ಮಂಗಳೂರು: ಸರಕಾರ ಇರಬೇಕಾದರೆ ಪ್ರತಿಷಕ್ಷ ಪ್ರಬಲವಾಗಿರಬೇಕು. ಪ್ರತಿಪಕ್ಷ ನಾಯಕನಿಲ್ಲದೆ ಪ್ರತಿಪಕ್ಷ ಕುಂಠಿತವಾಗಿತ್ತು. ಈಗ ಸಮರ್ಥ ನಾಯಕ ಬಂದಿದ್ದಾರೆ. ಇವರ ಆಯ್ಕೆ ರಾಜ್ಯದ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಹಾರೈಸುವುದಾಗಿ ಪೇಜಾವರ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಅವರ ನೇಮಕ ಕುರಿತಂತೆ ಮಂಗಳೂರಿನಲ್ಲಿ ಹೇಳಿದ್ದಾರೆ.
ಹಿಂದೂ ಕಾರ್ಯಕರ್ತರ ಗಡಿಪಾರು ಒಪ್ಪತಕ್ಕಂತ ಮಾತಲ್ಲ. ಅಂತಹ ವಿಚಾರಗಳು ನಡೆಯಬಾರದು. ಸರ್ಕಾರ ಎಲ್ಲರಿಗೂ ಸಂಬಂಧಪಟ್ಟದ್ದು ಮಾತ್ರವಲ್ಲ ಸರ್ಕಾರಕ್ಕೆ ಎಲ್ಲರೂ ಸಮಾನರು. ಒಂದು ಗುಂಪನ್ನು ಟಾರ್ಗೆಟ್ ಮಾಡಿದ್ದರೆ ಅದು ಸರಕಾರಕ್ಕೆ ಶೋಭೆ ತರುವಂತಹದಲ್ಲ ಎಂದು ಪೇಜಾವರ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಹೋರಾಟದ ಬಳಿಕ ಮಂದಿರ ನಿರ್ಮಾಣವಾಗುತ್ತಿದ್ದು ಭಾರತೀಯರ ಕನಸು ನನಸಾಗುತ್ತಿದೆ. ಮಕರಸಂಕ್ರಾಂತಿ ಮುಗಿಯುತ್ತಿದ್ದಂತೆ ರಾಮದೇವರ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ನಡೆಯಲಿದೆ. ಜನವರಿ 22ರ ಅಭಿಜಿತ್ ಮುಹೂರ್ತದಲ್ಲಿ ರಾಮದೇವರ ಪ್ರಾಣ ಪ್ರತಿಷ್ಠೆ ನಡೆಯಲಿದ್ದು ಪ್ರಧಾನಿ ನರೇಂದ್ರ ಮೋದಿ ಮಂದಿರ ಉದ್ಘಾಟನೆ ಮಾಡಲಿದ್ದಾರೆ. ಆ ದಿನ ಎಲ್ಲರಿಗೂ ಅಯೋಧ್ಯೆಗೆ ಬರಲು ಅವಕಾಶ ಇರೋದಿಲ್ಲ. ಹೀಗಾಗಿ ಎಲ್ಲರೂ ತಮ್ಮತಮ್ಮ ಊರಿನ ರಾಮಮಂದಿರದಲ್ಲಿ ಬೃಹತ್ ಪರದೆಯ ಮೂಲಕ ವೀಕ್ಷಣೆ ಮಾಡಬೇಕು. ಮಂದಿರದಲ್ಲಿ ಪೂಜೆ ಭಜನೆ ಪ್ರಸಾದ ವಿತರಣೆ ಮಾಡಬೇಕು. ಪ್ರಾಣ ಪ್ರತಿಷ್ಠೆ ಆದ ಬಳಿಕ ಮಂಡಲ ಉತ್ಸವ ನಡೆಯುತ್ತದೆ. ನಿತ್ಯ ಅಭಿಷೇಕ ಸೇರಿದಂತೆ ವಿವಿಧ ಪೂಜೆ ನಡೆಯುತ್ತದೆ. ಈ ಸಂದರ್ಭದಲ್ಲಿ ಎಲ್ಲರೂ ಬಂದು ಪೂಜೆ ಸಲ್ಲಿಸಬಹುದು. ರಾಮ ಮಂದಿರದಲ್ಲಿ ಸೇವಾ ರೂಪದ ಪಟ್ಟಿ ಇರೋದಿಲ್ಲ. ರಾಮಭಕ್ತಿ ಬೇರೆ ಅಲ್ಲ, ದೇಶ ಭಕ್ತಿ ಬೇರೆ ಅಲ್ಲ. ರಾಮ ಸೇವೆ ಮಾಡುವ ಇಚ್ಛೆಯೊಂದಿಗೆ ದೇಶಸೇವೆ ಮಾಡೋಣ. ಜನವರಿ 23ರಿಂದ ಮಾರ್ಚ್ 10ರವರಗೆ ಉತ್ಸವ ನಡೆಯುತ್ತದೆ ಎಂದು ಪೇಜಾವರ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.