೂಲದ ಡೊಮಿನಿಕ್ ಮಾರ್ಟಿನ್ (48) ಎಂದು ಗುರುತಿಸಲಾಗಿದೆ ಎಂದು ‘ಮೀಡಿಯಾ ವನ್ ಚಾನೆಲ್’ ವರದಿ ಮಾಡಿದೆ. ಈ ಸುದ್ದಿ ಹೊರಬರುತ್ತಿದ್ದಂತೆಯೇ ಪೊಲೀಸರು ವ್ಯಕ್ತಿಯನ್ನು ಬಿಗಿ ಪೊಲೀಸ್ ಬಂದೋಬಸ್ತ್‌ನೊಂದಿಗೆ ವಿಚಾರಣೆಗಾಗಿ ಬೇರೆಡೆಗೆ ಸ್ಥಳಾಂತರಿಸಿದ್ದಾರೆ ಎನ್ನಲಾಗಿದೆ. ಸ್ಪೋಟಕ್ಕೆ ಬಳಸಿಕೊಳ್ಳಲಾಗಿದೆ ಎನ್ನಲಾದ ನೀಲಿ ಕಾರು ಚೆಂಗನ್ನೂರಿನ ಮಹಿಳೆಯ ಹೆಸರಿನಲ್ಲಿ ನೋಂದಣಿಯಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಪೊಲೀಸರು ಯಾವುದೇ ಅಧಿಕೃತ ಮಾಹಿತಿಯನ್ನು ಹಂಚಿಕೊಂಡಿಲ್ಲ.
ಈ ಎಲ್ಲ ಬೆಳವಣಿಗೆಗಳ ನಡುವೆ ಕಣ್ಣೂರು ರೈಲು ನಿಲ್ದಾಣದಲ್ಲಿ ಪೊಲೀಸರು ತಪಾಸಣೆಯನ್ನು ತೀವ್ರಗೊಳಿಸಿದ್ದು, ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದಿದ್ದಾರೆ. ಬ್ಯಾಗ್ ತಪಾಸಣೆ ವೇಳೆ ಅನುಮಾನಗೊಂಡು ಆತನನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ ಎಂದೂ ವರದಿಯಾಗಿದೆ. ಕೇರಳದ ಕಳಮಶ್ಶೇರಿಯ ಝಮ್ರಾ ಇಂಟರ್‌ನ್ಯಾಷನಲ್ ಕನ್ವೆನ್ಸನ್ ಸೆಂಟರ್‌ನಲ್ಲಿ ಮೂರು ದಿನಗಳ ಯಹೋವನ ಸಾಕ್ಷಿಗಳ ಪ್ರಾರ್ಥನಾ ಸಭೆಯನ್ನು ಆಯೋಜಿಸಲಾಗಿದ್ದು, ಇಂದು ಕೊನೆಯ ದಿನವಾಗಿತ್ತು. ಇಂದು ಸುಮಾರು 2200 ದಷ್ಟು ಜನರು ಸಭೆಯಲ್ಲಿ ಭಾಗವಹಿಸಿದ್ದು ಪ್ರಾರ್ಥನೆ ಆರಂಭಗೊಳ್ಳುತ್ತಿದ್ದಂತೆಯೇ, ಸ್ಫೋಟ ಸಂಭವಿಸಿತ್ತು. ಸ್ಫೋಟದಿಂದಾಗಿ ಓರ್ವ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದು, 40ರಷ್ಟು ಮಂದಿ ಗಾಯಗೊಂಡಿದ್ದಾರೆ. ಮೃತಪಟ್ಟ ಮಹಿಳೆಯ ವಿವರ ಇನ್ನೂ ಲಭ್ಯವಾಗಿಲ್ಲ. ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆ ಸೇರಿದಂತೆ ವಿವಿಧ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಕೇರಳದಲ್ಲಿ ನಡೆದ ಸ್ಪೋಟದ ಹಿನ್ನೆಲೆಯಲ್ಲಿ ಕರ್ನಾಟಕ ಗಡಿ ಭಾಗದಲ್ಲಿ ಸೂಕ್ತ ಭದ್ರತಾ ಕ್ರಮ ಕೈಗೊಳ್ಳಲು ಡಿಜಿ, ಐಜಿ ಯವರಿಗೆ ಸೂಚನೆ ನೀಡಲಾಗಿದೆ. ಅಲ್ಲದೆ ಕೇರಳ ಗಡಿಭಾಗದಲ್ಲಿ ಭದ್ರತೆ, ನಿಗಾ ವಹಿಸಲು ಸೂಚನೆ ನೀಡಲಾಗಿದೆ ಎಂದು ಮಂಗಳೂರಿನಲ್ಲಿ ಗೃಹ ಸಚಿವ ಡಾ.ಜಿ ಪರಮೇಶ್ವರ್ ಹೇಳಿದ್ದಾರೆ.