ಮಂಗಳೂರು(ಹೊಸದಿಲ್ಲಿ): ಸ್ವಘೋಷಿತ ದೇವಮಾನವ ನಿತ್ಯಾನಂದನ ಕೈಲಾಸ ದೇಶದ ಜೊತೆಗೆ ಸಹಕಾರದ ಒಪ್ಪಂದಕ್ಕೆ ಸಹಿ ಹಾಕಿದ್ದರೆನ್ನಲಾದ ಪರಗ್ವೇ ದೇಶದ ಹಿರಿಯ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ.
ದೇಶದ ಕೃಷಿ ಸಚಿವರ ಚೀಫ್ ಆಫ್ ಸ್ಟಾಫ್ ಹುದ್ದೆಯಿಂದ ತಮ್ಮನ್ನು ವಜಾಗೊಳಿಸಲಾಗಿದೆ ಎಂದು ಅರ್ನಾಲ್ಡೊ ಚಮೊರ್ರೊ ಎಂಬ ಹೆಸರಿನ ಅಧಿಕಾರಿ ಹೇಳಿದ್ದಾರೆ. ”ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ” ಎಂಬುದು ದಕ್ಷಿಣ ಅಮೆರಿಕನ್ ದ್ವೀಪ ಎಂದು ತಮ್ಮನ್ನು ನಂಬಿಸಿದ ಅಲ್ಲಿನ ಅಧಿಕಾರಿಗಳೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದಕ್ಕೆ ಅಮಾನತುಗೊಂಡಿರುವೆ ಎಂದು ಅರ್ನಾಲ್ಡೊ ಹೇಳಿಕೊಂಡಿದ್ದಾರೆ. ಅಧಿಕಾರಿಗಳು ಬಂದು ಪರಗ್ವೇ ದೇಶಕ್ಕೆ ಸಹಾಯ ಮಾಡುವ ಇಂಗಿತ ವ್ಯಕ್ತಪಡಿಸಿದರು, ಹಲವು ಯೋಜನೆಗಳನ್ನು ಪ್ರಸ್ತುತಪಡಿಸಿದು, ನಾವು ಅವರನ್ನು ಆಲಿಸಿದೆವು, ಎಂದು ಹೇಳಿದ ಅವರು ತಮ್ಮನ್ನು ಮೂರ್ಖರನ್ನಾಗಿಸಲಾಗಿದೆ ಎಂಬುದನ್ನು ಒಪ್ಪಿಕೊಂಡರು.
ನಕಲಿ ಅಧಿಕಾರಿಗಳು ತಮ್ಮ ಸಚಿವ ಕಾರ್ಲೊಸ್ ಗಿಮಿನೆಝ್ ಅವರನ್ನೂ ಭೇಟಿಯಾದರು ಅವರ ಉದ್ದೇಶ ತಿಳಿದಿಲ್ಲ ಎಂದು ಅವರು ಹೇಳಿದರು. ಎರಡೂ ರಾಷ್ಟ್ರಗಳ ನಡುವೆ ರಾಜತಾಂತ್ರಿಕ ಸಂಬಂಧಗಳನ್ನು ಹೊಂದುವ ಬಗ್ಗೆ ಈ ಸಹಿ ಹಾಕಲಾಗಿತ್ತು. ಒಪ್ಪಂದದಲ್ಲಿ ಪರಗ್ವೇ ಅಧಿಕಾರಿ ನಿತ್ಯಾನಂದನನ್ನು “ಮಾನ್ಯ ನಿತ್ಯಾನಂದ ಪರಮಶಿವಂ, ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸದ ಸಾರ್ವಭೌಮ ನಾಯಕ” ಎಂದು ಸಂಬೋಧೀಸಿದ್ದರಲ್ಲದೆ ಹಿಂದೂ ಧರ್ಮ, ಮಾನವ ಜನಾಂಗ ಮತ್ತು ರಿಪಬ್ಲಿಕ್ ಆಫ್ ಪರಗ್ವೇಗೆ ಅವರ ಕೊಡುಗೆಗಳನ್ನು ಶ್ಲಾಘಿಸಿದ್ದರು.