ಮಂಗಳೂರು(ಚಿಕ್ಕಮಗಳೂರು): ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ಬಾಳೂರು ಹೋಬಳಿ ಪ್ರಸಿದ್ಧ ಪ್ರವಾಸಿತಾಣ ರಾಣಿಝರಿ ಬಳಿಯಲ್ಲಿ ನಾಪತ್ತೆಯಾಗಿದ್ದ ಬೆಂಗಳೂರು ಮೂಲದ ಭರತ್ (30) ಎಂಬ ಯುವಕ ಶವವಾಗಿ ಪತ್ತೆಯಾಗಿದ್ದಾನೆ.
ರಾಣಿಝರಿ ಬಳಿಯ ಬೆಟ್ಟವೊಂದರಿಂದ ಸುಮಾರು ಮೂರು ಸಾವಿರ ಅಡಿ ಆಳಕ್ಕೆ ಬಿದ್ದು ಯುವಕ ಮೃತಪಟ್ಟಿದ್ದಾನೆ. ಯುವಕ ಬೆಟ್ಟದಿಂದ ಪ್ರಪಾತಕ್ಕೆ ನೆಗೆದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಡಿ.6ರಂದು ಬೆಂಗಳೂರಿನಿಂದ ದುರ್ಗದಹಳ್ಳಿ ಸಮೀಪದ ರಾಣಿಝರಿಗೆ ಟ್ರಕ್ಕಿಂಗ್ ಎಂದು ಬಂದಿದ್ದ ಯುವಕ ನಾಪತ್ತೆಯಾಗಿದ್ದ. ಕುಟುಂಬದವರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ಮೊಬೈಲ್ ನಾಟ್ ರೀಚಬಲ್ ಆಗಿತ್ತು. ರಾಣಿಝರಿ ಬಳಿ ಯುವಕನ ಬೈಕ್ ನಿಲ್ಲಿಸಲಾಗಿತ್ತು. ಬೈಕ್ ಬಳಿಯಲ್ಲಿ ಮೊಬೈಲ್, ಟೀ ಶರ್ಟ್, ಚಪ್ಪಲಿ ಸಿಕ್ಕಿದ್ದವು. ಬೈಕ್ ಗೆ ಐಡಿ ಕಾರ್ಡ್ ಮತ್ತು ಬ್ಯಾಗ್ ಸಿಕ್ಕಿಸಿ ನಾಪತ್ತೆಯಾಗಿದ್ದ.
ಡಿ.8ರಂದು ಬೆಂಗಳೂರಿನಿಂದ ಬಂದ ಕುಟುಂಬದವರು ಬಾಳೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಇಂದು ಬೆಳಿಗ್ಗೆಯಿಂದ ಯುವಕನ ಪತ್ತೆಗಾಗಿ ಶೋಧ ಕಾರ್ಯ ನಡೆಸಲಾಗಿತ್ತು. ಅರಣ್ಯ ಇಲಾಖೆ, ಪೊಲೀಸ್ ಇಲಾಖೆ, ಧರ್ಮಸ್ಥಳ ವಿಪತ್ತು ನಿರ್ವಹಣಾ ತಂಡ, ಬಣಕಲ್ ಸಮಾಜ ಸೇವಕ ಆರೀಫ್ ಮತ್ತು ಅವರ ಸ್ನೇಹಿತರು ಶೋಧ ಕಾರ್ಯದಲ್ಲಿ ತೊಡಗಿದ್ದರು. ಏಳೆಂಟು ಡ್ರೋಣ್ ಕ್ಯಾಮರಗಳನ್ನು ಬಳಸಿಯೂ ಶೋಧ ನಡೆಸಲಾಗಿತ್ತು. ಇಂದು ಮಧ್ಯಾಹ್ನದ ಹೊತ್ತಿಗೆ ಯುವಕ ಶವ ಪ್ರಪಾತದಲ್ಲಿ ಪತ್ತೆಯಾಗಿದೆ. ಶೋಧ ಕಾರ್ಯ ನಡೆಸುತ್ತಿದ್ದ ತಂಡ ಸುಮಾರು 25 ಮಂದಿಯ ತಂಡ ಮೈದಾಡಿ ಕಡೆಯಿಂದ ಬೆಟ್ಟವನ್ನು ಇಳಿದು ಬೆಳ್ತಂಗಡಿ ತಾಲ್ಲೂಕಿನ ವ್ಯಾಪ್ತಿಯಲ್ಲಿ ಶವವನ್ನು ಪತ್ತೆ ಹಚ್ಚಿದೆ. ಸುಮಾರು ನಾಲ್ಕು ಸಾವಿರ ಅಡಿಯಿಂದ ಯುವಕ ಕೆಳಗೆ ಬಿದ್ದಿದ್ದು, ಆತನ ದೇಹ ಛಿದ್ರವಾಗಿದ್ದು, ಕೊಳೆತ ಸ್ಥಿತಿಗೆ ತಲುಪಿದೆ ಎಂದು ತಿಳಿದುಬಂದಿದೆ. ರಾಣಿಝರಿ ಸಮೀಪದಲ್ಲಿರುವ ವ್ಯೂ ಪಾಯಿಂಟ್ ನಿಂದಲೇ ಯುವಕ ಕೆಳಗೆ ಹಾರಿರುವ ಸಾಧ್ಯತೆಯಿದೆ ಎನ್ನಲಾಗಿದೆ. ವ್ಯೂ ಪಾಯಿಂಟ್ ನೇರದಲ್ಲಿಯೇ ಶವ ಪ್ರಪಾತದಲ್ಲಿ ಪತ್ತೆಯಾಗಿದೆ. ಯುವಕ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ ಪೊಲೀಸರು ಅಧಿಕೃತವಾಗಿ ಯಾವುದೇ ಹೇಳಿಕೆ ನೀಡಿಲ್ಲ. ಭರತ್ ಇಂಜಿನಿಯರ್ ಪದವೀದರನಾಗಿದ್ದು, ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಎಂದು ತಿಳಿದು ಬಂದಿದೆ.