ಐಟಿ ದಾಳಿ – ಅಂದಾಜು ₹290 ಕೋಟಿ ಜಪ್ತಿ-ಏಕಕಾಲದಲ್ಲಿ ನಡೆದ ಅತಿದೊಡ್ಡ ಕಾರ್ಯಾಚರಣೆ-40 ಯಂತ್ರಗಳ ಮೂಲಕ ಹಣ ಎಣಿಕೆ

ಮಂಗಳೂರು(ಭುವನೇಶ್ವರ): ಒಡಿಶಾ ಮೂಲದ ಡಿಸ್ಟಿಲರಿ ಸಮೂಹದ ಕಚೇರಿಯಲ್ಲಿ ಶನಿವಾರವೂ ಆದಾಯ ಇಲಾಖೆಯ  ತಪಾಸಣೆ ಮುಂದುವರಿದೆ. ದಾಖಲೆಯಿಲ್ಲದೆ ಜಪ್ತಿ ಮಾಡಿದ ಮೊತ್ತ ₹290 ಕೋಟಿ ತಲುಪಬಹುದೆಂದು ಅಂದಾಜಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಏಕಕಾಲದಲ್ಲಿ ನಡೆದ ಅತಿದೊಡ್ಡ ಐಟಿ ಕಾರ್ಯಾಚರಣೆ ಇದಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ದಾಳಿಯಲ್ಲಿ ₹500 ಮುಖಬೆಲೆಯ ನೋಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಪತ್ತೆಯಾಗಿದ್ದು, ಹಣವನ್ನು ಸರ್ಕಾರಿ ಬ್ಯಾಂಕ್ ಖಾತೆಗಳಲ್ಲಿ ಜಮೆ ಮಾಡಲಾಗುತ್ತಿದೆ. ಸುಮಾರು 40ರಷ್ಟು ದೊಡ್ಡ ಮತ್ತು ಸಣ್ಣ ಯಂತ್ರಗಳ ಮೂಲಕ ಹಣ ಎಣಿಕೆ ನಡೆಯುತ್ತಿದೆ. ಹಣ ಎಣಿಕೆ ಆದಷ್ಟು ಬೇಗ ಪೂರ್ಣಗೊಳಿಸಲು ಇಲಾಖೆಯ ಹೆಚ್ಚಿನ ಅಧಿಕಾರಿಗಳು ಮತ್ತು ಬ್ಯಾಂಕ್ ಸಿಬ್ಬಂದಿ ನಿಯೋಜಿಸಲಾಗಿದೆ. ಜಪ್ತಿ ಮಾಡಲಾದ ಹಣವನ್ನು ಸರ್ಕಾರಿ ಬ್ಯಾಂಕ್‌ಗಳಿಗೆ ರವಾನಿಸಲು ಹೆಚ್ಚಿನ ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಆದಾಯ ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸೆಂಬರ್ 6ರಂದು ಬೌದ್ ಡಿಸ್ಟಿಲರಿ ಪ್ರೈವೇಟ್ ಲಿಮಿಟೆಡ್‌ನ ಒಡಿಶಾ ಹಾಗೂ ಜಾರ್ಖಂಡ್‌ನ ವಿವಿಧ ಕಚೇರಿಗಳ ಮೇಲೆ ಐ.ಟಿ ದಾಳಿ ನಡೆದಿತ್ತು.

ಜಾರ್ಖಂಡ್‌ನ ಕಾಂಗ್ರೆಸ್ ರಾಜ್ಯಸಭಾ ಸಂಸದ ಧೀರಜ್ ಪ್ರಸಾದ್ ಅವರಿಗೆ ಸಂಬಂಧಿಸಿದ ಸ್ಥಳಗಳಲ್ಲೂ ಐಟಿ ಶೋಧ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಶುಕ್ರವಾರದ ವರೆಗೆ 156 ಚೀಲಗಳಲ್ಲಿ ತುಂಬಿಟ್ಟಿರುವ ಹಣ ಪತ್ತೆ ಹಚ್ಚಲಾಗಿತ್ತು. ಬೊಲಾಂಗಿರ್ ಜಿಲ್ಲೆಯ ಸುದಾಪಾರ ಪ್ರದೇಶದಲ್ಲಿ ಶನಿವಾರದಂದು 20 ಚೀಲಗಳಲ್ಲಿ ತುಂಬಿಟ್ಟಿದ್ದ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಇದೊಂದರಲ್ಲಿಯೇ ₹50 ಕೋಟಿ ನಗದು ಇರಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.

ಡಿಸ್ಟಿಲರಿ ಸಮೂಹದ ಮೇಲೆ ನಡೆದ ಐಟಿ ದಾಳಿಯಲ್ಲಿ ಸುಮಾರು 150 ಅಧಿಕಾರಿಗಳು ಭಾಗಿಯಾಗಿದ್ದಾರೆ. ಹೈದರಾಬಾದ್‌ನ ಮತ್ತಷ್ಟು 20 ಅಧಿಕಾರಿಗಳನ್ನು ಡಿಜಿಟಲ್ ದಾಖಲೆಗಳ ಪರಿಶೀಲನೆಗಾಗಿ ನಿಯೋಜಿಸಲಾಗಿದೆ.

ಸಂಬಾಲ್‌ಪುರ, ರೂರ್ಕೆಲಾ, ಬೊಲಾಂಗಿರ್, ಸುಂದರ್‌ಗಢ, ತಿತಿಲ್‌ಗಢ, ಭುವನೇಶ್ವರದಲ್ಲಿ ಐಟಿ ದಾಳಿ ನಡೆದಿದೆ.

LEAVE A REPLY

Please enter your comment!
Please enter your name here