ಮಂಗಳೂರು (ಭುವನೇಶ್ವರ): ಬಂಗಾಳ ಕೊಲ್ಲಿಯ ಲಘು ಒತ್ತಡದ ಪ್ರದೇಶವು ಡಿ.1ರಂದು ವಾಯುಭಾರ ಕುಸಿತವಾಗಿ ಮಾರ್ಪಟ್ಟಿದ್ದು, ಡಿಸೆಂಬರ್ 4ರ ಸಂಜೆಯ ವೇಳೆಗೆ ಆಂಧ್ರಪ್ರದೇಶದ ಮಚಲಿಪಟ್ಟಣಂನಿಂದ ಚೆನ್ನೈವರೆಗಿನ ಕರಾವಳಿ ಪ್ರದೇಶದ ನಡುವೆ ಚಂಡಮಾರುತವಾಗಿ ಹಾದುಹೋಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.
ಶುಕ್ರವಾರ ಮುಂಜಾನೆ 5.30ರ ವೇಳೆ ಈ ವಾಯುಭಾರ ಕುಸಿತವು ಚೆನ್ನೈನಿಂದ 800 ಕಿಮೀ ದೂರ, ಮಚಲಿಪಟ್ಟಣಂನಿಂದ 970 ಕಿಮೀ ದೂರ, ಆಂಧ‍್ರಪ್ರದೇಶದ ಬಾಪಟ್ಲಾದಿಂದ 990 ಕಿಮೀ ದೂರ ಹಾಗೂ ಪುದುಚೆರಿಯಿಂದ 790 ಕಿಮೀ ದೂರದಲ್ಲಿನ ಸಮುದ್ರದ ಮೇಲ್ಮೈನಲ್ಲಿ ಕೇಂದ್ರೀಕೃತಗೊಂಡಿದೆ.
ಈ ಮಾರುತವು ಪಶ್ಚಿಮ ಹಾಗೂ ವಾಯುವ್ಯ ದಿಕ್ಕಿನೆಡೆಗೆ ಚಲಿಸುವ ಸಾಧ್ಯತೆ ಇದ್ದು, ಡಿ.2ರ ವೇಳೆಗೆ ತೀವ್ರ ವಾಯುಭಾರ ಕುಸಿತವಾಗಿ ಮಾರ್ಪಟ್ಟು, ಡಿ.3ರ ವೇಳೆಗೆ ಚಂಡಮಾರುತವಾಗಿ ಬದಲಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.
ಈ ಮಾರುತವು ಅದೇ ದಿಕ್ಕಿನಲ್ಲಿ ಚಲಿಸಿ, ಡಿ.4ರ ಸಂಜೆ ವೇಳೆಗೆ ಚಂಡಮಾರುತವಾಗಿ ರೂಪಾಂತರಗೊಂಡು ದಕ್ಷಿಣ ಆಂಧ್ರ ಪ್ರದೇಶ ಹಾಗೂ ಅದಕ್ಕೆ ಹೊಂದಿಕೊಂಡಿರುವ ಉತ್ತರ ತಮಿಳುನಾಡಿನ ಕರಾವಳಿ ಪ್ರದೇಶವನ್ನು ಚೆನ್ನೈ ಹಾಗೂ ಮಚಲಿಪಟ್ಟಣಂ ನಡುವೆ ಹಾದುಹೋಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.