ಮಂಗಳೂರು(ಮೂಡುಬಿದಿರೆ): ಕಂಬಳದಲ್ಲಿ ಕೋಣಗಳನ್ನು ಕರೆಗೆ ಇಳಿಸುವಾಗ ಸಮಯದ ಶಿಸ್ತು ಕಾಪಾಡಲು ಈ ವರ್ಷದಿಂದ ಸೈರನ್ ಮೊಳಗಿಸಿ ಎಚ್ಚರಿಸುವ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಶೆಟ್ಟಿ ಬೆಳಪು ಹೇಳಿದ್ದಾರೆ.
ಜಿಲ್ಲಾ ಕಂಬಳ ಸಮಿತಿ ಮೂಡಬಿದ್ರಿಯಲ್ಲಿ ಏರ್ಪಡಿಸಿದ್ದ ತೀರ್ಪುಗಾರರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರಕಾರದ ಮಾರ್ಗಸೂಚಿಯಂತೆ ಕಂಬಳವನ್ನು ಶಿಸ್ತುಬದ್ಧವಾಗಿ ನಡೆಸಿ 24 ಗಂಟೆಯೊಳಗೆ ಮುಗಿಸಲು ಕೆಲವು ನಿರ್ದೇಶನಗಳನ್ನು ರೂಪಿಸಲಾಗಿದೆ. ಸೈರನ್ ಮೊಳಗಿದ ಬಳಿಕ ಕೋಣಗಳನ್ನು ಕರೆಗಿಳಿಸದಿದ್ದಲ್ಲಿ ಮುಂದಿನ ಕೋಣಗಳಿಗೆ ಅವಕಾಶ ಕಲ್ಪಿಸಲಾಗುವುದು, ಟಿವಿ ತೀರ್ಪುಗಾರರು, ಸ್ಕೈ ವ್ಯೂವ್ ವ್ಯವಸ್ಥೆಯಲ್ಲೂ ಬದಲಾವಣೆಗಳಾಗಲಿವೆ ಎಂದು ಹೇಳಿದರು. ನ. 11ರಂದು ಕಾರ್ಕಳದ ಮಿಯ್ನಾರಿನಲ್ಲಿ ನಡೆಯುವ ಪ್ರಾಯೋಗಿಕ ಕಂಬಳದಲ್ಲಿ ಹೊಸ ಮಾರ್ಗಸೂಚಿಗಳ ಪಾಲನೆ ಮಾಡಲಾಗುವುದು ಎಂದು ಹೇಳಿದರು.
ತೀರ್ಪುಗಾರರು ಯಾರದೇ ಒತ್ತಡಕ್ಕೆ ಒಳಗಾಗದೆ, ಕಾರ್ಯನಿರ್ವಹಿಸುವ ಕುರಿತು ಸೂಕ್ತ ಮಾರ್ಗಸೂಚಿ ರೂಪಿಸಲಾಗಿದೆ. ತೀರ್ಪುಗಾರರು ಸಮಯಕ್ಕೆ ಸರಿಯಾಗಿ ಬಂದು ಕೊನೆಯವರೆಗೂ ಹಾಜರಿರಬೇಕು. ಕಂಬಳದಲ್ಲಿ ಯಾವುದೇ ಸಮಸ್ಯೆಗಳು ಬಂದಲ್ಲಿ ಗೌರವಾಧ್ಯಕ್ಷ ಎರ್ಮಾಳು ರೋಹಿತ್ ಹೆಗ್ಡೆ ನೇತೃತ್ವದ ಶಿಸ್ತು ಸಮಿತಿ ಪರಿಶೀಲನೆ ನಡೆಸಿ ಬಗೆಹರಿಸಲಿದೆ ಎಂದು ಹೇಳಿದರು. ಜಿಲ್ಲಾ ಕಂಬಳ ಸಮಿತಿ ಕಾರ್ಯಾಧ್ಯಕ್ಷ ಗುಣಪಾಲ ಕಡಂಬ ಮಾತನಾಡಿ, ಕಂಬಳದ ಇತಿಹಾಸದಲ್ಲೇ ಮೊದಲ ಬಾರಿ ಬೆಂಗಳೂರಿನಲ್ಲಿ ನಡೆಯಲಿರುವ ಕಂಬಳದ ಸಕಲ ಸಿದ್ಧತೆಗಳು ನಡೆಯುತ್ತಿದೆ. ಅಲ್ಲಿ ಕರೆ, ನೀರು, ನೆರಳು ಸೇರಿದಂತೆ ಸಮಯದ ಶಿಸ್ತಿಗೆ ಆದ್ಯತೆ ನೀಡಲಾಗುವುದು. ಕನ್ನಡ ಮತ್ತು ತುಳು ಭಾಷೆಯಲ್ಲಿ ವೀಕ್ಷಕ ವಿವರಣೆ ನೀಡಲಾಗುವುದು ಎಂದು ತಿಳಿಸಿದರು.
ಕಂಬಳ ಸಮಿತಿ ಮಾಜಿ ಅಧ್ಯಕ್ಷ ಎರ್ಮಾಳು ರೋಹಿತ್ ಹೆಗ್ಡೆ, ಪಿ.ಆರ್. ಶೆಟ್ಟಿ, ಕೋಶಾಧಿಕಾರಿ ಚಂದ್ರಹಾಸ ಸನಿಲ್, ಪ್ರಧಾನ ಕಾರ್ಯದರ್ಶಿ ಮುಚ್ಚಾರು ಕಲ್ಕುಡೆ ಲೋಕೇಶ್ ಶೆಟ್ಟಿ, ತೀರ್ಪುಗಾರರ ಸಂಚಾಲಕ ವಿಜಯಕುಮಾರ್ ಕಂಗಿನ ಮನೆ, ಪ್ರಮುಖರಾದ ಶ್ರೀಕಾಂತ ಭಟ್, ಗಿರೀಶ್ ಆಳ್ವ, ಅರುಣ್ ಭಟ್ ಉಪಸ್ಥಿತರಿದ್ದರು.