ಉತ್ತರಾಖಂಡದಲ್ಲಿ ನಿರ್ಮಾಣ ಹಂತದ ಸುರಂಗ ಕುಸಿತ – ವಾರ ಕಳೆದರೂ ಹೊರ ಬಾರದ ಕಾರ್ಮಿಕರು – ಕಳೆದ ಎಂಟು ದಿನಗಳಿಂದ ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರು – ಕುಟುಂಬದಲ್ಲಿ ಮಡುಗಟ್ಟಿದ ಆತಂಕ

ಮಂಗಳೂರು(ಉತ್ತರಾಖಂಡ): ಉತ್ತರಾಖಂಡದಲ್ಲಿ ನಿರ್ಮಾಣ ಹಂತದ ಸುರಂಗ ಕುಸಿದು ಅವಶೇಷಗಳಡಿ ಸಿಲುಕಿರುವ 41 ಕಾರ್ಮಿಕರನ್ನು ರಕ್ಷಿಸಲು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಕಾರ್ಮಿಕರು ಕಳೆದ 170 ಗಂಟೆಗಳಿಂದ ಸುರಂಗದ ಒಳಗೆ ಸಿಲುಕಿರುವುದರಿಂದ ಅವರ ಆರೋಗ್ಯದ ಕುರಿತು ಆತಂಕ ವ್ಯಕ್ತವಾಗಿದೆ.

ಕುಸಿದ ಸುರಂಗದ ಒಳಗೆ ಸಿಲುಕಿರುವ ಕಾರ್ಮಿಕರು ಇರುವ ಸ್ಥಳವನ್ನು ತಲುಪಲು ಮೇಲಿನಿಂದ ಲಂಬವಾಗಿ ರಂಧ್ರ ಕೊರೆಯಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ಅತ್ಯಧಿಕ ಕಾರ್ಯಕ್ಷಮತೆಯ ಕೊರೆಯುವ ಯಂತ್ರ ಮಧ್ಯಪ್ರದೇಶದ ಇಂದೋರ್ ನಿಂದ ತರಿಸಲಾಗಿದ್ದು ನ.18ರಂದು ಸಂಜೆ ಲಂಬ ರಂಧ್ರ ಕೊರೆಯಲು ಆರಂಭಿಸಲಾಗಿದೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಹಾಗೂ ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ರವಿವಾರ ದುರಂತ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿ ರಕ್ಷಣೆ, ಪರಿಹಾರ ಕಾರ್ಯಾಚರಣೆಯನ್ನು ಪರಿಶೀಲಿಸಿದ್ದಾರೆ. ”ನಾವು ಎಲ್ಲಾ ರೀತಿಯಿಂದಲೂ ಕಾರ್ಯ ನಿರ್ವಹಿಸುತ್ತಿದ್ದೇವೆ. ಇಲ್ಲಿ ಎಲ್ಲಾ ರೀತಿಯ ತಜ್ಞರ ತಂಡ ಕಾರ್ಯ ನಿರ್ವಹಿಸುತ್ತಿದೆ” ಎಂದು ಧಾಮಿ ತಿಳಿಸಿದ್ದಾರೆ.

ರಕ್ಷಣಾ ಕಾರ್ಯಾಚರಣೆಗೆ ಅಂತರಾಷ್ಟ್ರೀಯ ಸುರಂಗ ತಜ್ಞರನ್ನು ಕರೆಸಲಾಗಿದೆ. ಇಂಟರ್‌ನ್ಯಾಷನಲ್ ಟನಲಿಂಗ್‌ ಅಂಡರ್‌ ಗ್ರೌಂಡ್‌ ಸ್ಪೇಸ್‌ ಪ್ರೊಫೆಸರ್‌ ಅರ್ನಾಲ್ಡ್‌ ಡಿಕ್ಸ್‌ ಸಿಲ್ಕ್ಯಾರಾ ಸುರಂಗದ ಬಳಿಗೆ ಆಗಮಿಸಿದ್ದು ಕಾರ್ಮಿಕರ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ನ.12 ರಂದು ಉತ್ತರಕಾಶಿಯಲ್ಲಿ ನಿರ್ಮಾಣ ಹಂತದಲ್ಲಿರುವ ಸಿಲ್ಕ್ಯಾರಾ ಸುರಂಗದ ಒಂದು ಭಾಗ ಕುಸಿದ ಪರಿಣಾಮ ಸ್ಥಳದಲ್ಲಿದ್ದ 41 ಕಾರ್ಮಿಕರು ಸುರಂಗದೊಳಗೆ ಸಿಲುಕಿಕೊಂಡು ಇಂದಿಗೆ ಎಂಟು ದಿನಗಳೇ ಕಳೆದಿವೆ. ಕಾರ್ಮಿಕರನ್ನು ಸ್ಥಳಾಂತರಿಸಲು ನಡೆಯುತ್ತಿರುವ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ಹಲವು ಅಡೆತಡೆಗಳು ಉಂಟಾಗುತ್ತಿವೆ. ಭೂಕುಸಿತ ಸಹ ಸಂಭವಿಸಿದ್ದು, ಇದು ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವೀಡಿಯೋಗಾಗಿ ಕ್ಲಿಕ್‌ ಮಾಡಿ

 

LEAVE A REPLY

Please enter your comment!
Please enter your name here