ಮಂಗಳೂರು: ಬ್ಲೇಡ್ ಕಂಪೆನಿಯೊಂದು ಫಿಗ್ಮಿ ಹೆಸರಿನಲ್ಲಿ ಬಡವರ ಲಕ್ಷಾಂತರ ರೂ. ಹಣವನ್ನು ಗುಳುಂ ಮಾಡಿ ಕಚೇರಿಗೆ ಬೀಗ ಜಡಿದು ಪರಾರಿಯಾಗಿದೆ. ಹಣ ಕಟ್ಟಿದವರು ನಗರದ ಪಿವಿಎಸ್ ಬಿಲ್ಡಿಂಗ್ ನಲ್ಲಿರುವ ಕಚೇರಿಗೆ ಬಂದು ನೋಡಿದಾಗಲೇ ರಾಯಲ್ ಟ್ರಾವಂಕೂರು ಫಾರ್ಮರ್ಸ್ ಪ್ರೊಡ್ಯೂಸರ್ ಕಂಪೆನಿಯ ವಂಚನೆ ಬಯಲಾಗಿದೆ.
ಈ ಕಂಪೆನಿಯು ಮಂಗಳೂರಿನಲ್ಲಿ ಆರಂಭಗೊಂಡು ಸುಮಾರು ಎರಡೂವರೆ ವರ್ಷವಾಗಿದೆ. ಈ ವೇಳೆ ಜನರ ಬಳಿಗೆ ತೆರಳಿದ ಕಂಪೆನಿಯ ಸಿಬ್ಬಂದಿ ಫಿಗ್ಮಿಯ ರೀತಿ ಹಣ ಸಂಗ್ರಹಿಸಿ ನಿಮ್ಮ ಹಣವನ್ನು ಉಳಿತಾಯ ಮಾಡಿ ಕೊಡುತ್ತೇವೆ ಎಂದು ನಂಬಿಸಿದೆ. ಕಂಪೆನಿಯ ಸಿಬ್ಬಂದಿಯ ಬಣ್ಣದ ಮಾತಿಗೆ ಬಲಿಯಾಗಿ ಸಣ್ಣಪುಟ್ಟ ಉದ್ಯೋಗ ಮಾಡುವವರು ಫಿಗ್ಮಿ ಕಟ್ಟಲು ಆರಂಭಿಸಿದ್ದಾರೆ. ತಮ್ಮ ಸಣ್ಣಪುಟ್ಟ ಅವಶ್ಯಕತೆಗಳಿಗಾಗಿ ಉಳಿತಾಯ ಮಾಡಲು ಹಣಕಟ್ಟಿದವರು ಈಗ ವಂಚನೆಗೊಳಗಾಗಿದ್ದಾರೆ.
ನವೆಂಬರ್ ಅಂತ್ಯದ ಬಳಿಕ ಫಿಗ್ಮಿ ಕಲೆಕ್ಟರ್ ಬಾರದಿದ್ದರಿಂದ ಹಣ ಕಟ್ಟಿದವರು ಆತನಿಗೆ ಫೋನ್ ಮಾಡಿದ್ದಾರೆ. ಆದರೆ ಅದು ಸ್ವಿಚ್ ಆಫ್ ಆಗಿತ್ತು. ಅನುಮಾನ ಬಂದು ಕಚೇರಿಗೆ ಭೇಟಿ ನೀಡಿದಾಗ ಬೀಗ ಜಡಿದು ಸಂಸ್ಥೆ ಬಡವರ ದುಡ್ಡಿನೊಂದಿಗೆ ಪರಾರಿಯಾಗಿರುವುದು ಗಮನಕ್ಕೆ ಬಂದಿದೆ. ಡಿವೈಎಫ್ಐ ದ.ಕ.ಜಿಲ್ಲಾಧ್ಯಕ್ಷ ಬಿ.ಕೆ.ಇಮ್ತಿಯಾಝ್ ಹಣ ಕಳೆದುಕೊಂಡವರ ಬೆನ್ನಿಗೆ ನಿಂತಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ರಾಯಲ್ ಟ್ರಾವಂಕೂರು ಸಂಸ್ಥೆಯ ಮುಂಭಾಗ ಸಂತ್ರಸ್ತರು ಪ್ರತಿಭಟನೆ ನಡೆಸಿದ್ದಾರೆ. ಸರಕಾರ ಮಧ್ಯ ಪ್ರವೇಶಿಸಿ ರಾಯಲ್ ಟ್ರಾವಂಕೂರು ಸಂಸ್ಥೆಯ ಬ್ಯಾಂಕ್ ಖಾತೆಯನ್ನು ಫ್ರೀಝ್ ಮಾಡಿ ಕಳೆದುಕೊಂಡ ಹಣವನ್ನು ಮರಳಿ ಕೊಡಿಸಬೇಕೆಂದು ಆಗ್ರಹಿಸಿದ್ದಾರೆ.