ಬಂಡೀಪುರ ರಕ್ಷಿತಾರಣ್ಯದ ಮದ್ದೂರು ವಲಯದಲ್ಲಿ ಕಡವೆ ಬೇಟೆ- ಅರಣ್ಯ ಸಿಬ್ಬಂದಿ ಮತ್ತು ಬೇಟೆಗಾರರ ತಂಡದ ನಡುವೆ ಗುಂಡಿನ ಚಕಮಕಿ-ಓರ್ವ ಬೇಟೆಗಾರ ಗುಂಡಿಗೆ ಬಲಿ

ಮಂಗಳೂರು(ಬಂಡೀಪುರ): ಬಂಡೀಪುರ ಹುಲಿಸಂರಕ್ಷಿತ ಪ್ರದೇಶದ ಮದ್ದೂರು ವಲಯದಲ್ಲಿ ನ.4ರ ತಡರಾತ್ರಿ ಕಡವೆ ಬೇಟೆಯಾಡಿದ ತಂಡ ಹಾಗೂ ಅರಣ್ಯ ಸಿಬ್ಬಂದಿ ನಡುವೆ ಗುಂಡಿನ ಚಕಮಕಿ ನಡೆದಿದೆ. ಬೇಟೆಗಾರರ ತಂಡದಲ್ಲಿದ್ದ ಯುವಕನೊಬ್ಬ ಮೃತಪಟ್ಟಿದ್ದು, ಆತನನ್ನು ಗುಂಡ್ಲುಪೇಟೆ ತಾಲೂಕಿನ ಭೀಮನಬೀಡು ನಿವಾಸಿ ಮನು (27) ಎಂದು ಗುರುತಿಸಲಾಗಿದೆ.

ಬಂದೂಕು ಹಾಗೂ ಇತರೆ ಶಸ್ತ್ರಾಸ್ತ್ರ ಹೊಂದಿದ್ದ 10 ಮಂದಿಯ ತಂಡ ಕಡವೆಯನ್ನು ಗುಂಡಿಕ್ಕಿ ಬೇಟೆಯಾಡಿದೆ. ಕಾರ್ಯಾಚರಣೆ ಆರಂಭಿಸಿದ ಗಸ್ತಿನಲ್ಲಿದ್ದ ಅರಣ್ಯ ಸಿಬ್ಬಂದಿ ಹಾಗೂ ಕಳ್ಳಬೇಟೆ ತಡೆ ಶಿಬಿರದ ಸಿಬ್ಬಂದಿ, ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಿದ್ದಾರೆ. ಆದರೆ ಬೇಟೆಗಾರರು ಸಿಬ್ಬಂದಿಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಆತ್ಮರಕ್ಷಣೆಗಾಗಿ ಸಿಬ್ಬಂದಿ ಪ್ರತಿದಾಳಿ ನಡೆಸಿದ್ದು ಬೇಟೆಗಾರರ ತಂಡದಲ್ಲಿದ್ದ ಮನು ಎಂಬಾತನಿಗೆ ಗುಂಡು ತಗುಲಿದೆ. ಉಳಿದ ಬೇಟೆಗಾರರು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಎಸ್.ಪಿ ಪದ್ಮಿನಿ ಸಾಹು ಹಾಗೂ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 120 ಕೆಜಿ ಕಡವೆ ಮಾಂಸ, ಒಂದು ಸಿಂಗಲ್ ಬ್ಯಾರೆಲ್ ಗನ್ ಇತರೆ ಆಯುಧಗಳನ್ನು ವಶಕ್ಕೆ ಪಡೆಯಲಾಗಿದ್ದು, ಪರಾರಿಯಾದವರ ಬಂಧನಕ್ಕೆ ಬಲೆ ಬೀಸಲಾಗಿದೆ.

LEAVE A REPLY

Please enter your comment!
Please enter your name here