ಮಂಗಳೂರು: ನಗರದ ಬಂದರು ಮೀನುಗಾರಿಕೆ ಧಕ್ಕೆ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಅವರು ಡಿ.2ರಂದು ಧಕ್ಕೆಯಲ್ಲಿ ಮಂಗಳೂರು ಟ್ರಾಲ್ ಬೋಟ್ ಮೀನುಗಾರರ ಸಂಘ ಹಾಗೂ ಕರ್ನಾಟಕ ಪರ್ಸೀನ್ ಮೀನುಗಾರರ ಸಂಘದ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಧಕ್ಕೆ ಅಭಿವೃದ್ಧಿಗೆ ತ್ವರಿತಗತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು. ಕೇಂದ್ರ ಸರಕಾರದೊಂದಿಗೆ ಹಾಗೂ ರಾಜ್ಯ ಮೀನುಗಾರಿಕಾ ಸಚಿವರೊಂದಿಗೆ ಸಭೆ ನಡೆಸಲಾಗುವುದು ಎಂದು ಅವರು ತಿಳಿಸಿದರು. ರಾಜ್ಯದಲ್ಲಿ ಇರುವ ಏಕೈಕ ಪ್ರಮುಖ ಬಂದರು ಇದಾಗಿದ್ದು, ಸಾವಿರಾರು ಮಂದಿಗೆ ಬದುಕು ನೀಡಿದೆ. ಪಾರ್ಕಿಂಗ್ ಸೇರಿದಂತೆ ಪ್ರಮುಖ ಸಮಸ್ಯೆಗಳನ್ನು ಶೀಘ್ರದಲ್ಲೇ ಪರಿಹರಿಸಲಾಗುವುದು. ಧಕ್ಕೆ ಸಮೀಪದ ಮಹಾನಗರಪಾಲಿಕೆ ಸ್ಥಳವನ್ನು ಪಾರ್ಕಿಂಗ್‍ಗೆ ಬಳಸಲು ಪರಿಶೀಲಿಸಲಾಗುವುದು ಎಂದು ಸಚಿವರು ತಿಳಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್, ಜಿ.ಪಂ. ಸಿಇಓ ಡಾ. ಆನಂದ್, ಮಾಜಿ ಶಾಸಕ ಜೆ.ಆರ್.ಲೋಬೋ, ಸ್ಥಳೀಯ ಕಾರ್ಪೊರೇಟರ್ ಅಬ್ದುಲ್ ಲತೀಫ್, ಮೀನುಗಾರ ಮುಖಂಡರಾದ ಚೇತನ್ ಬೆಂಗ್ರೆ, ಮೋಹನ್ ಬೆಂಗ್ರೆ ಮತ್ತಿತರರು ಇದ್ದರು. ಸಚಿವರು ಇದಕ್ಕೂ ಮೊದಲು ಮೀನುಗಾರಿಕೆ ಧಕ್ಕೆ, ಅಳಿವೆ ಬಾಗಿಲು, ಮೀನು ಹರಾಜು ಕೇಂದ್ರ, ಮಾರಾಟ ಕೇಂದ್ರ ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೋಟ್ ಮಾಲೀಕರು ಮತ್ತು ಕಾರ್ಮಿಕರೊಂದಿಗೆ ಸಂವಾದ ನಡೆಸಿ, ಸಮಸ್ಯೆಗಳನ್ನು ಆಲಿಸಿದರು.