ವಿಹಾರಕ್ಕೆ ಬಂದಿದ್ದ ಪರಿಜ್ಞಾನ ಪಿಯು ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಸೋಮೇಶ್ವರದಲ್ಲಿ ಸಮುದ್ರಪಾಲು

ಮಂಗಳೂರು: ಸಮುದ್ರತೀರಕ್ಕೆ ವಿಹಾರಕ್ಕೆಂದು ತೆರಳಿದ್ದ ಇಬ್ಬರು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಸಮುದ್ರಪಾಲಾಗಿರುವ ಘಟನೆ ಇಂದು ಮಧ್ಯಾಹ್ನ ವೇಳೆ ಉಳ್ಳಾಲದ ಸೋಮೇಶ್ವರದಲ್ಲಿ ನಡೆದಿದೆ.ಮಂಜೇಶ್ವರದ ಕುಂಜತ್ತೂರು ಅಡ್ಕ ನಿವಾಸಿ ಶೇಖರ ಎಂಬವರ ಪುತ್ರ ಯೆಶ್ವಿತ್ (18), ಕುಂಜತ್ತೂರು ಮಜಲ್ ನಿವಾಸಿ ಜಯೇಂದ್ರ ಎಂಬವರ ಪುತ್ರ ಯುವರಾಜ್ (18) ಸಮುದ್ರಪಾಲಾದ ಯುವಕರೆಂದು ಗುರುತಿಸಲಾಗಿದೆ.

ಇಬ್ಬರು ಸಮೀಪದ ಸೋಮೇಶ್ವರ ಪರಿಜ್ಞಾನ ಪಿಯುಸಿ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾಗಿದ್ದಾರೆ. ಕಾಲೇಜು ಮುಗಿಸಿ ಮಧ್ಯಾಹ್ನ ಬಳಿಕ ಸಮುದ್ರ ವಿಹಾರಕ್ಕೆಂದು ತೆರಳಿದ್ದರು. ಈ ವೇಳೆ ಓರ್ವ ವಿದ್ಯಾರ್ಥಿ ಸಮುದ್ರದ ಅಲೆಗಳ ನಡುವೆ ಸಿಲುಕಿದ್ದರೆ, ಇನ್ನೋರ್ವ ವಿದ್ಯಾರ್ಥಿ ಆತನನ್ನು ಹಿಡಿಯಲು ಮುಂದಾಗಿದ್ದಾನೆ. ಇಬ್ಬರೂ ಅಲೆಗಳ ನಡುವೆ ಸಿಲುಕಿ ನಾಪತ್ತೆಯಾಗಿದ್ದಾರೆ. ಸ್ಥಳಕ್ಕೆ ಉಳ್ಳಾಲ ಠಾಣಾಧಿಕಾರಿ ಹೆಚ್.ಎನ್ ಬಾಲಕೃಷ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿಹಾರಕ್ಕೆಂದು ಬರುವ ವಿದ್ಯಾರ್ಥಿಗಳು, ಪ್ರವಾಸಿಗರು ಹೋಂಗಾಡ್೯ಗಳನ್ನು ಮತ್ತು ನಾಮಫಲಕಗಳನ್ನು ಗಮನಿಸಿಯೂ ಸಮುದ್ರಕ್ಕೆ ಇಳಿದು ಜೀವ ಕಳೆದುಕೊಳ್ಳುತ್ತಿದ್ದಾರೆ. ಆದ್ದರಿಂದ ಸ್ಥಳಕ್ಕೆ ಬರುವವರು ಮುಂಜಾಗೃತವಹಿಸಿ ವಿಹರಿಸುವಂತೆ ಉಳ್ಳಾಲ ಠಾಣಾಧಿಕಾರಿ ಎಚ್ಚರಿಕೆಯ ಸೂಚನೆ ನೀಡಿದ್ದಾರೆ.

LEAVE A REPLY

Please enter your comment!
Please enter your name here