ಮೃತ ಒಡೆಯನಿಗಾಗಿ 4 ತಿಂಗಳಿಂದ ಆಸ್ಪತ್ರೆ ಶವಾಗಾರದ ಮುಂದೆ ಕಾಯುತ್ತಿರುವ ಶ್ವಾನ-ಟೋಕಿಯೋದ ಹಚಿಕೊ ನಾಯಿಯನ್ನು ಸ್ಮರಿಸಿ ಭಾವುಕರಾದ ಜನರು

ಮಂಗಳೂರು (ಕಣ್ಣೂರು): ಶ್ವಾನವೊಂದು ತನ್ನ ಮೃತ ಯಜಮಾನನಿಗಾಗಿ ಕಳೆದ 4 ತಿಂಗಳಿನಿಂದ ಶವಾಗಾರದ ಎದುರು ಕಾಯುತ್ತಿರುವ ಕರುಣಾಜನಕ ಪ್ರಕರಣ ಕೇರಳದ ಕಣ್ಣೂರು ಜಿಲ್ಲೆಯಿಂದ ವರದಿಯಾಗಿದೆ. ಜಿಲ್ಲಾಸ್ಪತ್ರೆಯ ಮುಂದೆ ಯಜಮಾನನಿಗಾಗಿ ನಾಯಿ ಕಾಯುತ್ತಿರುವ ದೃಶ್ಯ ನೋಡುಗರ ಮನಕಲಕುತ್ತಿದೆ.

‘ನಾಲ್ಕು ತಿಂಗಳ ಹಿಂದೆ ಆಸ್ಪತ್ರೆಗೆ ರೋಗಿಯೊಬ್ಬರು ಬಂದಿದ್ದು, ರೋಗಿಯೊಂದಿಗೆ ನಾಯಿಯೂ ಬಂದಿತ್ತು. ರೋಗಿ ಮೃತಪಟ್ಟಿದ್ದು, ಮಾಲೀಕರನ್ನು ಶವಾಗಾರಕ್ಕೆ ಕರೆದೊಯ್ಯುತ್ತಿರುವುದನ್ನು ನಾಯಿ ನೋಡಿದೆ. ಮಾಲೀಕ ಇನ್ನೂ ಇಲ್ಲಿಯೇ ಇದ್ದಾನೆ ಎಂದು ಭಾವಿಸಿರುವ ಈ ಶ್ವಾನ ಸ್ಥಳವನ್ನು ಬಿಟ್ಟು ಕದಲುತ್ತಿಲ್ಲ. ಕಳೆದ ನಾಲ್ಕು ತಿಂಗಳಿನಿಂದ ಶವಾಗಾರದ ಬಳಿಯಲ್ಲಿ ತನ್ನ ಒಡೆಯನಿಗಾಗಿ ನಾಯಿ ಇಲ್ಲಿಯೇ ಕಾಯುತ್ತಿದೆ ನಿಯತ್ತಿನ ನಾಯಿ ಈಗ ಇಲ್ಲಿಯೇ ವಾಸಿಸುತ್ತಿದೆ. ಯಾರಿಗೂ ತೊಂದರೆ ಕೊಟ್ಟಿಲ್ಲʼ ಎಂದು ಜಿಲ್ಲಾಸ್ಪತ್ರೆಯ ಸಿಬ್ಬಂದಿ ವಿಕಾಸ್ ಕುಮಾರ್ ಭಾವುಕರಾಗಿ ಹೇಳಿದ್ದಾರೆ.

ತನ್ನ ಯಜಮಾನನಿಗಾಗಿ ನಾಯಿಯು ಟೋಕಿಯೊದಲ್ಲಿನ ಶಿಬುಯಾ ನಿಲ್ದಾಣದ ಹೊರಗೆ ಕಾಯುತ್ತಿದ್ದ ಹಚಿಕೊ ಎಂಬ ನಾಯಿಯ ಕಥೆಯನ್ನು ಇದು ಹೋಲುತ್ತದೆ. ಟೋಕಿಯೊದ ಶಿಬುಯಾ ನಿಲ್ದಾಣದ ಹೊರಗೆ ತನ್ನ ಯಜಮಾನ ಮೃತಪಟ್ಟ ನಂತರವೂ ಅವನಿಗಾಗಿ ಕಾಯುತ್ತಿದ್ದ ಹಚಿಕೊ ನಾಯಿ, ಪ್ರಪಂಚದಾದ್ಯಂತದ ಜನರ ಹೃದಯವನ್ನು ಸೆಳೆದಿತ್ತು.

 

LEAVE A REPLY

Please enter your comment!
Please enter your name here