ಮಂಗಳೂರು: ಕರ್ನಾಟಕ ರಾಜ್ಯ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ಆಶ್ರಯದಲ್ಲಿ ದಕ್ಷಿಣ ಕನ್ನಡ ರೋಲರ್ ಸ್ಕೇಟಿಂಗ್ ವತಿಯಿಂದ 39ನೇ ರಾಜ್ಯ ಸ್ಫೀಡ್ ರೋಲರ್ ಸ್ಕೇಟಿಂಗ್ ಟೂರ್ನಿಯ ಟ್ರಯಲ್ಸ್ ಫ್ರಾನ್ಸಿಸ್ ಡೋರಿಸ್ ಸ್ಕೇಟ್ ಸಿಟಿಯಲ್ಲಿ ನ.9 ರಿಂದ 12 ರವರಿಗೆ ನಡೆಯಲಿದೆ ಎಂದು ಸ್ಕೇಟಿಂಗ್ ಟೂರ್ನಿಯ ಸಮಿತಿಯ ಅಧ್ಯಕ್ಷ ಹಾಗೂ ಮೇಯರ್ ಸುಧೀರ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಒಟ್ಟು 5 ವಿಭಾಗಗಳಲ್ಲಿ ಟ್ರಯಲ್ಸ್ ಟೂರ್ನಿ ನಡೆಯಲಿದೆ. ನ. 9 ರಂದು ಸಂಜೆ 5 ಗಂಟೆಗೆ ಟೂರ್ನಿಯ ಉದ್ಘಾಟನೆ ನಡೆಯಲಿದೆ. ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಅವರು ಟೂರ್ನಿಯನ್ನು ಉದ್ಘಾಟಿಸಲಿದ್ದಾರೆ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್, ಪಾಲಿಕೆ ಆಯುಕ್ತ ಆನಂದ್ ಸೇರಿದಂತೆ ಹಲವರು ಭಾಗಹಿಸಲಿದ್ದಾರೆ. ಮಂಗಳೂರಿನಲ್ಲಿ ನಡೆಯುವ ಎರಡನೇ ರಾಜ್ಯ ಮಟ್ಟದ ಟೂರ್ನಿ ಇದಾಗಿದ್ದು, ರೋಡ್ ಹಾಗೂ ರಿಂಕ್ ಟೂರ್ನಿಗಳು ನಡೆಯಲಿದೆ. ಇಲ್ಲಿ ಆಯ್ಕೆಯಾದ ಸ್ಕೇಟಿಂಗ್ ಕ್ರೀಡಾಪಟುಗಳು ಚೆನ್ನೈಯಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಟೂರ್ನಿಗೆ ಅರ್ಹತೆ ಪಡೆಯಲಿದ್ದಾರೆ. ಒಟ್ಟು 500ಕ್ಕೂ ಹೆಚ್ಚು ಮಂದಿ ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಸ್ಕೇಟಿಂಗ್ ಸಂಸ್ಥೆಯ ಸದಸ್ಯ ಸಂತೋಷ ಶೆಟ್ಟಿ ಮಾತನಾಡಿ, ರಾಜ್ಯ ಮಟ್ಟದಲ್ಲಿ ನಡೆಯುತ್ತಿರುವ ಸ್ಕೇಟಿಂಗ್ ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ವಿಶೇಷ ಕ್ರೀಡಾಪಟುಗಳಿಗೆ ಆದ್ಯತೆ ಕಲ್ಪಿಸಿಕೊಡಲಾಗುತ್ತಿದೆ. ರಿಂಗ್ ಸ್ಕೇಟಿಂಗ್ ಟೂರ್ನಿಗಳು ಫ್ರಾನ್ಸಿಸ್ ಡೋರಿಸ್ ಸ್ಕೇಟ್ ಸಿಟಿಯಲ್ಲಿ ನಡೆಯಲಿದ್ದು, ರೋಡ್ ಸ್ಕೇಟಿಂಗ್ ಟೂರ್ನಿಗಳು ಸುರತ್ಕಲ್ ಸಮಿಪದ ಮಂಚೂರು ಪ್ರದೇಶದಲ್ಲಿ ನಡೆಯಲಿವೆ. ಈಗಾಗಲೇ ಟೂರ್ನಿಗೆ ಬೇಕಾದ ಎಲ್ಲ ಸಿದ್ಧತೆಗಳು ನಡೆಯಲಿದ್ದು, ಟೂರ್ನಿ ವ್ಯವಸ್ಥಿತವಾಗಿ ನಡೆಯಲು ಸಮಿತಿಗಳನ್ನು ರಚನೆ ಮಾಡಲಾಗಿದೆ ಎಂದರು.