ಮಂಗಳೂರು(ಬೆಂಗಳೂರು): ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಡಿ.15ರಿಂದ ಪಾರ್ಸಲ್ (ಕಾರ್ಗೋ) ಸೇವಾ ಕ್ಷೇತ್ರಕ್ಕೂ ಅಧಿಕೃತವಾಗಿ ಕಾಲಿಡಲಿದೆ.
ಪಾರ್ಸೆಲ್ ಸೇವೆ ಒದಗಿಸಲು 20 ಟ್ರಕ್‌ಗಳು ಸಿದ್ಧವಾಗಿದ್ದು, ಡಿ.15ರಿಂದ ಸೇವೆ ಆರಂಭಿಸಲಿವೆ. ಇದಕ್ಕಾಗಿ 20 ಕಾರ್ಗೋ ಟ್ರಕ್ ಗಳನ್ನು ತಲಾ 17.03 ಲಕ್ಷ ರೂ. ವೆಚ್ಚದಲ್ಲಿ ಟಾಟಾ ಕಂಪನಿಯಿಂದ ಖರೀದಿಸಿದೆ. ಡಿ.15ರಂದು ಬೆಂಗಳೂರಿನ ಶಾಂತಿನಗರದಲ್ಲಿರುವ ಕೆಎಸ್ಆರ್ಟಿಸಿ ಡಿಪೋದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಕಾರ್ಗೋ ಸೇವೆಗೆ ಚಾಲನೆ ನೀಡಲಿದ್ದಾರೆ. ಬೆಂಗಳೂರು, ಮೈಸೂರು, ಮಂಗಳೂರು, ಬೆಳಗಾವಿ, ದಾವಣಗೆರೆ, ಹುಬ್ಬಳ್ಳಿ, ಶಿವಮೊಗ್ಗ, ಹೊಸಪೇಟೆ ಸೇರಿದಂತೆ ಹೆಚ್ಚು ಸರಕು ಸಾಗಾಣಿಕೆ ಬೇಡಿಕೆ ಇರುವ ಮಾರ್ಗಗಳಲ್ಲಿ ಕಾರ್ಗೋ ಸೇವೆ ಒದಗಿಸಲಾಗುತ್ತದೆ. ಹಂತ ಹಂತವಾಗಿ ಎಲ್ಲಾ ಜಿಲ್ಲಾ ಕೇಂದ್ರಗಳಿಗೂ ಕೆಎಸ್ಆರ್ಟಿಸಿಯ ಕಾರ್ಗೋ ಟ್ರಕ್‌ಗಳು ತಲುಪಲಿವೆ ಎಂದು ಕೆಎಸ್ಆರ್ಟಿಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪಾರ್ಸಲ್‌ಗಳನ್ನು ಆನ್ ಲೈನ್ ನಲ್ಲಿ ಬುಕ್ ಮಾಡಿದರೆ ಬುಕಿಂಗ್ ಮಾಡಿದ ಸ್ಥಳದಿಂದ ಕೆಎಸ್ಆರ್ಟಿಸಿ ಕಾರ್ಗೋ ಸೇವೆ ಒದಗಿಸುವ ಟ್ರಕ್‌ಗಳು ಬಂದು ಸಂಗ್ರಹ ಮಾಡಿಕೊಂಡು ತಲುಪಿಸಬೇಕಾದ ಸ್ಥಳಕ್ಕೆ ಸಾಗಾಣಿಕೆ ಮಾಡಲಿವೆ. ಹೀಗಾಗಿ ಕಾರ್ಗೋ ಸೇವೆ ಪಡೆಯಲು ಬಸ್ ನಿಲ್ದಾಣಕ್ಕೆ ಬರುವ ಅವಶ್ಯಕತೆ ಇಲ್ಲ. 20 ಕಾರ್ಗೋ ಟ್ರಕ್‌ಗಳು 6 ಟನ್ ಸಾಗಾಣಿಕೆಯ ಸಾಮರ್ಥ್ಯ ಹೊಂದಿವೆ. ಹೆಚ್ಚಿನ ಪಾರ್ಸೆಲ್ ಇರುವ ಸ್ಥಳ ಹಾಗೂ ಮಾರ್ಗಕ್ಕೆ ಈ ಟ್ರಕ್‌ಗಳನ್ನು ಬಳಕೆ ಮಾಡಿಕೊಂಡು ಪಾರ್ಸೆಲ್ ಸಾಗಾಣಿಕೆ ಮಾಡಲಿದೆ. ಕೆಲ ವರ್ಷಗಳ ಹಿಂದೆಯೇ ಕಾರ್ಗೋ ಸೇವೆಯನ್ನು ನಿಗಮ ಸಣ್ಣದಾಗಿ ಆರಂಭಿಸಿತ್ತು. ಆರಂಭಿಕ ಹಂತವಾಗಿ 109 ಕೇಂದ್ರಗಳಲ್ಲಿ ಈ ಸೇವೆ ಆರಂಭಿಸಿ ಹಂತ-ಹಂತವಾಗಿ ರಾಜ್ಯದ ಎಲ್ಲಾ ಪ್ರಮುಖ ನಿಲ್ದಾಣಗಳಿಗೂ ವಿಸ್ತರಿಸಿತ್ತು. ಈ ಪಾರ್ಸೆಲ್ ಸೇವೆಯನ್ನು ಬಸ್‌ಗಳಲ್ಲೇ ಸಾಗಿಸಲಾಗುತ್ತಿತ್ತು. ಕಾರ್ಗೋ ಸೇವೆಯಿಂದ 30 ಕೋಟಿ ಆದಾಯ ಲಭಿಸಿರುವುದರಿಂದ ಈಗ ಅಧಿಕೃತವಾಗಿ ಪ್ರತ್ಯೇಕ ಕಾರ್ಗೋ ಸೇವೆಯನ್ನೇ ಕೆಎಸ್‌ಆರ್‌ಟಿಸಿ ಪರಿಚಯಿಸುತ್ತಿದ್ದು, ವಾರ್ಷಿಕ 100 ಕೋಟಿ ರೂ. ಆದಾಯ ಸಂಗ್ರಹ ಗುರಿ ಹಾಕಿಕೊಂಡಿದೆ.