ಮಂಗಳೂರು: ಕೋಮು ಸಾಮರಸ್ಯದ ಜಿಲ್ಲೆಗೆ ಮತೀಯ ಸೂಕ್ಷ್ಮ ಜಿಲ್ಲೆ ಎನ್ನುವ ಹಣೆಪಟ್ಟಿಯಿಂದ ಹೊರತರಲು ಸಮಾನ ಮನಸ್ಕ ಸಂಘಟನೆ ಜೊತೆ ಸೇರಿ ವಿಶೇಷ ಕಾರ್ಯಕ್ರಮವೊಂದಕ್ಕೆ ನಿರ್ಧರಿಸಿದ್ದೇವೆ ಎಂದು ಕೆಪಿಸಿಸಿ ಉಪಾಧ್ಯಕ್ಷ ರಮಾನಾಥ ರೈ ಹೇಳಿದ್ದಾರೆ.
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಜಾತ್ಯತೀತ ಹೆಸರು ಹೇಳಿ ಬಂದ ಪಕ್ಷ ಜೆಡಿಎಸ್ ಈಗ ಬಿಜೆಪಿ ಜತೆ ಹೊಂದಾಣಿಕೆ ಮಾಡಿದೆ. ಆದರೆ ಕಾಂಗ್ರೆಸ್ ಬಿಜೆಪಿ ಜೊತೆ ಹೋರಾಟ ಮಾಡುತ್ತಿದೆ. ಜಾತ್ಯತೀತ ಸಿದ್ಧಾಂತವನ್ನು ಒಪ್ಪಿಕೊಂಡಿರುವ ಜಿಲ್ಲೆಯ ಎಲ್ಲಾ ಜೆಡಿಎಸ್ ನ ಮುಖಂಡರು, ಕಾರ್ಯಕರ್ತರು ಕಾಂಗ್ರೆಸಿಗೆ ಸೇರಬೇಕು. ಜಾತ್ಯತೀತ ಮನಸ್ಸಿರುವ ನೀವೆಲ್ಲರೂ “ಕೈ” ಗೆ ಸೇರಬೇಕು. ಮತೀಯವಾದಿಗಳ ವಿರುದ್ಧ ಸಂಘಟಿತ ಹೋರಾಟ ಅನಿವಾರ್ಯ. ಯಾರೆಲ್ಲಾ ಬರ್ತೀರೋ ಎಲ್ಲರೂ ಒಟ್ಟಾಗಿ ಕೆಲಸ ಮಾಡುವ. ಇದರಿಂದ ಪಕ್ಷಕ್ಕೆ ಜಾತ್ಯತೀತ ಚಳುವಳಿಗೆ ಶಕ್ತಿ ಬರಲಿದೆ ಎಂದರು.
ಅನೇಕ ವಿದ್ಯಾಸಂಸ್ಥೆಗಳನ್ನು ಹೊಂದಿರುವ ದ.ಕ ಜಿಲ್ಲೆ ಅಭಿವೃದ್ಧಿ ಹೊಂದಿದ ಜಿಲ್ಲೆಯಾಗಿದೆ. ಏರ್ ಪೋರ್ಟ್, ಹಾರ್ಬರ್, ಎನ್ಐಟಿಕೆ, ಎಂಆರ್ ಪಿಎಲ್, ರೈಲು, ರಾಷ್ಟ್ರೀಯ ಹೆದ್ದಾರಿ, ಹೀಗೆ ಎಲ್ಲಾ ಸೌಲಭ್ಯಗಳನ್ನು ಹೊಂದಿರುವ ಈ ಜಿಲ್ಲೆಗೆ ಹೊರ ಊರುಗಳಿಂದ ವಿದ್ಯಾರ್ಥಿಗಳು ಬರುತ್ತಾರೆ. ಆದರೆ ವಿದ್ಯಾರ್ಥಿಗಳ ಮೇಲೆ ಹಲ್ಲೆಗಳನ್ನು ಕಂಡಿದ್ದೇವೆ. ಈಗ ಸರ್ಕಾರ ಕಠಿಣ ಕ್ರಮಗಳ ಮೂಲಕ ಇದು ಹತೋಟಿಗೆ ಬರುತ್ತಿದೆ. ಜಾತಿವಾದಿ ಶಕ್ತಿಗಳ ವಿರುದ್ಧ ಹೋರಾಟಕ್ಕೆ ಕೈಜೋಡಿಸಿ, ಕಾಂಗ್ರೆಸ್ ಜಾತ್ಯತೀತ ಸಿದ್ಧಾಂತವನ್ನು ಒಪ್ಪಿ ಬರುವವರಿಗೆ ಸ್ವಾಗತ. ಅವರನ್ನು ಗೌರವಯುತವಾಗಿ ನೋಡಿಕೊಳ್ಳಲಾಗುವುದು. ನಮ್ಮ ಮೂಲ ಕಾರ್ಯಕರ್ತರಿಗೆ ಇದರಿಂದ ಯಾವುದೇ ಸಮಸ್ಯೆ ಆಗುವುಲ್ಲ. ಜೆಡಿಎಸ್ ನಲ್ಲಿ ಬಹಳ ಜನ ಅತೃಪ್ತಿಯಲ್ಲಿದ್ದಾರೆ. ಈಗಾಗಲೇ ನಾನು ಹಲವರ ಬಳಿ ಮಾತನಾಡಿದ್ದೇನೆ. ಈಗ ಮುಕ್ತ ಆಹ್ವಾನ ನೀಡುತ್ತಿದ್ದೇನೆ. ಜಿಲ್ಲೆಯ ಭಾವೈಕ್ಯತೆ ರೂಪಿಸುವ ದೃಷ್ಟಿಯಲ್ಲಿ ಈ ನಿರ್ಧಾರ ಕೈಗೊಂಡಿದ್ದೇವೆ ಎಂದು ಅವರು ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮ.ನ.ಪ ಸದಸ್ಯರುಗಳಾದ ಶಶಿಧರ ಹೆಗ್ಡೆ, ನವೀನ ಡಿಸೋಜ, ಹಾಗೂ ಶುಭೋದಯ ಆಳ್ವಾ, ಅಪ್ಪಿ, ಹರಿನಾಥ ಜೋಗಿ, ಪ್ರಕಾಶ ಸಾಲಿಯಾನ್, ಉಪಸ್ಥಿತರಿದ್ದರು.