ಮಂಗಳೂರು: ನಗರದ ಜೆಪ್ಪು ಸಮೀಪದ ಗುಜ್ಜರಕೆರೆ ಎಂಬಲ್ಲಿನ ಲೇಕ್ ವೀವ್ ಅಪಾರ್ಟ್‌ಮೆಂಟ್‌ನಲ್ಲಿ ಮಗುವನ್ನು ನೀರಲ್ಲಿ ಮುಳುಗಿಸಿ ಬಳಿಕ ತಾಯಿ ನೇಣಿಗೆ ಶರಣಾಗಿರುವ ಘಟನೆ ಡಿ.2ರ ಸಂಜೆ ನಡೆದಿದೆ.
ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ಫಾತಿಮಾ ರುಕಿಯಾ (23) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಡಿ.2ರ ಪೂರ್ವಾಹ್ನ 11:30ರಿಂದ ಮಧ್ಯಾಹ್ನ 1:30ರ ಮಧ್ಯೆ ಈ ಕೃತ್ಯ ನಡೆದಿದೆ ಎನ್ನಲಾಗಿದೆ. ಫಾತಿಮಾ ರುಕಿಯಾ ತನ್ನ ನಾಲ್ಕುವರೆ ತಿಂಗಳ ಗಂಡು ಮಗುವನ್ನು ನೀರಲ್ಲಿ ಮುಳುಗಿಸಿದ ಬಳಿಕ ನೇಣು ಬಿಗಿದು ಆತ್ಮಹತ್ಯೆಗೈದಿರುವುದಾಗಿ ತಿಳಿದು ಬಂದಿದೆ.
ಒಂದೂವರೆ ವರ್ಷದ ಹಿಂದೆ ಡಾ. ಮುಹಮ್ಮದ್ ಉನೈಸ್ ಅವರ ಜೊತೆ ಫಾತಿಮಾ ರುಕಿಯಾ ಅವರ ವಿವಾಹವಾಗಿತ್ತು. ಈ ದಂಪತಿಗೆ ನಾಲ್ಕುವರೆ ತಿಂಗಳ ಗಂಡು ಮಗು ಇತ್ತು. ಇತ್ತೀಚೆಗೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಫಾತಿಮಾ ರುಕಿಯಾ ಡಿ.2ರಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಡಾ. ಮುಹಮ್ಮದ್ ಉನೈಸ್ ಅವರು ಮಧ್ಯಾಹ್ನ ಮನೆಗೆ ತೆರಳಿದಾಗ ಬಾಗಿಲು ಮುಚ್ಚಲ್ಪಟ್ಟಿತ್ತು. ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ಬಾಗಿಲು ಮುರಿದು ಒಳಪ್ರವೇಶಿಸಿದ್ದಾರೆ. ಆವಾಗ ಕೃತ್ಯ ಬೆಳಕಿಗೆ ಬಂದಿದೆ ಎಂದು ಪ್ರಕರಣ ದಾಖಲಿಸಿರುವ ಪಾಂಡೇಶ್ವರ ಪೊಲೀಸರು ತಿಳಿಸಿದ್ದಾರೆ.