ಕಾಂಗ್ರೆಸ್ ಸಭೆಯಲ್ಲಿ ಎರಡು ಗುಂಪುಗಳ ನಡುವೆ ಹೊಡೆದಾಟ-ಇಬ್ಬರಿಗೆ ಗಾಯ-ಬಿ.ಶಿವರಾಂ ಹಾಗೂ ರಾಜಶೇಖರ ಬೆಂಬಲಿಗರ ನಡುವೆ ಮಾತಿನ ಚಕಮಕಿ

ಮಂಗಳೂರು(ಹಾಸನ): ಹಾಸನ ಪಟ್ಟಣದಲ್ಲಿ ಡಿ.9ರಂದು ಆಯೋಜಿಸಿದ್ದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಎರಡು ಗುಂಪುಗಳ ನಡುವೆ ಹೊಡೆದಾಟ ನಡೆದಿದ್ದು, ಇಬ್ಬರು ಗಾಯಗೊಂಡಿದ್ದಾರೆ.

ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಾಜಿ ಸಚಿವ ಬಿ.ಶಿವರಾಂ ಅಧ್ಯಕ್ಷತೆಯಲ್ಲಿ ಪಟ್ಟಣದ ಕನ್ವೆನ್ಷನ್‌ ಹಾಲ್‌ನಲ್ಲಿ ಬೇಲೂರು ತಾಲೂಕಿನ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ಕರೆಯಲಾಗಿತ್ತು. ಈ ಸಭೆಯಲ್ಲಿ ಟಿಕೆಟ್ ಆಕಾಂಕ್ಷಿ ಜತ್ತೇನಹಳ್ಳಿ ರಾಮಚಂದ್ರ ಸೇರಿದಂತೆ ಸ್ಥಳೀಯ ಮುಖಂಡರು ಭಾಗವಹಿಸಿದ್ದರು. ಸ್ಥಳೀಯ ಮುಖಂಡ, ವಿಧಾನಸಭಾ ಚುನಾವಣೆಯ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಗ್ರಾನೈಟ್ ರಾಜಶೇಖ‌ರ್ ಬೆಂಬಲಿಗರು ಸಭೆಯಲ್ಲಿ ಭಾಗವಹಿಸಿದ್ದರು. ಬಿ.ಶಿವರಾಂ ಸಭೆಯಲ್ಲಿ ಮಾತನಾಡುತ್ತಿದ್ದ ವೇಳೆ ‘ನಮ್ಮ ಕಾರ್ಯಕರ್ತರು, ಮುಖಂಡರಲ್ಲಿ ಒಗ್ಗಟ್ಟು ಇಲ್ಲದಿರುವುದೇ ಬೇಲೂರಿನಲ್ಲಿ ಕಾಂಗ್ರೆಸ್ ಸೋಲಲು ಕಾರಣ’ ಎಂದರು. ಇದರಿಂದ ಕೆರಳಿದ ರಾಜಶೇಖ‌ರ್ ಬೆಂಬಲಿಗರು, ಬಿ.ಶಿವರಾಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಬಿ.ಶಿವರಾಂ ಹಾಗೂ ರಾಜಶೇಖರ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆದು, ವಿಕೋಪಕ್ಕೆ ತಿರುಗಿ ಬೆಂಬಲಿಗರು ಕೈಕೈ ಮಿಲಾಯಿಸಿದರು. ಸಭೆಯಲ್ಲಿ ಹಾಕಿದ್ದ ಕುರ್ಚಿಗಳನ್ನು ಹಿಡಿದು ಹೊಡೆದಾಡಿಕೊಂಡರು. ಘಟನೆಯಲ್ಲಿ ಧನಪಾಲ್ ಮತ್ತು ಹಾಲಪ್ಪ ಎಂಬುವವರಿಗೆ ಗಾಯಗಳಾಗಿದ್ದು, ಕುರ್ಚಿಗಳು ಪುಡಿಯಾಗಿವೆ. ಗಲಾಟೆ ಜೋರಾಗುತ್ತಿದ್ದಂತೆ ಸಭೆಯನ್ನು ಅರ್ಧಕ್ಕೆ ಮೊಟಕುಗೊಳಿಸಲಾಯಿತು. ಸಭೆಯಲ್ಲಿದ್ದ ನಾಯಕರು‌ ವೇದಿಕೆಯಿಂದ ಹೊರನಡೆದರು.  ಸಭೆಯಿಂದ ಗ್ರಾನೈಟ್ ರಾಜಶೇಖ‌ರ್ ಬೆಂಬಲಿಗರು ಹೊರ ನಡೆಯುತ್ತಿದ್ದಂತೆ ಮಾಜಿ ಸಚಿವ ಬಿ.ಶಿವರಾಂ ಅಧ್ಯಕ್ಷತೆಯಲ್ಲಿ ಮತ್ತೆ ಸಭೆ ಆರಂಭವಾಯಿತು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

LEAVE A REPLY

Please enter your comment!
Please enter your name here