ಮಂಗಳೂರು(ವಾರಾಣಸಿ): ದೇವ್ ದೀಪಾವಳಿ ಹಿನ್ನೆಲೆಯಲ್ಲಿ ಕಾಶಿಯಲ್ಲಿ 21 ಲಕ್ಷಕ್ಕೂ ಹೆಚ್ಚು ಮಣ್ಣಿನ ಹಣತೆಗಳಲ್ಲಿ ದೀಪಗಳನ್ನು ಬೆಳಗಿಸಲಾಯಿತು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ನ.27ರ ರಾತ್ರಿ ಮೊದಲ ದೀಪ ಬೆಳಗುವ ಮೂಲಕ ದೇವ್ ದೀಪಾವಳಿಗೆ ಚಾಲನೆ ನೀಡಿದರು.
ನಗರದ ಜನರು, ಪ್ರವಾಸಿಗರು ಸೇರಿದಂತೆ 70 ದೇಶಗಳ ರಾಯಭಾರಿಗಳು ಮತ್ತು 150 ಪ್ರತಿನಿಧಿಗಳು ಕುಟುಂಬ ಸಮೇತ ಈ ಬೆಳಕಿನ ಹಬ್ಬದಲ್ಲಿ ಪಾಲ್ಗೊಂಡಿದ್ದು, ಕಾಶಿಯ ದೇವ್ ದೀಪಾವಳಿ ಹಬ್ಬದ ವೈಭವಕ್ಕೆ ಸಾಕ್ಷಿಯಾದರು. ಹಿಂದೂ ತಿಂಗಳ ಕೊನೆಯ ಕಾರ್ತಿಕ ಹುಣ್ಣಿಮೆಯ ರಾತ್ರಿ ಕಾಶಿ ಘಾಟ್‌ಗಳಲ್ಲಿ ನಡೆಯುವ ದೇವ್ ದೀಪಾವಳಿಗೆ ಪ್ರತಿ ವರ್ಷವೂ ಸಾವಿರಾರು ಭಕ್ತರು ಸಾಕ್ಷಿಯಾಗುತ್ತಾರೆ.
ದೇವ್ ದೀಪಾವಳಿಯಲ್ಲಿ ಬೆಳಗಿಸಿದ ದೀಪಗಳ ಪೈಕಿ ಸರ್ಕಾರವು ಗೋವಿನ ಸಗಣಿಯಿಂದ ಮಾಡಿದ ಒಂದು ಲಕ್ಷ ಸೇರಿದಂತೆ 12 ಲಕ್ಷ ದೀಪಗಳನ್ನು ಕೊಡುಗೆಯಾಗಿ ನೀಡಿತ್ತು. ಜತೆಗೆ ಸ್ವಯಂಸೇವಾ ಸಂಸ್ಥೆಗಳು ಮತ್ತು ಸಾರ್ವಜನಿಕ ಸಹಭಾಗಿತ್ವವು ಒಟ್ಟಾಗಿ 21 ಲಕ್ಷಕ್ಕೂ ಹೆಚ್ಚು ದೀಪಗಳು ಕಾಶಿಯನ್ನು ಬೆಳಕಿನ ಸಮುದ್ರವಾಗಿ ಪರಿವರ್ತಿಸಿತ್ತು.