ಮಂಗಳೂರು(ಸವಣೂರು):ಕಾರು ಮತ್ತು ಸ್ಕೂಟರೊಂದರಲ್ಲಿ ಸವಣೂರು ಪಣೆಮಜಲು ಪ್ರಗತಿಪರ ಕೃಷಿಕ ಎ.ಆರ್.ಚಂದ್ರ ಎಂಬವರ ಎಡಪತ್ಯ ಫಾರ್ಮ್ಸ್ ಗೆ ಬಂದ ಕಳ್ಳರಿಬ್ಬರ ಪೈಕಿ ಓರ್ವ ಸಿಕ್ಕಿಬಿದ್ದಿದು ಪೊಲೀಸರ ಅತಿಥಿಯಾಗಿದ್ದಾನೆ. ಮತ್ತೋರ್ವ ಕಳ್ಳನನ್ನು ಹಿಡಿಯಲು ಪೊಲೀಸರು ಬಲೆ ಬೀಸಿದ್ದಾರೆ.
ನ.25ರಂದು ಮುಂಜಾನೆ 03.30ರ ಸುಮಾರಿಗೆ ಚಂದ್ರ ಅವರ ಪುತ್ರ ನಿಶ್ಚಲ್‌ರಾಮ ಮೈಸೂರಿನಿಂದ ತನ್ನ ಮೋಟಾರ್ ಬೈಕಿನಲ್ಲಿ ಮನೆಗೆ ತಲುಪಿದ್ದು, ಆ ವೇಳೆ ಮನೆಯಂಗಳದಲ್ಲಿ ಕಾರು ಮತ್ತು ಸ್ಕೂಟರೊಂದು ನಿಂತಿರುವುದು ಗಮನಕ್ಕೆ ಬಂದಿದೆ. ಅದಾಗಲೇ ಸ್ಕೂಟರ್ ನಲ್ಲಿ ಎರಡು ಗೋಣಿ ಸುಳಿದ ಅಡಿಕೆಯನ್ನು ಇಟ್ಟಿದ್ದು, ಸೋಲಾರ್ ಡ್ರೈಯರ್ ನಲ್ಲಿದ್ದ ಅಡಿಕೆಯನ್ನು ಗೋಣಿಚೀಲದಲ್ಲಿ ತುಂಬಿಸಿ ಕಾರಿಗೆ ತುಂಬಿಸುತ್ತಿರುವುದು ಕಂಡುಬಂದಿದೆ. ಪ್ರಶ್ನಿಸಿದ ನಿಶ್ಚಲ್‌ರಾಮ ಅವರಿಗೆ ತಲವಾರು ತೋರಿಸಿ ಅಡ್ಡ ಬಂದರೆ ಕೊಲ್ಲುವುದಾಗಿ ಬೆದರಿಕೆ ಹಾಕಿ ತಲುವಾರಿನಿಂದ ದಾಳಿ ಮಾಡಿದ್ದು ನಿಶ್ಚಲ್‌ರಾಮ್ ಕೈಗೆ ಗಾಯವಾಗಿದೆ. ಬೊಬ್ಬೆ ಹೊಡೆದು ಮನೆಯವರ ಮತ್ತು ನೆರೆಹೊರೆಯವರ ಸಹಾಯದಿಂದ ಇಬ್ಬರು ಕಳ್ಳರ ಪೈಕಿ ಓರ್ವನನ್ನು ಹಿಡಿಯಲಾಗಿದೆ. ಸಿಕ್ಕಿಬಿದ್ದರುವಾತ ತನ್ನನ್ನು ಬಶೀರ್ ಎಂದು ಪರಿಚಯಿಸಿಕೊಂಡಿದ್ದು ಕಳೆದ ಹಲವು ದಿನಗಳಿಂದ ನಿರಂತರವಾಗಿ ಅಡಿಕೆ ಕಳ್ಳತನ ಮಾಡಿರುವುದನ್ನು ಮತ್ತು ಹಕೀಮ್ ಎಂಬಾತನ ಸೂಚನೆ ಮೇರೆಗೆ ಕಳ್ಳತನ ಮಾಡಿರುವುದಾಗಿಯೂ ಒಪ್ಪಿಕೊಂಡಿದ್ದಾನೆ. ಸ್ಕೂಟರ್ ನಲ್ಲಿ ಹೇರಿಸಿಟ್ಟಿದ್ದ ಎರಡು ಗೋಣಿ ಅಡಿಕೆಯೊಂದಿಗೆ ಹಕೀಮ್ ಪರಾರಿಯಾಗಿದ್ದಾನೆ. ಬಶೀರ್ ನನ್ನು ಬೆಳ್ಳಾರೆ ಠಾಣೆ ಪೊಲೀಸರಿಗೆ ಒಪ್ಪಿಸಲಾಗಿದ್ದು, ಘಟನೆಗೆ ಸಂಬಂಧಪಟ್ಟಂತೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ