ಕಲ್ಲೇಗ ಟೈಗರ್ಸ್ ನ ರಿಂಗ್‌ ಮಾಸ್ಟರ್ ಅಕ್ಷಯ್ ಕಲ್ಲೇಗ ಹತ್ಯೆ-ಬೈಕ್ ಅಪಘಾತ 2,000 ರೂ. ಪರಿಹಾರದ ವಿಚಾರದಲ್ಲಿ ವಾಗ್ವಾದ,ಹೊಡೆದಾಟ-ತಲ್ವಾರ್‌ನಿಂದ ಹಲ್ಲೆ-ಸ್ನೇಹಿತ, ಪರಿಚಿತರಿಂದ ಕೃತ್ಯ-ನಾಲ್ವರು ಆರೋಪಿಗಳ ಬಂಧನ-ಇಲ್ಲಿದೆ ಹತ್ಯೆಯ ಕಂಪ್ಲೀಟ್‌ ಸ್ಟೋರಿ

ನ.6ರಂದು ರಾತ್ರಿ ನೆಹರೂ ನಗರದಲ್ಲಿ ಕೃತ್ಯ
ಪಾದಚಾರಿ ವಿದ್ಯಾರ್ಥಿಗೆ ಬೈಕ್ ಅಪಘಾತ-ಪರಿಹಾರ ವಿಚಾರದಲ್ಲಿ ದೂರವಾಣಿಯಲ್ಲಿ ಚಕಮಕಿ
ಅಕ್ಷಯ್ ಆಹ್ವಾನದಂತೆ ಮಾತುಕತೆಗೆಂದು ಕಲ್ಲೇಗಕ್ಕೆ ಬಂದಿದ್ದ ಆರೋಪಿಗಳು
ತಲವಾರ್ ದಾಳಿ-ಜೊತೆಗಿದ್ದ ಇಬ್ಬರು ಓಡಿ ತಪ್ಪಿಸಿಕೊಂಡರು
ಅಕ್ಷಯ್ ಪ್ರಾಣ ಭಯದಲ್ಲಿ ಓಡಿದರೂ ಅಟ್ಟಾಡಿಸಿಕೊಂಡು ಬಂದ ಹಂತಕರು
ಕೃತ್ಯದ ಬಳಿಕ ಇಬ್ಬರು ಪೊಲೀಸರಿಗೆ ಶರಣು-ಮತ್ತಿಬ್ಬರ ಬಂಧನ

ಗೆಳೆಯರಿಂದಲೇ ಕೊಲೆ ಆಗಿರುವುದು ಖೇದಕರ -ಶಾಸಕ ಅಶೋಕ್ ರೈ
ಸರಕಾರದ ಪರೋಕ್ಷ ವೈಫಲ್ಯದಿಂದ ಅಹಿತಕರ ಕೃತ್ಯ-ಮಠಂದೂರು

ಡೆಲ್ಲಿ ಟೂರ್‌ಗೆ ತೆರಳಿ ದಿನದ ಹಿಂದೆಯಷ್ಟೆ ಬಂದಿದ್ದರು :ಹಿಟಾಚಿ ಖರೀದಿಸಲು ಸ್ನೇಹಿತರೊಂದಿಗೆ ಚರ್ಚಿಸಿದ್ದರು
ಪಿಲಿರಂಗ್ ಸೀಸನ್-2 ಮತ್ತು ಪಿಲಿಗೊಬ್ಬು ಎರಡರಲ್ಲಿಯೂ ಪ್ರಶಸ್ತಿ ಪಡೆದ ಸಂಭ್ರಮದಲ್ಲಿದ್ದ ಅಕ್ಷಯ್ ಅವರು ಕೆಲ ದಿನಗಳ ಹಿಂದೆ ಡೆಲ್ಲಿ ಪ್ರವಾಸ ಕೈಗೊಂಡಿದ್ದರು.ನ.5ರಂದು ದೆಹಲಿಯಿಂದ ಹಿಂತಿರುಗಿದ್ದ ಇವರು ಮುಂದೆ ಜೀವನೋಪಾಯಕ್ಕೆ ಹಿಟಾಚಿ ಖರೀದಿಸಿ ಕೆಲಸ ಮಾಡಿಸುವ ಕುರಿತು ಸ್ನೇಹಿತರೊಂದಿಗೆ ಚರ್ಚೆ ನಡೆಸಿದ್ದರು.ಮಾತ್ರವಲ್ಲದೆ ಹಿಟಾಚಿ ಖರೀದಿ ಕುರಿತು ನ.7ರಂದು ಬ್ಯಾಂಕಿಂಗ್ ವ್ಯವಹಾರ ನಡೆಸಲೆಂದು ಪಾಸ್‌ಪೋರ್ಟ್ ಅಳತೆಯ ತನ್ನ ಭಾವಚಿತ್ರವನ್ನೂ ರೆಡಿ ಮಾಡಿಸಿಟ್ಟುಕೊಂಡಿದ್ದರು.ಆದರೆ ವಿಧಿಯಾಟವೇ ಬೇರೆಯಾಗಿತ್ತು.

ಪುತ್ತೂರು: ಜನಪ್ರಿಯ ಹುಲಿವೇಷ ಕುಣಿತ ತಂಡವಾಗಿ ಗುರುತಿಸಿಕೊಂಡಿದ್ದ ಕಲ್ಲೇಗ ಟೈಗರ್ಸ್ ತಂಡದ ಮುಖ್ಯಸ್ಥ ಅಕ್ಷಯ್ ಕಲ್ಲೇಗ(24ವ.)ಅವರು ಇಬ್ಬರು ಸ್ನೇಹಿತರ ಸಹಿತ ಪರಿಚಿತರಿಂದಲೇ ದಾರುಣವಾಗಿ ಕೊಲೆಯಾದ ಘಟನೆ ನ.6ರಂದು ರಾತ್ರಿ ನೆಹರೂನಗರದಲ್ಲಿ ನಡೆದಿದೆ.ನಾಲ್ವರು ಸೇರಿ ಈ ಕೃತ್ಯ ಎಸಗಿದ್ದು ಎಲ್ಲ ಆರೋಪಿಗಳನ್ನೂ ಪೊಲೀಸರು ಬಂಧಿಸಿದ್ದಾರೆ.ಈ ಪೈಕಿ ಇಬ್ಬರು ಘಟನೆ ಬಳಿಕ ಪೊಲೀಸರಿಗೆ ಶರಣಾಗಿದ್ದರು.

ಬೈಕ್ ಅಪಘಾತದಿಂದ ಗಾಯಗೊಂಡಿದ್ದ ಪಾದಚಾರಿ ಕಾಲೇಜ್ ವಿದ್ಯಾರ್ಥಿಯೊಬ್ಬರಿಗೆ 2 ಸಾವಿರ ರೂ. ಪರಿಹಾರ ನೀಡುವ ವಿಚಾರದಲ್ಲಿ ದೂರವಾಣಿ ಸಂಭಾಷಣೆ ವೇಳೆ ಆರಂಭಗೊಂಡ ವಾಗ್ವಾದ ಕೊಲೆಯೊಂದಿಗೆ ಅಂತ್ಯ ಕಂಡಿದೆ.ಈ ಹಿಂದೆ ಪುತ್ತೂರುನಲ್ಲಿ ಸಿಪಿಸಿ ಪೆಟ್ರೋಲ್ ಪಂಪ್‌ನಲ್ಲಿ ಸಿಬ್ಬಂದಿಯಾಗಿದ್ದ ಕಬಕ ಗ್ರಾಮದ ಕಲ್ಲೇಗ ಶೇವಿರೆ ನಿವಾಸಿ, ಪ್ರಸ್ತುತ ಕಲ್ಲೇಗ ದೈವಸ್ಥಾನದ ಚಾಕ್ರಿಯವರಾಗಿರುವ ಚಂದ್ರಶೇಖರ್ ಗೌಡ ಅವರ ಪುತ್ರ, ಪ್ರತಿಷ್ಠಿತ ಕಲ್ಲೇಗ ಟೈಗರ್ಸ್ ತಂಡದ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಕೊಲೆಯಾದವರು.ನ.6ರ ರಾತ್ರಿ 11.35ರ ಸುಮಾರಿಗೆ ಅಕ್ಷಯ್ ಕಲ್ಲೇಗ ಅವರನ್ನು ನೆಹರುನಗರ ಜಂಕ್ಷನ್‌ನಲ್ಲಿ ಮಾರಕಾಸ್ತçಗಳಿಂದ ಕಡಿದು ಹತ್ಯೆ ಮಾಡಲಾಗಿದೆ. ಪಡೀಲು ನಿವಾಸಿ ಮನೀಶ್, ಖಾಸಗಿ ಬಸ್ ಚಾಲಕನಾಗಿದ್ದ ಬನ್ನೂರು ಕೃಷ್ಣನಗರ ನಿವಾಸಿ ಚೇತನ್, ಬನ್ನೂರು ನಿವಾಸಿ ಮಂಜುನಾಥ್ ಯಾನೆ ಹರಿ ಮತ್ತು ಬ್ಲಾಕ್ ಕಾಂಗ್ರೆಸ್ ಎಸ್‌ಸಿ ಘಟಕದ ಅಧ್ಯಕ್ಷ ಕೇಶವ ಪಡೀಲ್ ಎಂಬವರು ಆರೋಪಿಗಳಾಗಿದ್ದು ನಾಲ್ವರನ್ನೂ ಪೊಲೀಸರು ಬಂಧಿಸಿದ್ದಾರೆ.ಆರೋಪಿಗಳ ಪೈಕಿ ಮನೀಶ್ ಮತ್ತು ಚೇತನ್ ಕೃತ್ಯ ನಡೆದ ಬಳಿಕ ನೇರವಾಗಿ ಪೊಲೀಸ್ ಠಾಣೆಗೆ ಶರಣಾಗಿದ್ದರು.ಅವರು ನೀಡಿದ ಮಾಹಿತಿಯಾಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಇನ್ನಿಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಕೊಲೆಯಾದ ಸ್ಥಳಕ್ಕೆ ಡಿವೈಎಸ್ಪಿ ಡಾ.ಗಾನ ಪಿ ಕುಮಾರ್ ಸಹಿತ ಪೊಲೀಸರು ರಾತ್ರಿಯೇ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಭೇಟಿ ನೀಡಿ ಮಹಜರು ನಡೆಸಿದ ಬಳಿಕ ಮೃತ ದೇಹವನ್ನು ದೇರಳಕಟ್ಟೆ ಆಸ್ಪತ್ರೆಗೆ ಕೊಂಡೊಯ್ದು ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಶೇವಿರೆ ಮನೆಗೆ ತಂದು ಅಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು.

ಘಟನೆ ವಿವರ: ಖಾಸಗಿ ಬಸ್ ಆನಂದ್‌ನ ನಿರ್ವಾಹಕ ಶಿವಪ್ರಸಾದ್ ಎಂಬವರು ನ.6ರಂದು ಸಂಜೆ ಮಂಗಳೂರು ಕಡೆಯಿಂದ ಪುತ್ತೂರು ಕಡೆಗೆ ಚಲಾಯಿಸಿಕೊಂಡು ಬರುತ್ತಿದ್ದ ಬೈಕ್ ವಿವೇಕಾನಂದ ಕಾಲೇಜು ವಿದ್ಯಾರ್ಥಿ, ಕೇರಳ ಮೂಲದವರಾಗಿದ್ದು ಪಿಜಿಯಲ್ಲಿರುವ ವಿನ್ಯಾಸ್ ಎಂಬವರಿಗೆ ಡಿಕ್ಕಿಯಾಗಿತ್ತು.ಇದರಿಂದಾಗಿ ವಿನ್ಯಾಸ್ ಅವರಿಗೆ ಗಾಯವಾಗಿತ್ತು.ಅವರನ್ನು ಅಕ್ಷಯ್ ಕಲ್ಲೇಗ ಮತ್ತು ಅವರ ಸ್ನೇಹಿತರು ಪುತ್ತೂರು ಮಹಾವೀರ ಆಸ್ಪತ್ರೆಗೆ ದಾಖಲಿಸಿದ್ದರು.ಅಲ್ಲಿ ಚಿಕಿತ್ಸೆ ಕೊಡಿಸಿದ ಬಳಿಕ, ಅಪಘಾತ ಎಸಗಿದ ಬೈಕ್ ಸವಾರ ಶಿವಪ್ರಸಾದ್ ಅವರಿಗೆ ಅಕ್ಷಯ್ ಕಲ್ಲೇಗ ಅವರು ಕರೆ ಮಾಡಿ ಗಾಯಾಳುವಿನ ಚಿಕಿತ್ಸಾ ಖರ್ಚು ಭರಿಸಲು ರೂ.2 ಸಾವಿರ ನೀಡುವಂತೆ ತಿಳಿಸಿದರು.ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಶಿವಪ್ರಸಾದ್ 2 ಸಾವಿರ ರೂ.ನೀಡಲು ನಿರಾಕರಿಸಿದ್ದರಲ್ಲದೆ ಕೇಸು ಮಾಡುವ ಎಂದು ಹೇಳಿದರು.ಇಂತಹ ಸಣ್ಣ ಸಣ್ಣ ವಿಚಾರಕ್ಕೆಲ್ಲ ಕೇಸು ಮಾಡುವ ಬದಲು ಚಿಕಿತ್ಸಾ ವೆಚ್ಚ ನೀಡಿ ಮುಗಿಸಿಕೊಳ್ಳಿ ಎಂದು ಅಕ್ಷಯ್ ಅವರು ಶಿವಪ್ರಸಾದ್ ಅವರಿಗೆ ತಿಳಿಸಿದರು.ಆದರೆ ಶಿವಪ್ರಸಾದ್ ಅದಕ್ಕೆ ಒಪ್ಪಿಕೊಂಡಿರಲಿಲ್ಲ.ಅವರು ಅಪಘಾತ ವಿಚಾರವನ್ನು ಅವರ ಸ್ನೇಹಿತನಾಗಿರುವ ಖಾಸಗಿ ಬಸ್ ಸೇಫ್ ವೇ ಚಾಲಕ ಚೇತನ್ ಕುಮಾರ್ ಯಾನೆ ಚೇತು ಅವರಿಗೆ ತಿಳಿಸಿದರು.ಹಣ ಕೊಡುವುದು ಬೇಡ.ಕೇಸ್ ಮಾಡಲಿ ಎಂದು ಚೇತನ್ ಕುಮಾರ್ ಯಾನೆ ಚೇತು ಅವರೂ ಅಕ್ಷಯ್ ಅವರಿಗೆ ಕರೆ ಮಾಡಿ ತಿಳಿಸಿದ ವೇಳೆ ಅವರಿಬ್ಬರ ಮಧ್ಯೆ ದೂರವಾಣಿ ಮಾತುಕತೆ ವೇಳೆಯೇ ಮಾತಿನ ಚಕಮಕಿ ನಡೆದಿದೆ.ಈ ಸಂದರ್ಭ ಅಕ್ಷಯ್ ಅವರು, ರಾತ್ರಿ ವೇಳೆ ಫೋನ್‌ನಲ್ಲಿ ಮಾತನಾಡುವುದಕ್ಕಿಂತ ದಂ ಇದ್ದರೆ ಕಲ್ಲೇಗಕ್ಕೆ ಬಂದು ಮಾತನಾಡಿ ಎಂದಿದ್ದರು. ಇದರಿಂದ ಆಕ್ರೋಶಗೊಂಡ ಚೇತನ್ ಕುಮಾರ್ ಯಾನೆ ಚೇತು ಅವರು ತನ್ನ ಸ್ನೇಹಿತ, ಅಕ್ಷಯ್ ಅವರ ಸ್ನೇಹಿತನೂ ಆಗಿರುವ ಪಡೀಲ್‌ನಲ್ಲಿ ಸೆಕೆಂಡ್ ಹ್ಯಾಂಡ್ ಕಾರುಗಳ ಮಾರಾಟ ವ್ಯವಹಾರ ಮಾಡುತ್ತಿರುವ ಮನೀಶ್ ಪಡೀಲ್, ಎಲೆಕ್ರ್ಟಿಷನ್‌ ಆಗಿರುವ ಮಂಜುನಾಥ್ ಯಾನೆ ಹರಿ ಮತ್ತು ಕಾಂಗ್ರೆಸ್ ಮುಖಂಡ ಕೇಶವ ಪಡೀಲ್ ಅವರನ್ನು ಸೇರಿಸಿಕೊಂಡು ಕಲ್ಲೇಗಕ್ಕೆ ಬಂದರು.ಈ ಸಂದರ್ಭ ಅಕ್ಷಯ್ ಕಲ್ಲೇಗರವರು ಸ್ನೇಹಿತ ವಿಖ್ಯಾತ್ ಮತ್ತು ಅಲ್ತಾಫ್ ಅವರೊಂದಿಗೆ ಅವರು ರಾತ್ರಿ ವೇಳೆ ಮಾಮೂಲಿ ಸೇರುವ ನೆಹರುನಗರ ಕಾಲೇಜಿಗೆ ಹೋಗುವ ರಸ್ತೆ ಬದಿಯ ಎಟಿಎಂ ಪಕ್ಕ ನಿಂತಿದ್ದರು.

ಮತ್ತೆ ತಗಾದೆ ತೆಗೆದರು: ಅಲ್ಲಿಗೆ ಬಂದ ಚೇತನ್ ಕುಮಾರ್ ಯಾನೆ ಚೇತು ಬೈಕ್ ಅಪಘಾತದ ವಿಚಾರದಲ್ಲಿ ಅಕ್ಷಯ್ ಅವರೊಂದಿಗೆ ತಗಾದೆ ಎತ್ತಿ ಮಾತನಾಡುತ್ತಿದ್ದಾಗ ಅವರೊಳಗೆ ವಾಗ್ವಾದ ನಡೆದು ಪರಸ್ಪರ ಹೊಡೆದಾಟ ನಡೆದಿತ್ತು. ಸ್ನೇಹಿತರಾಗಿದ್ದ ಅಕ್ಷಯ್ ಮತ್ತು ಮನೀಷ್ ನಡುವೆಯೂ ಚರ್ಚೆ, ಚಕಮಕಿ ನಡೆದಿತ್ತು. ಈ ವೇಳೆ ಚೇತನ್ ಕುಮಾರ್ ಯಾನೆ ಚೇತು ಅವರು ತಾವು ಬಂದಿದ್ದ ಕಾರಿನೊಳಗಿನಿಂದ ತಲವಾರು ತೆಗೆದು ಅಕ್ಷಯ್ ಕಲ್ಲೇಗ ಅವರಿಗೆ ಬೀಸಿದರು.ಈ ವೇಳೆ ಅಕ್ಷಯ್ ಜೊತೆಗಿದ್ದ ವಿಖ್ಯಾತ್ ಅಡ್ಡ ಬಂದಾಗ ಅವರಿಗೂ ತಲವಾರಿನ ಪೆಟ್ಟು ಸಿಕ್ಕಿದಾಗ ಅವರು ಮತ್ತು ಜೊತೆಗಿದ್ದ ಅಲ್ತಾಫ್ ಅಲ್ಲಿಂದ ಓಡಿ ತಪ್ಪಿಸಿಕೊಂಡರು.

ಅಕ್ಷಯ್‌ರವರ ಬೈಕ್ ಕೀ ಕಿತ್ತು ಬಿಸಾಡಿದರು: ಅಕ್ಷಯ್ ಕಲ್ಲೇಗ ಅವರೊಂದಿಗಿದ್ದ ವಿಖ್ಯಾತ್ ಮತ್ತು ಅಲ್ತಾಫ್ ಅವರು ತಲವಾರ್ ದಾಳಿ ಸಂದರ್ಭ ಓಡಿ ಪರಾರಿಯಾದ ಬಳಿಕ ಅಕ್ಷಯ್ ಅವರೂ ಅಲ್ಲಿಂದ ಓಡಿ ತಪ್ಪಿಸಿಕೊಳ್ಳಲೆಂದು ತನ್ನ ಬೈಕ್ ಹತ್ತಿದಾಗ ಅಲ್ಲೇ ಇದ್ದ ಮಂಜುನಾಥ್ ಯಾನೆ ಹರಿ ಬೈಕ್‌ನ ಕೀಯನ್ನು ಎಳೆದೊಯ್ದು ಬಿಸಾಡಿದಾಗ ಅಕ್ಷಯ್ ಅವರು ಓಡಿ ತಪ್ಪಿಸಲು ಯತ್ನಿಸುತ್ತಿದ್ದಂತೆ ಚೇತನ್ ಕುಮಾರ್ ಯಾನೆ ಚೇತು ಬೀಸಿದ ತಲವಾರು ಬೈಕ್‌ಗೆ ತಾಗಿ ತಲವಾರು ತುಂಡಾಗಿತ್ತು.ಈ ವೇಳೆ ಮನೀಶ್ ತನ್ನಲ್ಲಿದ್ದ ತಲವಾರಿನಿಂದ ಅಕ್ಷಯ್ ಅವರಿಗೆ ಕಡಿದರೆನ್ನಲಾಗಿದೆ.

ಓಡಿದರೂ ಬಿಡದೆ ಅಟ್ಟಾಡಿಸಿ ಕಡಿದರು: ತನ್ನ ಮೇಲೆ ತಲವಾರ್ ದಾಳಿಯಾದಾಗ ಅಲ್ಲಿಂದ ಓಡಿದ ಅಕ್ಷಯ್ ಕಲ್ಲೇಗ ಪಕ್ಕದಲ್ಲೇ ಇರುವ ರಿಕ್ಷಾ ಪಾರ್ಕ್ ಬಳಿ ಬಂದು ಅಲ್ಲಿಂದ ರಸ್ತೆ ದಾಟಿ ಪಕ್ಕದಲ್ಲಿರುವ, ಮಾಸ್ಟರ್ ಪ್ಲಾನರಿ ಸಂಸ್ಥೆಯವರ ಖಾಲಿ ಜಾಗದಲ್ಲಿ ಬಿದ್ದಿರುವ ತರೆಗೆಲೆ ರಾಶಿ ಇರುವಲ್ಲಿಗೆ ಬಂದಾಗ ಅಟ್ಟಾಡಿಸಿಕೊಂಡು ಅಲ್ಲಿಗೂ ಬಂದಿದ್ದ ಹಂತಕರು ತಲವಾರಿನಿಂದ ಮುಖ, ಕೈ, ಕಾಲುಗಳಿಗೆ ಹಲ್ಲೆ ನಡೆಸಿ ಅಕ್ಷಯ್ ಕಲ್ಲೇಗ ಅವರ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.ಮೃತ ಅಕ್ಷಯ್ ಅವರ ಕುತ್ತಿಗೆಯಲ್ಲಿದ್ದ ಅಂದಾಜು 3 ಲಕ್ಷ ರೂ.ಬೆಲೆ ಬಾಳುವ ಚಿನ್ನದ ಸರವೊಂದು ಕಾಣೆಯಾಗಿರುವುದಾಗಿ ತಿಳಿದು ಬಂದಿದೆ.

50ಕ್ಕೂ ಹೆಚ್ಚು ಬಾರಿ ತಲವಾರ್‌ನಿಂದ ಹಲ್ಲೆ: ಆರೋಪಿಗಳು ಸುಮಾರು 50ಕ್ಕೂ ಹೆಚ್ಚು ಬಾರಿ ಅಕ್ಷಯ್ ಅವರಿಗೆ ತಲವಾರಿನಿಂದ ಹಲ್ಲೆ ನಡೆಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಸ್ಥಳದಲ್ಲಿ ರಕ್ತದ ಕೋಡಿ ಹರಿದಿತ್ತು. ಒಟ್ಟಿನಲ್ಲಿ ಪಾದಚಾರಿ ವಿದ್ಯಾರ್ಥಿಯೊಬ್ಬರಿಗೆ ಬೈಕ್ ಅಪಘಾತವಾಗಿ ಚಿಕಿತ್ಸೆಗೆ ಪರಿಹಾರ ಕೊಡಿಸುವ ವಿಚಾರದಲ್ಲಿನ ಜಗಳ ಕೊಲೆಯಲ್ಲಿ ಅಂತ್ಯಕಂಡಿರುವುದು ದುರಂತ.

ಪ್ರಕರಣ ದಾಖಲು: ಅಕ್ಷಯ್ ಅವರ ಕೊಲೆಗೆ ಸಂಬಂಧಿಸಿದಂತೆ ಚಿಕ್ಕಮೂಡ್ನೂರು ಗ್ರಾಮದ ನಿವಾಸಿ ವಿಖ್ಯಾತ್ ಬಿ ಎಂಬವರ ದೂರಿನಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನ.6ರಂದು ರಾತ್ರಿ ಅಕ್ಷಯ ಕಲ್ಲೇಗ ಹಾಗೂ ಪ್ರಕರಣದ ಆರೋಪಿಗಳಾದ ಮನೀಶ್, ಚೇತನ್ ಎಂಬವರೊಂದಿಗೆ ದೂರವಾಣಿ ಕರೆಯ ಮೂಲಕ ಮಾತಿನ ಚಕಮಕಿಯಾಗಿತ್ತು.ಅದು ಮುಂದುವರಿದಂತೆ, ಸ್ವಲ್ಪ ಸಮಯದ ಬಳಿಕ ನಾನು ಮತ್ತು ಗೆಳೆಯ ಅಕ್ಷಯ್ ಕಲ್ಲೇಗ ನೆಹರೂ ನಗರದ ಬಳಿಯಿರುವ ಎಟಿಎಂ ಪಕ್ಕದಲ್ಲಿ ನಿಂತುಕೊಂಡಿದ್ದಾಗ, ಕಾರಿನಲ್ಲಿ ಬಂದ ಆರೋಪಿಗಳಾದ ಚೇತನ್, ಮನೀಶ್, ಮಂಜ ಮತ್ತು ಕೇಶವ ಎಂಬವರು, ಅಕ್ಷಯ್ ಕಲ್ಲೇಗರೊಂದಿಗೆ ದೂರವಾಣಿ ಕರೆಯ ಮೂಲಕ ನಡೆದಿದ್ದ ಮಾತಿನ ಚಕಮಕಿಯ ವಿಚಾರದಲ್ಲಿ ತಕರಾರು ತೆಗೆದು,ಅವಾಚ್ಯವಾಗಿ ಬೈದು, ತಾವುಗಳು ತಂದಿದ್ದ ತಲವಾರಿನಿಂದ ಹಲ್ಲೆ ನಡೆಸಿದ್ದರು.ಈ ವೇಳೆ ನಾನು ಓಡಿ ತಪ್ಪಿಸಿಕೊಂಡಿದ್ದು, ಅಕ್ಷಯ ಕಲ್ಲೇಗ ಅವರನ್ನು ಆರೋಪಿಗಳಾದ ಚೇತನ್, ಮನೀಶ್, ಮಂಜ ಮತ್ತು ಕೇಶವ ಸೇರಿಕೊಂಡು ತಲವಾರಿನಿಂದ ಕಡಿದು ಕೊಲೆ ಮಾಡಿ ಹೋಗಿರುತ್ತಾರೆ ಎಂದು ವಿಖ್ಯಾತ್ ಅವರು ನೀಡಿದ್ದ ದೂರಿನಲ್ಲಿ ತಿಳಿಸಿದ್ದಾರೆ.ಪೊಲೀಸರು ಕಲಂ: 341,504,506,307,302 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.


ದೇರಳಕಟ್ಟೆಯಲ್ಲಿ ಮರಣೋತ್ತರ ಪರೀಕ್ಷೆ:
ತಲವಾರು ಹಲ್ಲೆಯಿಂದ ಅಕ್ಷಯ್ ಕಲ್ಲೇಗ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು.ಕೊಲೆ ಮಾಡಿದ ನಾಲ್ವರ ಪೈಕಿ ಇಬ್ಬರು ಆರೋಪಿಗಳು ನೇರವಾಗಿ ಪುತ್ತೂರು ನಗರ ಪೊಲೀಸ್ ಠಾಣೆಗೆ ಆಗಮಿಸಿ ಶರಣಾಗಿದ್ದರು.ಇನ್ನುಳಿದ ಇಬ್ಬರನ್ನು ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದರು.ರಾತ್ರಿ ಸುಮಾರು 1.30ರ ಸಮಯ ಘಟನಾ ಸ್ಥಳಕ್ಕೆ ಆಗಮಿಸಿದ ಡಿವೈಎಸ್ಪಿ ಡಾ|ಗಾನಾ ಪಿ.ಕುಮಾರ್ ಸಹಿತ ಪೊಲೀಸರ ತಂಡ ಘಟನಾ ಸ್ಥಳದಲ್ಲಿ ಮಹಜರು ನಡೆಸಿದ್ದಾರೆ.ಬಳಿಕ ಮೃತ ದೇಹವನ್ನು ಅಕ್ಷಯ್ ಕುಟುಂಬದ ಗೋವರ್ಧನ್ ಕಲ್ಲೇಗ ಮತ್ತು ಲೋಕೇಶ್ ಎಂಬವರು ಪೊಲೀಸರ ಸೂಚನೆಯಂತೆ ಆ್ಯಂಬುಲೆನ್ಸ್ನಲ್ಲಿ ದೇರಳಕಟ್ಟೆ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕೊಂಡೊಯ್ದರು.

ಆರೋಪಿಗಳನ್ನು ಕರೆತಂದು ಘಟನಾ ಸ್ಥಳದ ಮಹಜರು: ಅಕ್ಷಯ್ ಕೊಲೆ ಆರೋಪಿಗಳನ್ನು ಪುತ್ತೂರು ನಗರ ಪೊಲೀಸ್ ಠಾಣೆಯ ಪೊಲೀಸರು, ಅಕ್ಷಯ್ ಕೊಲೆಯಾಗಿ ಬಿದ್ದಿದ್ದ ಸ್ಥಳಕ್ಕೆ ನ.7ರಂದು ಸಂಜೆ ಕರೆ ತಂದು ಮಹಜರು ಮಾಡಿದರು.

ಅಕ್ಷಯ್‌ರನ್ನು ಕೊಂದವರ ಬಿಡುವುದಿಲ್ಲ: ಆರೋಪಿಗಳನ್ನು ಸ್ಥಳ ಮಹಜರಿಗೆ ಪೊಲೀಸರು ಕರೆ ತಂದ ವೇಳೆ, ಅಕ್ಷಯ್ ಅವರನ್ನು ಕೊಲೆ ಮಾಡಿರುವವರನ್ನು ಖಂಡಿತ ಬಿಡುವುದಿಲ್ಲ ಎಂದು ಅಲ್ಲಿ ಸೇರಿದ್ದ ಕೆಲವರು ಹೇಳುತ್ತಿದ್ದರು.

ಆರೋಪಿಗಳಿಗೆ ನ್ಯಾಯಾಂಗ ಬಂಧನ: ಆರೋಪಿಗಳ ಪೈಕಿ ಮಂಜುನಾಥ ಯಾನೆ ಹರಿ ಹೊರತು ಪಡಿಸಿ ಇತರ ಮೂವರನ್ನು ಸಂಜೆ ವೇಳೆಗೆ ವೈದ್ಯಕೀಯ ಪರೀಕ್ಷೆಗೊಳಪಡಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು.ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.ಇನ್ನೋರ್ವ ಆರೋಪಿಯನ್ನು ನ.8ರಂದು ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ.

ಶವಯಾತ್ರೆಗೆ ದೊರೆಯದ ಅವಕಾಶ ಮನೆಯಲ್ಲಿ ಸೇರಿದ ಜನಸ್ತೋಮ: ದೇರಳಕಟ್ಟೆ ಆಸ್ಪತ್ರೆಯಿಂದ ಅಕ್ಷಯ್ ಅವರ ಮೃತದೇಹವನ್ನು ಪುತ್ತೂರಿಗೆ ತರುವ ವೇಳೆ ಕಬಕದಿಂದ ಮೃತರ ಮನೆ ತನಕ ಮೆರವಣಿಗೆಯಲ್ಲಿ ಕೊಂಡೊಯ್ಯಲು ಅವರ ಸ್ನೇಹಿತರು ತೀರ್ಮಾನಿಸಿದ್ದರಲ್ಲದೆ,ಇದಕ್ಕಾಗಿ ತೆರೆದ ಆ್ಯಂಬುಲೆನ್ಸ್ ಶೃಂಗಾರಗೊಳಿಸಿ ಸಿದ್ದಪಡಿಸಿದ್ದರು.ಆದರೆ ಶವಯಾತ್ರೆ ಮೆರವಣಿಗೆಗೆ ಪೊಲೀಸರು ಅವಕಾಶ ನಿರಾಕರಿಸಿದರು.ಈ ವಿಚಾರದಲ್ಲಿ ಕಬಕದಲ್ಲಿ ಸಾರ್ವಜನಿಕರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿಯೂ ನಡೆಯಿತು.ಆದರೆ ಪೊಲೀಸರು ಮೆರವಣಿಗೆಗೆ ಅವಕಾಶ ನೀಡದೇ ಇದ್ದುದರಿಂದ ಅಕ್ಷಯ್ ಅವರ ಪಾರ್ಥೀವ ಶರೀರವನ್ನು ನೇರ ಅವರ ಶೇವಿರೆ ಮನಗೆ ತಂದರು.ಮೆರವಣಿಗೆಗೆ ಪೊಲೀಸರು ಅವಕಾಶ ನೀಡದೇ ಇರುವುದರಿಂದ ನಿರಾಸೆಗೊಂಡ ಅಕ್ಷಯ್ ಸ್ನೇಹಿತರು, ಅಭಿಮಾನಿಗಳು ಅಕ್ಷಯ್ ಮನೆಗೆ ಬಂದರು. ಅಲ್ಲಿ ಅಕ್ಷಯ್ ಅವರ ಮೃತದೇಹದ ಅಂತಿಮ ದರುಶನ ಪಡೆದು ಸಂತಾಪ ಸೂಚಿಸಿದರು.ಅಕ್ಷಯ್ ಅವರ ಅಂತ್ಯಸಂಸ್ಕಾರ ಕೊನೆಯ ತನಕವೂ ಅಕ್ಷಯ್ ಅವರ ಮನೆಯಲ್ಲಿ ಜನಸ್ತೋಮವೇ ಸೇರಿತ್ತು.ಎಲ್ಲರ ಮನಸ್ಸಿನಲ್ಲೂ ಬೇಸರದ ಭಾವನೆ ಎದ್ದು ಕಾಣುತ್ತಿತ್ತು.ಅಕ್ಷಯ್ ಆಪ್ತ ಬಳಗದವರು ಅಳುತ್ತಿದ್ದರು.

ಮಾಣಿಯಲ್ಲಿ ಹಾರಾರ್ಪಣೆ: ಮೃತದೇಹವನ್ನು ಮಂಗಳೂರುನಿಂದ ಕರೆತರುತ್ತಿದ್ದ ವೇಳೆ ಮಾಣಿ ನಾಗು ಅವರ ನೇತೃತ್ವದಲ್ಲಿ ಮಾಣಿಯಲ್ಲಿ ಹಾರಾರ್ಪಣೆ ಮಾಡಿ ಗೌರವ ಸೂಚಿಸಲಾಗಿತ್ತು.ಮಿತ್ತೂರಲ್ಲಿಯೂ ಕೆಲವರು ಹಾರಾರ್ಪಣೆ ಗೌರವ ಸೂಚಿಸಿದ್ದರು.

ಸ್ನೇಹಿತರಾಗಿದ್ದರು: ಕೊಲೆಯಾದ ಅಕ್ಷಯ್ ಮತ್ತು ಆರೋಪಿಗಳಾದ ಮನೀಶ್,ಮಂಜುನಾಥ್ ಯಾನೆ ಹರಿ ಅವರು ಈ ಹಿಂದೆ ಸ್ನೇಹಿತರಾಗಿದ್ದರು.ಮೊನ್ನೆ ಮೊನ್ನೆ ನಡೆದ ಕಲ್ಲೇಗ ಟೈಗರ್ಸ್ ಹುಲಿ ಕುಣಿತ ತಂಡಕ್ಕೆ ಮನೀಶ್ ಅವರು 10 ಸಾವಿರ ರೂ.ನೀಡಿದ್ದರು.ಈ ರೀತಿಯಾಗಿದ್ದ ಸ್ನೇಹಿತರೊಳಗೆ ಕ್ಷುಲ್ಲಕ ವಿಚಾರದಲ್ಲಿ ಗಲಾಟೆ ನಡೆದು ಕೊಲೆಯಲ್ಲಿ ಅಂತ್ಯವಾಗಿರುವುದು ಮಾತ್ರ ದುರಂತವೇ ಸರಿ.‌ ಆರೋಪಿಗಳ ಪೈಕಿ ಮಂಜುನಾಥ್ ಯಾನೆ ಹರಿಯವರು ಕಾರ್ಯಕ್ರಮವೊಂದಕ್ಕೆ ಹೋಗುತ್ತಿದ್ದವರಾಗಿದ್ದರೆ, ಕೇಶವ ಅವರು ಮನೆಯಲ್ಲಿ ಮಲಗಿಕೊಂಡಿದ್ದವರನ್ನು ಏನೋ ಒಂದು ಮಾತುಕತೆ ನಡೆಸಲಿಕ್ಕಿದೆ ಎಂದು ಎಬ್ಬಿಸಿ ಕರೆದುಕೊಂಡು ಹೋಗಿದ್ದರು ಎಂದು ಹೇಳಲಾಗುತ್ತಿದೆ.

ಮಡಿಕೇರಿಗೆ ಪರಾರಿಯಾಗಿದ್ದ ಮಂಜುನಾಥ್ ಯಾನೆ ಹರಿ?: ಕೃತ್ಯ ಎಸಗಿದ್ದ ಬಳಿಕ ಮಂಜುನಾಥ್ ಯಾನೆ ಹರಿ ಮಡಿಕೇರಿಗೆ ಪರಾರಿಯಾಗಿದ್ದರು.ತನ್ನ ತಾಯಿಗೆ ಹುಷಾರಿಲ್ಲ ಎಂದು ಹೇಳಿ ಶರತ್ ಎಂಬವರ ಕಾರನ್ನು ತರಿಸಿಕೊಂಡಿದ್ದ ಮಂಜುನಾಥ್ ಯಾನೆ ಹರಿ ಬಳಿಕ ಅದೇ ಕಾರಲ್ಲಿ ಮಡಿಕೇರಿಗೆ ತೆರಳಿದ್ದ ವಿಚಾರ ತಿಳಿದ ಪೊಲೀಸರು ರಾತ್ರೋರಾತ್ರಿಯೇ ಅವರನ್ನು ಮಡಿಕೇರಿಯಿಂದ ವಶಕ್ಕೆ ಪಡೆದು ಕರೆತಂದಿದ್ದರು.ಶರತ್ ಅವರನ್ನೂ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಕೊಲೆಯಾದ ಅಕ್ಷಯ್ ರವರ ಸ್ನೇಹಿತ ವಿಖ್ಯಾತ್ ನೀಡಿರುವ ಪೊಲೀಸ್ ದೂರು
ನ.6ರಂದು ರಾತ್ರಿ ಮನೆಯಿಂದ ಹೊರಟು ಪುತ್ತೂರಿನ ನೆಹರು ನಗರದ ಜಂಕ್ಷನ್‌ಲ್ಲಿರುವ ಪೆಟ್ರೋಲ್ ಬಂಕ್ ಎದುರು ಇರುವ ಬೀಡಾ ಅಂಗಡಿಯಲ್ಲಿ ನಾನು ಹಾಗೂ ಸ್ನೇಹಿತರಾದ ಅಕ್ಷಯ್ ಕಲ್ಲೇಗ ಮತ್ತು ಅಲ್ತಾಫ್ ನಿಂತುಕೊಂಡಿದ್ದಾಗ ಕಾಲೇಜಿನ ಹುಡುಗನೊಬ್ಬ ನೆಹರುನಗರದ ಹೋಟೆಲ್‌ನಿಂದ ಪಾರ್ಸಲ್ ತೆಗೆದುಕೊಂಡು ರಸ್ತೆ ದಾಟಿಕೊಂಡು ಬರುವಾಗ ಮಂಗಳೂರು ಕಡೆಯಿಂದ ಒಂದು ಹೊಸ ಬೈಕನ್ನು ಅದರ ಸವಾರ ಚಲಾಯಿಸಿಕೊಂಡು ಬಂದು ಆ ಹುಡುಗನಿಗೆ ಡಿಕ್ಕಿ ಹೊಡೆದಿದ್ದು,ಈ ಅಪಘಾತದಿಂದ ಕಾಲೇಜಿನ ಹುಡುಗನಿಗೆ ಮತ್ತು ಬೈಕ್ ಸವಾರನಿಗೆ ಸಣ್ಣಪುಟ್ಟ ಗಾಯಗಳಾಗಿತ್ತು.ಕೂಡಲೇ ವಿಖ್ಯಾತ್, ಅಕ್ಷಯ್ ಕಲ್ಲೇಗ ಮತ್ತು ಅಲ್ತಾಫ್ ಸೇರಿಕೊಂಡು ಆ ಇಬ್ಬರು ಹುಡುಗರನ್ನು ಆಟೋ ರಿಕ್ಷಾದಲ್ಲಿ ಚಿಕಿತ್ಸೆ ಬಗ್ಗೆ ಪುತ್ತೂರು ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿದ್ದು, ಇಬ್ಬರ ಆಸ್ಪತ್ರೆಯ ಚಿಕಿತ್ಸಾ ವೆಚ್ಚ 1800 ರೂ.ಅನ್ನು ಆಸ್ಪತ್ರೆಗೆ ಪಾವತಿಸುವಂತೆ ಬೈಕ್ ಸವಾರನಲ್ಲಿ ಅಕ್ಷಯ್ ಕಲ್ಲೇಗ ತಿಳಿಸಿದ್ದು, ಆಗ ಬೈಕ್ ಸವಾರ ಆತನಿಗೆ ಪರಿಚಯವಿದ್ದ ಮನೀಶ್ ಮತ್ತು ಚೇತನ್ ಎಂಬವರಿಗೆ ಕರೆ ಮಾಡಿಕೊಟ್ಟಾಗ ದೂರವಾಣಿಯಲ್ಲಿ ಚೇತನ್ ಎಂಬಾತ ಅಕ್ಷಯ್‌ರಲ್ಲಿ, ನಾವು ಆಸ್ಪತ್ರೆಯ ಬಿಲ್ ಪಾವತಿಸುವುದಿಲ್ಲ.ನೀವು ಬೇಕಾದರೆ ಪೊಲೀಸ್ ಕಂಪ್ಲೆಂಟ್ ನೀಡಿ ಎಂದು ಉಡಾಫೆಯಾಗಿ ಮಾತನಾಡಿ ಕರೆ ಕಟ್ ಮಾಡಿರುತ್ತಾರೆ.

ಬಳಿಕ ಪರಿಚಯದ ಕಾರ್ತಿಕ್ ಎಂಬವರು ಆಸ್ಪತ್ರೆಗೆ ಬಂದು ಬಿಲ್ ಪಾವತಿ ಮಾಡಿ ಗಾಯಾಳುಗಳನ್ನು ಮತ್ತು ವಿಖ್ಯಾತ್ ಮತ್ತು ಅಕ್ಷಯ್ ಕಲ್ಲೇಗ,ಅಲ್ತಾಫ್‌ರನ್ನು ಅವರ ಕಾರಿನಲ್ಲಿ ನೆಹರುನಗರದ ತನಕ ಡ್ರಾಪ್ ನೀಡಿ ಹೋಗಿರುತ್ತಾರೆ.ಆಗ ನಾನು, ಅಕ್ಷಯ್ ಕಲ್ಲೇಗ ಮತ್ತು ಅಲ್ತಾಫ್ ನಗರದ ಕೆನರಾ ಬ್ಯಾಂಕ್ ಎಟಿಎಂ ಪಕ್ಕದಲ್ಲಿ ನಿಂತಿರುವಾಗ ಅಕ್ಷಯ್‌ರವರು ಮನೀಶ್ ಹಾಗೂ ಚೇತನ್‌ರವರಿಗೆ ದೂರವಾಣಿ ಕರೆಯಲ್ಲಿ ಮಾತನಾಡುತ್ತಾ, ನೀವು ಬೇಕಾದರೆ ನಗರಕ್ಕೆ ಬನ್ನಿ ಎಂದು ಮಾತನಾಡುತ್ತಿದ್ದನು.ಸ್ವಲ್ಪ ಸಮಯದ ನಂತರ ಪುತ್ತೂರು ಕಡೆಯಿಂದ ಒಂದು ಗ್ರೇ ಬಣ್ಣದ ನ್ಯಾನೋ ಕಾರಿನಲ್ಲಿ ಚೇತನ್, ಮನೀಶ್, ಮಂಜ ಮತ್ತು ಕೇಶವ ಎಂಬವರು ಬಂದಿದ್ದು, ಆಗ ಚೇತನ್ ಅಕ್ಷಯ್‌ರಲ್ಲಿ ತುಳು ಭಾಷೆಯಲ್ಲಿ ಏನು ಕರೆದದ್ದು ಭಾರೀ ಅಹಂಕಾರನಾ ನಿನಗೆ ಎಂದು ಜೋರು ಜೋರು ಮಾತನಾಡುತ್ತಾ ಅಕ್ಷಯ್ ಮೈ ಮೇಲೆ ಕೈ ಹಾಕಿ ಕೈಯಿಂದ ಹೊಡೆಯಲು ಪ್ರಾರಂಭಿಸಿರುತ್ತಾರೆ.ಆಗ ನಾನು ಮತ್ತು ಅಲ್ತಾಫ್, ಅಕ್ಷಯ್‌ರನ್ನು ಬಿಡಿಸಲು ಮುಂದಾದಾಗ ಅವರ ಕಾರಿನಿಂದ ಚೇತನ್ ಮತ್ತು ಮನೀಶ್ 2 ತಲವಾರುಗಳನ್ನು ತೆಗೆದು ಅದರಲ್ಲಿ ಚೇತನ್ ತಲವಾರಿನಿಂದ ಅಕ್ಷಯ್ ಬಲಕೈಗೆ ಕಡಿದಿದ್ದು,ಮನೀಶ್ ತಲವಾರು ಹಿಡಿದುಕೊಂಡು ವಿಖ್ಯಾತ್ ಕಡೆಗೆ ಬೀಸುತ್ತಾ ತುಳುಭಾಷೆಯಲ್ಲಿ ನಿಮ್ಮನ್ನು ಈಗಲೇ ಕೊಲ್ಲದೇ ಬಿಡುವುದಿಲ್ಲ ಎಂದು ಹೇಳುತ್ತಾ ನನ್ನನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದಾಗ ತಪ್ಪಿಸಿಕೊಂಡು ಅಕ್ಷಯ್‌ರನ್ನು ಆತನ ಬೈಕಿನಲ್ಲಿ ಕುಳ್ಳಿರಿಸಿಕೊಳ್ಳಲು ಪ್ರಯತ್ನಿಸುತ್ತಿರುವಾಗ ಚೇತನ್ ಮತ್ತು ಮನೀಶ್ ತಲವಾರಿನಿಂದ ಅಕ್ಷಯ್ ಕುತ್ತಿಗೆಯ ಮುಂದೆ ಮತ್ತು ಮುಖಕ್ಕೆ ಕಡಿದಿದ್ದು, ಆಗ ಮಂಜ ಮತ್ತು ಕೇಶವ..,ನನ್ನನ್ನು ಹಿಡಿಯಲು ಬಂದಾಗ ನಾನು ಬೈಕನ್ನು ಅಲ್ಲೇ ಬಿಟ್ಟು ಅಲ್ಲಿಂದ ಓಡಿ ಹೋಗುತ್ತಿರುವಾಗ, ಅಕ್ಷಯ್‌ರನ್ನು ತಲವಾರಿನಿಂದ ಕಡಿಯುತ್ತಾ ಮುಖ್ಯರಸ್ತೆ ಕಡೆಗೆ ಓಡಿಸಿಕೊಂಡು ಹೋಗುತ್ತಿದ್ದರು.ನಾನು ಅಲ್ಲಿಂದ ತಪ್ಪಿಸಿಕೊಂಡು ಪರಿಚಯದ ದಿವಾಕರ ಎಂಬುವರ ಮನೆಗೆ ಹೋಗಿ ಅಲ್ತಾಫ್‌ಗೆ ಕರೆ ಮಾಡಿದಾಗ ಅಲ್ತಾಫ್ ಕೂಡ ಅಲ್ಲಿಂದ ಓಡಿ ಹೋಗಿರುವುದಾಗಿ ತಿಳಿಸಿರುತ್ತಾರೆ.ನಂತರ ನಾನು ಸ್ನೇಹಿತರ ಜೊತೆ ನೆಹರುನಗರಕ್ಕೆ ಬಂದು ನೋಡಿದಾಗ ಹೋಟೆಲ್ ನ ಪೂರ್ವಬದಿಯ ಹುಲ್ಲು ಪೊದೆಯಲ್ಲಿ ಅಕ್ಷಯ್ ಕಲ್ಲೇಗರನ್ನು ಚೇತನ್, ಮನೀಶ್, ಮಂಜ ಮತ್ತು ಕೇಶವ ಸೇರಿಕೊಂಡು ತಲವಾರಿನಿಂದ ಮುಖಕ್ಕೆ, ಕೈಗೆ, ಕುತ್ತಿಗೆಗೆ ಹಾಗೂ ದೇಹದ ಇತರ ಭಾಗಗಳಿಗೆ ಕಡಿದು ಕೊಲೆ ಮಾಡಿ ಹೋಗಿರುತ್ತಾರೆ ಎಂದು ಅಕ್ಷಯ್ ಅವರ ಸ್ನೇಹಿತ ವಿಖ್ಯಾತ್ ಅವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿರುತ್ತಾರೆ.

ಜನಪ್ರಿಯತೆ ಗಳಿಸಿದ್ದ ಟೀಮ್ ಕಲ್ಲೇಗ ಟೈಗರ್ಸ್ ತಂಡದ ನೇತೃತ್ವ ವಹಿಸಿದ್ದ ಅಕ್ಷಯ್
ಅಕ್ಷಯ್ ಕಲ್ಲೇಗ ಅವರು ಆರು ವರ್ಷಗಳ ಹಿಂದೆ ಟೀಮ್ ಕಲ್ಲೇಗ ಟೈಗರ್ಸ್ ಪುತ್ತೂರು ಎಂಬ ಹೆಸರಿನಲ್ಲಿ ಹುಲಿವೇಷ ತಂಡ ರಚಿಸಿದ್ದರು.ನೆಹರುನಗರದ ಪ್ರಸಿದ್ಧ ಕಲ್ಲೇಗ ಕಲ್ಕುಡ ಕ್ಷೇತ್ರದಲ್ಲಿ ಹುಲಿವೇಷ ತಂಡ ಕಟ್ಟಿ ಊದು ಪೂಜೆ ನಡೆಸಿ ತಂಡ ಹುಲಿನೃತ್ಯ ಪ್ರದರ್ಶನ ನೀಡುತ್ತಿತ್ತು.ಈ ವರ್ಷದ ನವರಾತ್ರಿಯಲ್ಲೂ ಅ.18ರಂದು ಊದು ಪೂಜೆಯೊಂದಿಗೆ ಪುತ್ತೂರಿನ ನಾನಾ ಕಡೆ ಇವರ ತಂಡ ಪ್ರದರ್ಶನ ನೀಡಿತ್ತು.ಖ್ಯಾತ ನಟ ಸುದೀಪ್ ಅವರ ನೇತೃತ್ವದಲ್ಲಿ ಕಲ್ಲರ್ಸ್‌ ಕನ್ನಡ ವಾಹಿನಿಯಲ್ಲಿ 2022ರಲ್ಲಿ ಪ್ರಸಾರವಾದ ಬಿಗ್ ಬಾಸ್‌ ಶೋದಲ್ಲಿ ಪ್ರದರ್ಶನ ನೀಡಿದ ಬಳಿಕವಂತೂ ಟೀಮ್ ಕಲ್ಲೇಗ ಟೈಗರ್ಸ್ ಭಾರೀ ಜನಪ್ರಿಯತೆ ಗಳಿಸಿತ್ತು. ಪುತ್ತೂರಿನಲ್ಲಿ ಈ ಬಾರಿ ನವರಾತ್ರಿ ಸಂದರ್ಭ ಮಾಜಿ ಶಾಸಕಿ ಶಕುಂತಲಾ ಶೆಟ್ಟಿಯವರ ನೇತೃತ್ವದಲ್ಲಿ ನಡೆದ ಪಿಲಿರಂಗ್ ಸೀಸನ್-2 ಮತ್ತು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಳದ ಗದ್ದೆಯಲ್ಲಿ ಸಹಜ್ ರೈ ಬಳಜ್ಜ ನೇತೃತ್ವದಲ್ಲಿ ನಡೆದ ಪಿಲಿಗೊಬ್ಬು ಸ್ಪರ್ಧೆ ಎರಡರಲ್ಲೂ ಅಕ್ಷಯ್ ಕಲ್ಲೇಗ ನೇತೃತ್ವದ ಕಲ್ಲೇಗ ಟೈಗರ್ಸ್ ತಂಡ ತೃತೀಯ ಪ್ರಶಸ್ತಿ ಪಡೆದುಕೊಂಡಿತ್ತು. ಪಿಲಿರಂಗ್-ಸೀಸನ್ 2ರಲ್ಲಿ ತೃತೀಯ ಸ್ಥಾನಗಳಿಸಿದ್ದಕ್ಕೆ ಅಸಮಾಧಾನಗೊಂಡಿದ್ದ ಇವರು ಫಲಿತಾಂಶಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು.

ಸಾವಿರಾರು ಮಂದಿಯ ಉಪಸ್ಥಿತಿಯಲ್ಲಿ ಅಂತ್ಯಸಂಸ್ಕಾರ
ಅಕ್ಷಯ್ ಕಲ್ಲೇಗ ಅವರ ಅಂತ್ಯಸಂಸ್ಕಾರ ಸಾವಿರಾರು ಮಂದಿಯ ಉಪಸ್ಥಿತಿಯಲ್ಲಿ ಶೇವಿರೆ ಮನೆಯ ಸಮೀಪದ ತೋಟದ ಬದಿಯಲ್ಲಿ ನಡೆಯಿತು.ಉಪಸ್ಥಿತರಿದ್ದವರು ಸರತಿ ಸಾಲಿನಲ್ಲಿ ಮನೆಯೊಳಗೆ ತೆರಳಿ ಅಕ್ಷಯ್ ಅವರ ಅಂತಿಮ ದರ್ಶನ ಪಡೆದು ನಮನ ಸಲ್ಲಿಸಿದರು.ಬಳಿಕ ಅಂತಿಮ ವಿಧಿ ವಿಧಾನಗಳನ್ನು ನಡೆಸಿ ಅಂತಿಮ ಸಂಸ್ಕಾರ ಕಾರ್ಯ ನಡೆಸಲಾಯಿತು.ಅಕ್ಷಯ್ ಅವರ ಸಹೋದರರಾದ ಅಖಿಲ್ ಮತ್ತು ಅಂಕಿತ್ ಅವರು ಅಣ್ಣನ ಮೃತ ದೇಹಕ್ಕೆ ಅಗ್ನಿ ಸ್ಪರ್ಶ ಮಾಡಿದರು.ಈ ಸಂದರ್ಭ ಅವರ ಮನೆಯಲ್ಲಿ ಅಕ್ಷಯ್ ಅವರ ಮುದ್ದಿನ ಮೂರು ಶ್ವಾನಗಳು ಒಮ್ಮೆ ನಿಶ್ಯಬ್ದವಾಗಿ ಮತ್ತೊಮ್ಮೆ ಜೋರಾಗಿ ಬೊಗಳುತ್ತಿತ್ತು.ಶಾಸಕ ಅಶೋಕ್ ಕುಮಾರ್ ರೈ, ಮಾಜಿ ಶಾಸಕ ಸಂಜೀವ ಮಠಂದೂರು, ನಗರಸಭೆ ನಿಕಟಪೂರ್ವ ಅಧ್ಯಕ್ಷ ಕೆ.ಜೀವಂಧರ್ ಜೈನ್, ಕಲ್ಲೇಗ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅಜಿತ್ ಕುಮಾರ್, ಕಲ್ಲೇಗ ರೂರಲ್ ಡೆವಲಪ್‌ಮೆಂಟ್ ಟ್ರಸ್ಟ್ ಅಧ್ಯಕ್ಷ ಸಂಜೀವ ನಾಯಕ್ ಕಲ್ಲೇಗ, ಬಿಜೆಪಿ ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್,ಜೆಡಿಎಸ್ ತಾಲೂಕು ಅಧ್ಯಕ್ಷ ಅಶ್ರಫ್ ಕಲ್ಲೇಗ,ಬಜರಂಗದಳದ ಮುಖಂಡ ಮುರಳೀಕೃಷ್ಣ ಹಸಂತಡ್ಕ, ಶಿವರಾಮ ಆಳ್ವ, ಮಾಜಿ ಪುರಸಭೆ ಅಧ್ಯಕ್ಷ ರಾಜೇಶ್ ಬನ್ನೂರು, ಕಬಕ ಗ್ರಾ.ಪಂ ಮಾಜಿ ಅಧ್ಯಕ್ಷ ವಿನಯ ಕಲ್ಲೇಗ ಸಹಿತ ಸಾವಿರಾರು ಮಂದಿ ಆಗಮಿಸಿ ಅಕ್ಷಯ್ ಕಲ್ಲೇಗ ಅವರ ಅಂತಿಮ ದರ್ಶನ ಪಡೆದರು.

ಗೆಳೆಯರಿಂದಲೇ ಕೊಲೆ ಆಗಿರುವುದು ಖೇದಕರ -ಶಾಸಕ ಅಶೋಕ್ ರೈ

ಕೊಲೆಗೀಡಾದ ಅಕ್ಷಯ್ ಕಲ್ಲೇಗ ಅವರ ಶೇವಿರೆ ಮನೆಗೆ ಬಂದ ಶಾಸಕ ಅಶೋಕ್ ಕುಮಾರ್ ರೈಯವರು ಮನೆ ಮಂದಿಗೆ ಸಾಂತ್ವನ ಹೇಳಿದರು.ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಶಾಸಕರು,ಅಕ್ಷಯ್ ಕಲ್ಲೇಗ ಕೊಲೆ ನಿರೀಕ್ಷೆ ಮಾಡದಂಥದ್ದು.ಆ ಯುವಕ ತನ್ನ ಗೆಳೆಯರಿಂದಲೇ ಕೊಲೆಗೀಡಾಗಿರುವುದು ಖೇದಕರವಾಗಿದೆ.ಕಾನೂನು ಪ್ರಕಾರ ಯಾವ ರೀತಿ ಶಿಕ್ಷೆ ಆಗಬೇಕೋ ಅದು ಆಗಲೇ ಬೇಕು.ಜನತೆ ಭಯ ಪಡುವ ಅಗತ್ಯವಿಲ್ಲ.ಕಾನೂನು ಸುವ್ಯವಸ್ಥೆ ಇಲ್ಲಿ ಸಮರ್ಪಕವಾಗಿದೆ.ಯಾವುದೋ ವೈಮನಸ್ಸಿನಿಂದ ಮಾತಿಗೆ ಮಾತು ಬೆಳೆದು ನಡೆದ ಈ ಕೃತ್ಯ ಎಸಗಿದ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.ಕೊಲೆ ಆರೋಪಿಗಳಿಗೆ ಶಿಕ್ಷೆ ಆದ ಬಳಿಕ ಅವರು ಜಾಮೀನು ಪಡೆದು ಹೊರ ಬರುವಾಗ ಅವರನ್ನು ಜನರು ನೋಡುವ ದೃಷ್ಟಿಯೇ ಬದಲಾಗುತ್ತದೆ ಎಂದರು.

ಕೊಲೆ ಆರೋಪಿಗಳೂ 3 ತಿಂಗಳಲ್ಲಿ ಹೊರಬರುವ ಕಾನೂನು ಬದಲಾವಣೆಯಾಗಬೇಕು: ಇವತ್ತು ನಮ್ಮಲ್ಲಿ ಕಾನೂನಿನಲ್ಲಿ ಬದಲಾವಣೆ ತರುವ ಅವಶ್ಯಕತೆ ಇದೆ ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಹೇಳಿದ ಶಾಸಕ ಅಶೋಕ್ ಕುಮಾರ್ ರೈಯವರು, ಕೊಲೆ ಮಾಡಿದ ಆರೋಪದಲ್ಲಿ ಬಂಧನವಾದವರೂ 3 ತಿಂಗಳ ಬಳಿಕ ಹೊರಗೆ ಬರುತ್ತಾರೆ.ಹಾಗೆ ಆಗಬಾರದು ವಿದೇಶದಲ್ಲಿರುವಂತೆ ಮೂರು ತಿಂಗಳ ಒಳಗೆ ಅಪರಾಧಿಗಳಿಗೆ ಶಿಕ್ಷೆ ವಿಧಿಸುವಂತಹ ವ್ಯವಸ್ಥೆಯಾಗಬೇಕು . ಇಂತಹ ಕಾನೂನು ನಮ್ಮಲ್ಲಿಯೂ ಬರಬೇಕೆಂದರು.

ರಾತ್ರಿ ಗುಂಪುಗಾರಿಕೆಗೆ ಕಡಿವಾಣ: ರಾತ್ರಿ ಸಮಯ ಅಲ್ಲಲ್ಲಿ ಗುಂಪು ಸೇರುವುದು ಇಂತಹ ಆಂತಕಕಾರಿ ಘಟನೆಗಳಿಗೆ ಕಾರಣವಾಗುತ್ತಿದೆ.ರಾತ್ರಿ 11 ಗಂಟೆ ಬಳಿಕ ಸಾರ್ವಜನಿಕ ಸ್ಥಳದಲ್ಲಿ ಗುಂಪು ಸೇರುವುದು, ಮಧ್ಯರಾತ್ರಿ ಪಾರ್ಟಿ ಮಾಡುವುದನ್ನು ನಿಲ್ಲಿಸುವಂತೆ ಪೊಲೀಸರಿಗೆ ಸೂಚನೆ ನೀಡುತ್ತೇನೆ ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.

ಸರಕಾರದ ಪರೋಕ್ಷ ವೈಫಲ್ಯದಿಂದ ಅಹಿತಕರ ಕೃತ್ಯಗಳು ನಡೆಯುತ್ತಿವೆ: ಮಾಜಿ ಶಾಸಕ ಸಂಜೀವ ಮಠಂದೂರು

ಅಕ್ಷಯ್ ಕಲ್ಲೇಗ ಅವರ ಪಾರ್ಥೀವ ಶರೀರದ ಅಂತಿಮ ದರುಶನ ಮಾಡಿದ ಮಾಜಿ ಶಾಸಕ ಸಂಜೀವ ಮಠಂದೂರು ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಹುಲಿ ಕುಣಿತಕ್ಕೆ ತನ್ನದೇ ಆದ ಛಾಪನ್ನು ಕೊಟ್ಟು ಎಲ್ಲಾ ಯುವಕರಿಗೆ ನಾಯಕತ್ವ ಕೊಟ್ಟು, ಸಾಂಸ್ಕ್ಕೃತಿಕ ಕ್ಷೇತ್ರಕ್ಕೆ ಕೊಡುಗೆ ಕೊಟ್ಟ ಅಕ್ಷಯ ಕಲ್ಲೇಗ ಅವರ ಹತ್ಯೆಯಾಗಿದೆ.ಅವರ ಮರಣ ಈ ರೀತಿ ಆಗಲಿದೆ ಎಂದು ಯಾರೂ ಭಾವಿಸಿರಲಿಲ್ಲ.ಈ ಹತ್ಯೆಯ ಹಿಂದೆ ಯಾರ್ಯಾರು ಇದ್ದಾರೋ ಇದನ್ನು ಪತ್ತೆ ಹಚ್ಚುವ ಕೆಲಸ ಪೊಲೀಸ್ ಇಲಾಖೆಯಿಂದ ಆಗಬೇಕು ಮತ್ತು ಕಲಾವಿದ ಅಕ್ಷಯ್ ಅವರ ಕುಟುಂಬಕ್ಕೆ ಸರಕಾರ ರೂ.1 ಕೋಟಿ ಪರಿಹಾರ ಕೊಡಬೇಕು ಎಂದು ಹೇಳಿದರು.ದ.ಕ.ಜಿಲ್ಲೆಯಲ್ಲಿ ಲಾ ಆ್ಯಂಡ್ ಆರ್ಡರ್ ಕುಸಿದಿದೆ.ಎರಡು ತಿಂಗಳಲ್ಲಿ ಎರಡು ಮರ್ಡರ್ ಆಗಿದೆ.ಇಂತಹ ಕೃತ್ಯಗಳಿಗೆ ಕಡಿವಾಣ ಹಾಕುವಲ್ಲಿ,ರಾತ್ರಿ ಪೊಲೀಸ್ ಬೀಟ್ ಹೆಚ್ಚು ಪರಿಣಾಮಕಾರಿಯಾಗಿ ಮಾಡುವಲ್ಲಿ ಸರಕಾರ ಪರೋಕ್ಷವಾಗಿ ವೈಫಲ್ಯ ಆಗಿದೆ ಎಂದವರು ಹೇಳಿದರು.

ಸೂಕ್ತ ಕ್ರಮಕ್ಕೆ ಆಮ್ ಆದ್ಮಿ ಪಾರ್ಟಿ ಆಗ್ರಹ ಕೊಲೆ ಪ್ರಕರಣಗಳನ್ನು ಶಾಸಕರು ಗಂಭೀರವಾಗಿ ಪರಿಗಣಿಸಬೇಕು-ಡಾ| ವಿಶು ಕುಮಾರ್

ಕಲ್ಲೇಗ ಟೈಗರ್ಸ್ ತಂಡವನ್ನು ಕಟ್ಟಿಕೊಂಡು ಮುನ್ನಡೆಸುತ್ತಿದ್ದ ಉತ್ತಮ ಗುಣದ ಯುವಕನಾಗಿದ್ದ ಅಕ್ಷಯ್ ಅವರ ಕೊಲೆ ಆತಂಕಕಾರಿಯಾಗಿದ್ದು ಪೊಲೀಸ್ ಇಲಾಖೆ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಆಮ್ ಆದ್ಮಿ ಪಕ್ಷದ ದ.ಕ ಜಿಲ್ಲಾಧ್ಯಕ್ಷ ಡಾ| ವಿಶು ಕುಮಾರ್ ಆಗ್ರಹಿಸಿದ್ದಾರೆ. ಕಲ್ಲೇಗ ಟೈಗರ್ಸ್ ತಂಡದ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಅವರನ್ನು ಕೊಲೆ ನಡೆಸಿರುವ ಕೃತ್ಯ ಖಂಡನೀಯ. ಆರೋಪಿಗಳನ್ನು ಕೂಡಲೇ ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿರುವ ಅವರು, ಪುತ್ತೂರಿನಲ್ಲಿ ಪದೇ ಪದೇ ಕೊಲೆಗಳಾಗುತ್ತಿದ್ದು ಆತಂಕಕಾರಿ ವಿಚಾರವಾಗಿದೆ. ಪುತ್ತೂರಿನ ಶಾಸಕರು ಈ ಕೊಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದ್ದಾರೆ.

ನನ್ನನ್ನು ಮಾವ ಮಾವ ಎಂದು ಕರೆಯುತ್ತಿದ್ದ

ಖ್ಯಾತ ಹುಲಿವೇಷಧಾರಿ ರಾಧಾಕೃಷ್ಣ ಶೆಟ್ಟಿಯವರು ಮಾಧ್ಯಮದವರೊಂದಿಗೆ ಮಾತನಾಡಿ ಅಕ್ಷಯ್ ತುಂಬಾ ಒಳ್ಳೆಯ ಹುಡುಗ.ನನ್ನನ್ನು ಯಾವಾಗಲು ಮಾವ ಮಾವ ಎಂದು ಕರೆಯುತ್ತಿದ್ದ. ಇತ್ತೀಚೆಗೆ ಹುಲಿ ವೇಷ ಸ್ಪರ್ಧೆಯಲ್ಲಿ ಅಸಮಾಧಾನಗೊಂಡು ಮಂಡೆ ಬಿಸಾಡಿದ ಎಂದು ಕೇಳಲ್ಪಟ್ಟೆ.ಈ ಕುರಿತು ಸ್ಪಷ್ಟ ಮಾಹಿತಿ ಇಲ್ಲ.ಆದರೆ ಹುಡುಗ ತುಂಬಾ ಒಳ್ಳೆಯ ಕಲಾವಿದನಾಗಿದ್ದ ಎಂದು ಹೇಳಿದರು.

ಎನ್ನ ಮಗನ್ ಕುತ್ತುಕುತ್ತು ಕೆರಿಯೆರ್‌

ಅಕ್ಷಯ್ ಅವರ ಸಾವಿನ ಸುದ್ದಿ ತಿಳಿದು ತಂದೆ ಚಂದ್ರಶೇಖರ್ ಮತ್ತು ತಾಯಿ ಕಮಲ ಅವರ ಆಕ್ರಂದನ ಮುಗಿಲು ಮುಟ್ಟಿತ್ತು.ಪ್ರಾರ್ಥಿವ ಶರೀರವನ್ನು ಮನೆಗೆ ತರುವಾಗ ಮನೆ ಮಂದಿ ಓ ಅಕ್ಕಿ ಅಕ್ಕಿ ಲಕ್ಕ್ದ್ ಬಲ ಎಂದು ಹೇಳುತ್ತಿದ್ದರೆ ಮತ್ತೊಂದೆಡೆ ಅಕ್ಷಯ್ ಅವರ ತಂದೆ ಚಂದ್ರಶೇಖರ್ ಅವರು ಎನ್ನ ಮಗನ್ ಕುತ್ತು ಕುತ್ತು ಕೆರಿಯೆರ್.ಯಾನ್ ಸೈನಗ ಸೂ ಕೊರಡಾಯಿನ ಮಗಕ್ಕ್ ಯಾನೆ ಸೂ ಕೊರೊಡೇ ಎಂದು ಅಳುತ್ತಾ ಹೇಳುತ್ತಿದ್ದ ದೃಶ್ಯ ಕಲ್ಲು ಹೃದಯವನ್ನೂ ಕರಗಿಸುವಂತಿತ್ತು.

LEAVE A REPLY

Please enter your comment!
Please enter your name here