ಮಂಗಳೂರು(ಉಡುಪಿ): ಉಡುಪಿ ನೇಜಾರಿನ ತೃಪ್ತಿ ಲೇಔಟ್ ನಲ್ಲಿ ವಾಸವಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆಯ ಕುರಿತಂತೆ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಸಂಭ್ರಮಿಸಿ ಸಂದೇಶ ಹರಿಯಬಿಟ್ಟಿದ್ದ ಹಿಂದೂ ಮಂತ್ರ ಎಂಬ ಹೆಸರಿನ ಖಾತೆ ವಿರುದ್ಧ ಉಡುಪಿಯ ಸೆನ್ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
‘ಹಿಂದೂ ಮಂತ್ರ’ ಎಂಬ ಪೇಜ್ನಲ್ಲಿ ಕೊಲೆ ಆರೋಪಿಯನ್ನು ಸಾಧಕನಂತೆ ಬಿಂಬಿಸಿರುವುದು ಕಂಡುಬಂದಿದೆ. ಉಡುಪಿಯಲ್ಲಿ ನಡೆದ ಒಂದೇ ಕುಟುಂಬದ ನಾಲ್ವರ ಕಗ್ಗೊಲೆ ಪ್ರಕರಣ ಸಂಬಂಧ ಕಿಡಿಗೇಡಿಗಳು ಹತ್ಯೆಯನ್ನು ಸಂಭ್ರಮಿಸಿ ಹಿಂದೂ ಮಂತ್ರ ಹೆಸರಿನ ಇನ್ ಸ್ಟಾಗ್ರಾಮ್ ಪೇಜ್ ನಲ್ಲಿ ಪೋಸ್ಟ್ ಮಾಡಲಾಗಿತ್ತು. ಈ ಪೋಸ್ಟ್ ನಲ್ಲಿ, 15 ನಿಮಿಷದಲ್ಲಿ ನಾಲ್ಕು ಮುಸ್ಲಿಮರನ್ನು ಕೊಂದು ವಿಶ್ವ ದಾಖಲೆ ನಿರ್ಮಿಸಿದ್ದಾನೆ ಎಂದು ಬರೆಯಲಾಗಿದೆ. ಮಾತ್ರವಲ್ಲದೆ, ಹತ್ಯೆಯ ಆರೋಪಿ ಪ್ರವೀಣ್ ಅರುಣ್ ಚೌಗುಲೆ ಭಾವಚಿತ್ರದಲ್ಲಿ ತಲೆಗೆ ಕಿರೀಟದ ಎಮೋಜಿ ತೊಡಿಸಿರುವುದು ಕಂಡುಬಂದಿದೆ. ಇದರೊಂದಿಗೆ, ಉಡುಪಿಯ ಹುಡುಗಿಯರ ವಿಚಾರದಲ್ಲಿ ಯಾರೂ ಕೂಡಾ ಬರಲಿಲ್ಲ. ಹೀಗಾಗಿ ನಾವು ಕೂಡಾ ಈ ವಿಚಾರಕ್ಕೆ ಬರುವುದಿಲ್ಲ ಎಂದು ಬರೆಯಲಾಗಿದೆ.