ಕೆಇಎ ಪರೀಕ್ಷೆಯ ಅಕ್ರಮದ ಪ್ರಮುಖ ಆರೋಪಿಗೆ ಸರಕಾರದ ಪ್ರಮುಖರ ಬೆಂಬಲ-ಬಿ.ವೈ ವಿಜಯೆಂದ್ರ ಆರೋಪ

ಮಂಗಳೂರು(ಕಲಬುರಗಿ): ‘ಕೆಇಎ ನೇಮಕಾತಿ ಪರೀಕ್ಷೆಯ ಬ್ಲೂಟೂತ್ ಅಕ್ರಮದಲ್ಲಿ ಪ್ರಮುಖ ಆರೋಪಿ ಆರ್.ಡಿ. ಪಾಟೀಲ ಇರುವ ಬಗ್ಗೆ ಐಪಿಎಸ್ ಅಧಿಕಾರಿ ಮಾಹಿತಿ ಕೊಟ್ಟರೂ ಆತನನ್ನು ಹಿಡಿಯಲು ಸಾಧ್ಯವಾಗಿಲ್ಲ. ಕಣ್ಣಿಗೆ ಕಾಣದ ಶಕ್ತಿ ಇದರ ಹಿಂದೆ ಕೆಲಸ ಮಾಡುತ್ತಿದೆ. ಸರಕಾರದ ಪ್ರಮುಖ ಹುದ್ದೆಯಲ್ಲಿ ಇರುವವರೇ ಆರ್.ಡಿ. ಪಾಟೀಲ್ ಗೆ ಬೆಂಬಲ ಕೊಡುತ್ತಿದ್ದಾರೆ’ ಎಂದು ಬಿಜೆಪಿ ಶಾಸಕ ಬಿ.ವೈ. ವಿಜಯೇಂದ್ರ ಆರೋಪಿಸಿದ್ದಾರೆ.

ನಗರದಲ್ಲಿ ನ.7ರಂದು ಮಾಧ್ಯಮಗಳ ಜತೆ ಮಾತನಾಡಿದ ಅವರು, ‘ಬಿಜೆಪಿ ಸರಕಾರ ಇದ್ದಾಗ ಕಾಂಗ್ರೆಸಿಗರು ನಾನಾ ಆರೋಪ ಮಾಡಿದ್ದರು. ಈಗಿನ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಬಿಜೆಪಿ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಿದ್ದರು. ಆರ್.ಡಿ. ಪಾಟೀಲ್ ಸೇರಿ ಇಡೀ ಅವರ ತಂಡ ಕಾಂಗ್ರೆಸ್‌ನ ಕೈಗೊಂಬೆಯಂತೆ ಕೆಲಸ ಮಾಡುತ್ತಿದ್ದಾರೆ. ಈಗ ಅಕ್ರಮದ ಮತ್ತೊಂದು ಕೃತ್ಯ ನಡೆಸಿದ್ದಾರೆ. ಆರ್.ಡಿ. ಪಾಟೀಲ್ ತಪ್ಪಿಸಿಕೊಳ್ಳುವ ಪಿತೂರಿಗೆ ಸಚಿವರು ಸಹಕಾರ ಕೊಡುತ್ತಿದಾರೆ’ ಎಂದು ಗಂಭೀರ ಆಪಾದನೆ ಮಾಡಿದರು.

”ಇಡೀ ಕಾಂಗ್ರೆಸ್‌ ಸರಕಾರ ಇಂತಹ ವ್ಯಕ್ತಿಗಳಿಗೆ ಬೆನ್ನೆಲುಬಾಗಿ ನಿಂತು ಶಕ್ತಿ ತುಂಬುತ್ತಿದ್ದಾರೆ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಆರ್.ಡಿ. ಪಾಟೀಲ್ ಸಾಮಾನ್ಯ ವ್ಯಕ್ತಿಯಲ್ಲ. ಆತನಿಗೆ ಆಡಳಿತ ಪಕ್ಷದ ಘಟಾನುಘಟಿ ನಾಯಕರ ಸಂಪರ್ಕ ಇದೆ. ಅವರ ಬೆಂಬಲವೂ ಇದೆ. ಇವತ್ತು ತಪ್ಪಿಸಿಕೊಂಡು ಹೋಗುವ ಪರಿಸ್ಥಿತಿ ಉದ್ಭವಿಸಿದ್ದು, ಪೊಲೀಸ್ ಅಧಿಕಾರಿಗಳಿಗೆ ಕಿಮ್ಮತ್ತು ಇಲ್ಲದಂತೆ ಆಗಿದೆ” ಎಂದು ಟೀಕಿಸಿದರು.

”ಪೊಲೀಸರ ತನಿಖೆಯಿಂದ ಸತ್ಯ ಗೊತ್ತಾಗುತ್ತದೆ. ನ್ಯಾಯ ಸಿಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಖಂಡಿತವಾಗಿ ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲೇಬೇಕು. ಇಲ್ಲದೆ ಇದ್ದರೆ ಪ್ರತಿ ಬಾರಿ ಈ ರೀತಿ ಪ್ರಕರಣಗಳು ಮಾಡುತ್ತಲೇ ಇರುತ್ತಾನೆ, ಸರಕಾರವೂ ಬೆಂಬಲ ಕೊಡುತ್ತಲೇ ಇರುತ್ತದೆ” ಎಂದು ದೂರಿದರು.

LEAVE A REPLY

Please enter your comment!
Please enter your name here