1.5 ಕೋಟಿ ಬೆಲೆಯ ಅಂಬರ್ ಗ್ರೀಸ್ ಮಾರಾಟಕ್ಕೆ ಯತ್ನ-ಮೂವರು ಆರೋಪಿಗಳ ಬಂಧನ-ಸಿಸಿಬಿ ಪೊಲೀಸರ ಕಾರ್ಯಾಚರಣೆ

ಮಂಗಳೂರು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ತಿಮಿಂಗಿಲದ ವಾಂತಿ ಅಂಬರ್ ಗ್ರೀಸ್ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಅಂಬರ್ ಗ್ರೀಸ್, ಕಾರು, ಮೊಬೈಲ್‌ ಸೇರಿದಂತೆ ಒಟ್ಟು 1,62,80,000/- ರೂ ಮೌಲ್ಯದ ಸೊತ್ತು ವಶಕ್ಕೆ ಪಡೆದುಕೊಳ್ಳಲಾಗಿದೆ.

ನ.25 ರಂದು ಮಂಗಳೂರು ನಗರದ ಪಂಪ್ ವೆಲ್ ನ ಇಂಡಿಯಾನ ಆಸ್ಪತ್ರೆಯ ಬಳಿ 4 ಜನ ವ್ಯಕ್ತಿಗಳು ಸ್ವಿಪ್ಟ್ ಕಾರಿನಲ್ಲಿ ತಿಮಿಂಗಿಲದ ವಾಂತಿ ಅಂಬರ್ ಗ್ರೀಸ್ ಎಂಬ ಬೆಲೆಬಾಳುವ ಉತ್ಪನ್ನವನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ದಾಳಿ ನಡೆಸಿದ ಮಂಗಳೂರು ಸಿಸಿಬಿ ಪೊಲೀಸರು ಮೂರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಚಿಕ್ಕಮಗಳೂರು ತಮಿಳ್ ಕಾಲೊನಿ ನಿವಾಸಿ ಪ್ಯಾರೇಜಾನ್ ಯಾನೆ ಸೇಟು (37), ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಮಂಗಿಲಪದವು ಪಾತಿರತೋಟ ನಿವಾಸಿ ಬದ್ರುದ್ದೀನ್ ಯಾನೆ ಬದ್ರು (28), ತಮಿಳುನಾಡಿನ ನಾಗಪಟ್ಟಿನಂ ನ ಸನ್ನಧಿ ಕೋಯಿಲ್ ಟೆಂಪಲ್ ಸ್ಟ್ರೀಟ್ ನಿವಾಸಿ ರಾಜೇಶ್.ಆರ್ (22) ಎಂದು ಗುರುತಿಸಲಾಗಿದೆ.

ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಮಾರ್ಗದರ್ಶನದಲ್ಲಿ ಡಿಸಿಪಿ  ಸಿದ್ದಾರ್ಥ ಗೋಯಲ್ ಮತ್ತು ದಿನೇಶ್ ಕುಮಾರ್ ನಿರ್ದೇಶನದಂತೆ ಮಂಗಳೂರು ಸಿಸಿಬಿ ಘಟಕದ ಎಸಿಪಿ ಪಿ.ಎ.ಹೆಗಡೆ ನೇತೃತ್ವದಲ್ಲಿ ಸಿಸಿಬಿ ಘಟಕದ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here