ಛಲದಂಕ ಮಲ್ಲನ ಮಲ್ಲ ಸಾಧನೆ – ಪ್ರತಿಷ್ಠಿತ ‘ಮಾಸ್ಟರ್ ಶೆಫ್ ಇಂಡಿಯಾ’ ಗೆದ್ದ ಕುಡ್ಲದ ಯುವಕ ಮುಹಮ್ಮದ್ ಆಶಿಕ್

ಮಂಗಳೂರು: ‘ಸೋನಿ ಲೈವ್’ ಓಟಿಟಿ ಪ್ಲಾಟ್ ಫಾರ್ಮ್ ಮುಂಬೈನಲ್ಲಿ ಆಯೋಜಿಸಿದ್ದ ‘ಮಾಸ್ಟರ್ ಶೆಫ್ ಇಂಡಿಯಾ’ ಸ್ಪರ್ಧೆಯಲ್ಲಿ ಮಂಗಳೂರಿನ ಯುವಕ ಮುಹಮ್ಮದ್ ಆಶಿಕ್(24) ವಿಜೇತರಾಗಿದ್ದಾರೆ.

ಫೈನಲ್ ತಲುಪಿದ ರುಖ್ಸಾರ್ ಸಯೀದ್, ಸೂರಜ್ ಥಾಪಾ, ನಂಬಿ ಜೆಸ್ಸಿಕಾ ಮರಕ್ ಸೇರಿದಂತೆ ನಾಲ್ವರಲ್ಲಿ ಒಬ್ಬರಾಗಿದ್ದ ಮುಹಮ್ಮದ್ ಆಶಿಕ್, ಡಿ.8ರಂದು ಪ್ರಸಾರವಾದ ಸ್ಪರ್ಧೆಯ ಫೈನಲ್ ಸಂಚಿಕೆಯಲ್ಲಿ ವಿಜೇತರಾಗಿ ಹೊರಹೊಮ್ಮಿದ್ದು, ‘ಮಾಸ್ಟರ್ ಶೆಫ್ ಇಂಡಿಯಾ’ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಪ್ರಪ್ರಥಮ ಬಾರಿಗೆ ದಕ್ಷಿಣ ಭಾರತೀಯ ಯುವಕನೊಬ್ಬ ಪ್ರತಿಷ್ಠಿತ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಪಾಲ್ಗೊಂಡು ವಿಜಯಿಯಾದ ಹಿರಿಮೆಗೆ ಕುಡ್ಲದ ಯುವಕ ಪಾತ್ರರಾಗಿದ್ದಾರೆ.

ನಗರದ ಜೆಪ್ಪು ಮಹಾಕಾಳಿಪಡ್ಪುವಿನ ಅಬ್ದುಲ್ ಖಾದರ್-ಸಾರಮ್ಮ ದಂಪತಿಯ ಏಕೈಕ ಪುತ್ರನಾಗಿರುವ ಮುಹಮ್ಮದ್ ಆಶಿಕ್‌ ಗೆ ಸಣ್ಣ ವಯಸ್ಸಿನಲ್ಲೇ ನಾನಾ ವಿಧದದ ಅಡುಗೆಯಲ್ಲಿ ಆಸಕ್ತಿಯಿತ್ತು. ಹೋಟೆಲ್ ಮ್ಯಾನೇಜ್ ಮೆಂಟ್ ಕಲಿಯಬೇಕೆಂಬ ಬಯಕೆ ಇದ್ದರೂ, ಮನೆಯ ಆರ್ಥಿಕ ಸ್ಥಿತಿಗತಿ ಅದಕ್ಕೆ ಅವಕಾಶ ನೀಡಲಿಲ್ಲ. ನಗರದ ಕಾಶಿಯಾ ಮತ್ತು ರೊಝಾರಿಯೋ ಶಿಕ್ಷಣ ಸಂಸ್ಥೆಯಲ್ಲಿ ಕನ್ನಡ ಮಾಧ್ಯಮದಲ್ಲೇ ಕಲಿತ ಮುಹಮ್ಮದ್ ಆಶಿಕ್ ದ್ವಿತೀಯ ಪಿಯುಸಿ ತರಗತಿ ತೇರ್ಗಡೆ ಹೊಂದಿದ ಬಳಿಕ ಶಿಕ್ಷಣ ಮುಂದುವರಿಸಲಾಗದೆ ಮಂಗಳೂರಿನ ಫಿಝಾ ಮಾಲ್‌ನ ರೆಡಿಮೇಡ್ ಶಾಪ್ ಒಂದರಲ್ಲಿ ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡತೊಡಗಿದರು. ಆದರೆ ಮನಸ್ಸೆಲ್ಲಾ ಅಹಾರ ತಯಾರಿ ಅಥವಾ ಅಡುಗೆ ಮನೆಯಲ್ಲೇ ಇತ್ತು. ಈತನ ಪಾಕ ಕಲೆಯನ್ನು ಗುರುತಿಸಿದ ಸಂಬಂಧಿಕರೇ ಆದ ಬಂಟ್ವಾಳದ ಮುಹಮ್ಮದ್ ಅಲಿ ಎಂಬವರು ಆರ್ಥಿಕ ನೆರವು ನೀಡಿ ಪ್ರೋತ್ಸಾಹಿಸಿದರು.

ಆರ್ಥಿಕ ಸಮಸ್ಯೆ ಪರಿಹರಿಸಿಕೊಂಡು ಸಾಧಿಸುವ ಛಲ ಹೊಂದಿದ್ದ ಆಶಿಕ್, ಪರಿಚಯಸ್ಥರು, ಸ್ನೇಹಿತರ ಮನೆಗಳಲ್ಲಿ ನಡೆಯುವ ಸಣ್ಣ ಪುಟ್ಟ ಕಾರ್ಯಕ್ರಮಗಳಿಗೆ ತನ್ನ ಮನೆಯಲ್ಲೇ ಶುಚಿ-ರುಚಿಯಾದ ಹೊಸ ಶೈಲಿಯ, ವಿಶಿಷ್ಟ ಸ್ವಾದದ ಆಹಾರಗಳನ್ನು ತಯಾರಿಸಿ ಕೊಡುವ ಮೂಲಕ ಜೀವನಕ್ಕೊಂದು ದಾರಿ ಕಂಡುಕೊಂಡಿದ್ದರು. ಇದರೊಂದಿಗೆ ನಗರದ ಬೇರೆ ಬೇರೆ ಕಾಲೇಜುಗಳಲ್ಲಿ ನಡೆಯುವ ನಾನಾ ಕಾರ್ಯಕ್ರಮಗಳ ಸಂದರ್ಭ ‘ಸ್ಟಾಲ್’ ಹಾಕಿ ವ್ಯಾಪಾರ ಮಾಡುತ್ತಿದ್ದ ಆಶಿಕ್‌, ಆಹಾರವಲ್ಲದೆ ಕುಲ್ಕಿ ಶರ್ಬತ್ ಸಹಿತ ನಾನಾ ಬಗೆಯ ಪಾನೀಯಗಳನ್ನು ಕೂಡ ಮಾರಾಟ ಮಾಡತೊಡಗಿದರು.

20ರ ಹರೆಯದಲ್ಲೇ ನಗರದ ಬಲ್ಮಠದಲ್ಲಿ ‘ಕುಲ್ಕಿ ಹಬ್’ ತೆರೆದ ಮುಹಮ್ಮದ್ ಆಶಿಕ್ ಮತ್ತೆ ಹಿಂದಿರುಗಿ ನೋಡಲೇ ಇಲ್ಲ. ಪೂರ್ಣಪ್ರಮಾಣದಲ್ಲಿ ‘ ಶೆಫ್ ’ ಆಗಲು ನಿರ್ಧರಿಸಿ ರಾತ್ರಿ ಹಗಲೆನ್ನದೆ ಶ್ರಮಿಸಿದರು. ಹೈದರಾಬಾದ್, ಬೆಂಗಳೂರಿನಲ್ಲಿ ನಡೆದ ‘ ಶೆಫ್ ’ ಸ್ಪರ್ಧೆಯಲ್ಲಿ ಪಾಲ್ಗೊಂಡರು. ಮಂಗಳೂರಿನಲ್ಲಿ ನಡೆದ ಮಾಸ್ಟರ್ ಶೆಫ್ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದರು. ಕಳೆದ ಬಾರಿ ‘ಸೋನಿ ಟಿವಿ’ ಸಂಸ್ಥೆಯವರು ಆಯೋಜಿಸಿದ ಸ್ಪರ್ಧೆಯಲ್ಲಿ ಪಾಲ್ಗೊಂಡರೂ ಮುಂದಿನ ಹಂತಕ್ಕೆ ತಲುಪಲು ಸಾಧ್ಯವಾಗಲಿಲ್ಲ. ಆದರೆ ಮುಹಮ್ಮದ್ ಆಶಿಕ್ ಧೃತಿಗೆಡದೆ ಈ ಬಾರಿ ಮತ್ತೆ ಸ್ಪರ್ಧೆಯಲ್ಲಿ ಪಾಲ್ಗೊಂಡರು. ಛಲಬಿಡದೆ ತೀರ್ಪುಗಾರರ ಮೆಚ್ಚುಗೆಗೆ ಪಾತ್ರರಾದರು. ದೇಶಾದ್ಯಂತ ಸುಮಾರು 30 ಸಾವಿರ ಸ್ಪರ್ಧಾಳುಗಳ ಪೈಕಿ ಮುಹಮ್ಮದ್ ಆಶಿಕ್ ಬೆಂಗಳೂರಿನಲ್ಲಿ ನಡೆದ ಸ್ಪರ್ಧೆಯಲ್ಲಿ ಟಾಪ್ 12ರಲ್ಲಿ ಸ್ಥಾನ ಪಡೆದಿದ್ದರು. ನಂತರ ಹಿಂದಿರುಗಿ ನೋಡದ ಅವರು ಇದೀಗ ‘ಮಾಸ್ಟರ್ ಶೆಫ್ ಇಂಡಿಯಾ’ ವಿಜೇತರಾಗಿದ್ದಾರೆ. ಮಂಗಳೂರಿನಲ್ಲಿ ದೊಡ್ಡ ಪರದೆಯಲ್ಲಿ ಕಾರ್ಯಕ್ರಮವನ್ನು ವೀಕ್ಷಿಸಿದ ಯುವ ಸಮೂಹ ಕುಡ್ಲದ ಹುಡುಗನ ವಿಜಯದ ಘೋಷಣೆಯಾಗುತ್ತಲೇ ಸಂಭ್ರಮ ಆಚರಿಸಿದರು. ಡಿ.10ರಂದು ಆಶಿಕ್‌ ಮಂಗಳೂರಿಗೆ ಆಗಮಿಸಲಿದ್ದಾರೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

 

LEAVE A REPLY

Please enter your comment!
Please enter your name here