ಯಹೋವನ ಸಾಕ್ಷಿಗಳು ರಾಷ್ಟ್ರದ್ರೋಹಿಗಳು – ಅವರ ಕಾರ್ಯಕ್ರಮದಲ್ಲಿ ಬಾಂಬ್‌ ಸ್ಪೋಟಿಸಿದ್ದು ನಾನೇ – ಶರಣಾಗತಿಗೆ ಮೊದಲು ಫೇಸ್‌ ಬುಕ್‌ ಲೈವ್ ನಲ್ಲಿ ಆರೋಪಿ ಡೊಮಿನಿಕ್ ಮಾರ್ಟಿನ್‌

ಮಂಗಳೂರು(ತಿರುವನಂತಪುರಂ): ಕೇರಳದ ಕೊಚ್ಚಿಯ ಕಳಮಶ್ಶೇರಿಯಲ್ಲಿ ನಡೆದ ಸ್ಪೋಟಕ್ಕೆ ನಾನೇ ಕಾರಣ ಎಂದು ಡೊಮಿನಿಕ್ ಮಾರ್ಟಿನ್ ಎಂಬಾತ ಪೊಲೀಸರಿಗೆ ಶರಣಾಗಿದ್ದಾನೆ.

ಪೊಲೀಸರಿಗೆ ಶರಣಾಗುವ ಮುನ್ನ ಆತ ಫೇಸ್ಬುಕ್ ಲೈವ್ನಲ್ಲಿ ಈ ಬಗ್ಗೆ ಘೋಷಿಸಿದ್ದು, ಬಾಂಬ್ ಸ್ಪೋಟ ನಡೆಸಿದ ಕಾರಣವನ್ನು ಬಹಿರಂಗಗೊಳಿಸಿದ್ದಾನೆ. ‘ಯಹೋವನ ಸಾಕ್ಷಿಗಳುʼ ಎಂಬ ಕ್ರಿಶ್ಚಿಯನ್ ಪಂಗಡವು ರಾಷ್ಟ್ರ ವಿರೋಧಿ ಕಾರ್ಯದಲ್ಲಿ ತೊಡಗಿದೆ. ನಾನು ಕೂಡಾ ಆ ಪಂಗಡದಲ್ಲಿ ಸಕ್ರಿಯನಾಗಿದ್ದೆ, ಪಂಗಡದ ನಿಲುವಿನಿಂದ ಬೇಸತ್ತು ಅದರ ಸಮಾವೇಶದಲ್ಲಿ ಬಾಂಬ್ ಸ್ಪೋಟಿಸಿದೆ ಎಂದು ಎರ್ನಾಕುಲಂ ಮೂಲದ ಡೊಮಿನಿಕ್ ಮಾರ್ಟಿನ್ ಹೇಳಿದ್ದಾನೆ. ಯಹೋವನ ಸಾಕ್ಷಿಗಳು ನಡೆಸುತ್ತಿದ್ದ ಕಾರ್ಯಕ್ರಮದಲ್ಲಿ ಬಾಂಬ್ ಸ್ಪೋಟಕ್ಕೆ ನಾನೇ ಕಾರಣ. 16 ವರ್ಷಗಳ ಕಾಲ ಈ ಸಂಘಟನೆಯೊಂದಿಗೆ ನಾನು ಗುರುತಿಸಿಕೊಂಡಿದ್ದೆ. ಆದರೆ, ಆರು ವರ್ಷಗಳ ಹಿಂದೆ ನನಗೆ ಈ ಸಂಘಟನೆಯ ಆಶಯಗಳು ತಪ್ಪು ಎಂದು ಮನವರಿಕೆ ಆಗ ತೊಡಗಿತು. ಇದರ ಚಟುವಟಿಕೆ ರಾಷ್ಟ್ರದ್ರೋಹಿಯಾಗಿದೆ, ಹಾಗಾಗಿ, ಅದನ್ನು ಪರಿವರ್ತನೆ ಮಾಡಬೇಕು ಎಂದು ಹಲವು ಬಾರಿ ಅವರೊಂದಿಗೆ ಚರ್ಚಿಸಿದ್ದೆ, ಆದರೆ, ಅವರು ಅದಕ್ಕೆ ತಯಾರಿರಲಿಲ್ಲ ಎಂದು ಮಾರ್ಟಿನ್ ಹೇಳಿದ್ದಾರೆ. ತಾವು ಮಾತ್ರ ಶ್ರೇಷ್ಠ, ಉಳಿದವರೊಂದಿಗೆ ಸೇರಬಾರದು, ಅವರು ಕೊಡುವ ಆಹಾರ ಸೇವಿಸಬಾರದು ಎಂದು ಮಕ್ಕಳಿಗೆ ಕಲಿಸುತ್ತಿದ್ದಾರೆ. ಸಣ್ಣ ಮಕ್ಕಳ ಮೆದುಳಿಗೆ ವಿಷ ಉಣ್ಣಿಸುತ್ತಿದ್ದಾರೆ. ರಾಷ್ಟ್ರಗೀತೆ ಹಾಡಬಾರದು, ಸರ್ಕಾರಿ ಕೆಲಸಗಳು ಮಾಡಬಾರದು ಎಂದು ಮಕ್ಕಳಿಗೆ ಕಲಿಸುತ್ತಿದ್ದಾರೆ. ಅದೆಲ್ಲಾ ನಶಿಸಲ್ಪಟ್ಟ ಜನಾಂಗದ ಕೆಲಸ, ನಾವು ಮಾಡಬಾರದು ಎಂದು ಕಲಿಸಿ, ಸಮಾಜದಲ್ಲಿ ಭಿನ್ನತೆ ಸೃಷ್ಟಿಸುತ್ತಿದ್ದಾರೆ ಎಂದು ಮಾರ್ಟಿನ್ ಆರೋಪಿಸಿದ್ದಾರೆ.

ನಮ್ಮನ್ನು ಬಿಟ್ಟು ಉಳಿದವರೆಲ್ಲರೂ ನಾಶವಾಗುತ್ತಾರೆ ಎಂದು ಇವರು ಮಕ್ಕಳಿಗೆ ಕಲಿಸುತ್ತಿದ್ದಾರೆ. ಕೋಟ್ಯಾಂತರ ಜನರ ನಾಶ ಬಯಸುವ ಇವರನ್ನು ಏನು ಮಾಡಬೇಕು? ಈ ಆಶಯಗಳ ವಿರುದ್ಧ ಪ್ರತಿಕ್ರಿಯಿಸಲೇಬೇಕು ಎಂದು ನಾನು ಭಾವಿಸಿದೆ. ಈ ಸಂಘಟನೆ ರಾಷ್ಟ್ರಕ್ಕೆ ಅಪಾಯಕಾರಿ ಎಂದು ನಾನು ಅರ್ಥ ಮಾಡಿಕೊಂಡ ಕಾರಣ ಈ ತೀರ್ಮಾನ ತೆಗೆದುಕೊಳ್ಳಬೇಕಾಯಿತು ಎಂದು ಅವರು ಹೇಳಿದ್ದಾರೆ. ಧರ್ಮದ ಬಗ್ಗೆ ಭಯ ಇರುವುದರಿಂದ ಇವರ ಬಗ್ಗೆ ಗೊತ್ತಿದ್ದೂ ರಾಜಕಾರಣಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಹಾಗಾಗಿ, ನನ್ನಂತಹ ಸಾಮಾನ್ಯ ಜನರು ಇದಕ್ಕಾಗಿ ಹುಟ್ಟಿ ಬರುತ್ತಾರೆ, ಒಬ್ಬರಾದರೂ ಪ್ರತಿಕ್ರಿಯಿಸದಿದ್ದರೆ, ಅವರಿಗೆ ಅವರ ಆಶಯಗಳು ತಪ್ಪೆಂದು ಅರ್ಥವಾಗುವುದಿಲ್ಲ. ಅದಕ್ಕಾಗಿ ನಾನು ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಪ್ರವಾಹದ ಸಂದರ್ಭದಲ್ಲಿ ಅವರ ಜನರಿಗೆ ಮಾತ್ರ ಅವರು ಸಹಾಯ ಮಾಡಿದ್ದಾರೆ. ನಾನು ಬಹಳ ಯೋಚಿಸಿ ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಈ ಆಶಯವನ್ನು ನಮ್ಮ ದೇಶದಲ್ಲಿ ನಿಲ್ಲಿಸಲೇಬೇಕು. ನಮಗೆ ಅನ್ನ ಕೊಡುವ ಈ ದೇಶದ ಜನರನ್ನು ವೇಶ್ಯಾ ಸಮೂಹ ಎಂದೂ, ನಾಶವಾಗಲಿ ಎಂದೂ ಬಯಸುವುದು ಹಾಗೂ ನಾವು ಮಾತ್ರ ಉತ್ತಮರು ಎನ್ನುವ ನಂಬಿಕೆಯನ್ನು ನಾನು ವಿರೋಧಿಸುತ್ತೇನೆ. ಈ ಸಂಘಟನೆ ಇಲ್ಲಿ ಅಗತ್ಯ ಇಲ್ಲ ಎಂದು ಅವರು ಹೇಳಿದ್ದಾರೆ. ಅಲ್ಲದೆ, ನಾನು ಪೊಲೀಸ್ ಠಾಣೆಗೆ ಹೋಗಿ ಶರಣಾಗುತ್ತೇನೆ. ನನ್ನನ್ನು ಹುಡುಕಿ ಬರಬೇಕಾಗಿಲ್ಲ. ಈ ಬಾಂಬ್ ಸ್ಪೋಟ ಹೇಗೆ ನಡೆಸಿದೆ ಎಂಬುದನ್ನು ಯಾರೂ ಟೆಲಿಕಾಸ್ಟ್ ಮಾಡಬಾರದು. ಅದು ಬಹಳ ಅಪಾಯಕಾರಿ, ಯಾವುದೇ ಟಿವಿ ಚಾನೆಲ್, ಸೋಶಿಯಲ್ ಮೀಡಿಯಾದಲ್ಲಿ ಆ ಬಗ್ಗೆ ಮಾಹಿತಿ ಹಂಚಿಕೊಳ್ಳಬಾರದು ಎಂದು ಆರೋಪಿ ಮನವಿ ಮಾಡಿದ್ದಾನೆ.

ವೀಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here