ಸುರತ್ಕಲ್ ಟೋಲ್ ಗೇಟ್ ಅವಶೇಷಗಳಿಗೆ ಡಿಕ್ಕಿಯಾದ ಲಾರಿ-ಟೋಲ್ ಗೇಟ್ ಅವಶೇಷವನ್ನು ತೆರವುಗೊಳಿಸುವಲ್ಲಿ ಅಧಿಕಾರಿಗಳ ಅಸಡ್ಡೆ

ಮಂಗಳೂರು: ಸುರತ್ಕಲ್ ನ ಎನ್‌ಐಟಿಕೆ ಬಳಿಯ ಟೋಲ್ ಗೇಟ್ ನ ಅವಶೇಷಗಳಿಗೆ ಲಾರಿ ಡಿಕ್ಕಿಯಾಗಿ ಓರ್ವ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ದಾಖಲಾದ ಘಟನೆ ಬೆಳಗಿನ ಜಾವ 2.30ಕ್ಕೆ ನಡೆದಿದೆ. ಉಡುಪಿ ಕಡೆಯಿಂದ ಮಂಗಳೂರಿನತ್ತ ಸಂಚರಿಸುತ್ತಿದ್ದ ಲಾರಿ ಡಿಕ್ಕಿಯಾಗಿದ್ದು ಅಪಘಾತದ ತೀವ್ರತೆಗೆ ಟೋಲ್ ಗೇಟ್ ನ ಕಂಬ ಬುಡ ಸಮೇತ ಕಿತ್ತು ಬಂದಿದೆ.

ಟೋಲ್ ಬೂತ್ ನ ಒಂದು ಭಾಗ ಸಂಪೂರ್ಣ ಹಾನಿಯಾಗಿದ್ದು, ಕಂಬಗಳು ಜಾರಿ ಕುಸಿಯುವ ಭೀತಿ ಎದುರಾಗಿದೆ. ಘಟನಾ ಸ್ಥಳಕ್ಕೆ ಮಂಗಳೂರು ಉತ್ತರ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಟೋಲ್‌ ಗೇಟ್‌ ಜಾಗವು ದಿಢೀರ್ ಎದುರಾಗುವ ಅಪಘಾತದ ಸ್ಪಾಟ್ ಆಗಿ ಬದಲಾಗುತ್ತಿದೆ. ನಿರುಪಯುಕ್ತ ಟೋಲ್ ಗೇಟ್ ನ್ನು ತೆರವು ಗೊಳಿಸುವಲ್ಲಿ ಜನಪ್ರತಿನಿಧಿಗಳ ಮತ್ತು ಜಿಲ್ಲಾಡಳಿತದ ನಿರ್ಲಕ್ಷ್ಯ, ಕರ್ತವ್ಯಲೋಪ, ವಾಹನ ಸವಾರರ ಪಾಲಿಗೆ ಮಾರಣಾಂತಿಕವಾಗಿದೆ.

ವರ್ಷದ ಹಿಂದೆ ಟೋಲ್ ಸಂಗ್ರಹ ರದ್ದುಗೊಂಡಿರುವ ಸುರತ್ಕಲ್ ಟೋಲ್ ಗೇಟ್ ನ ನಿರುಪಯೋಗಿ ಅವಶೇಷಗಳನ್ನು ತೆರವುಗೊಳಿಸದೆ ಅಪಾಯಕಾರಿಯಾಗಿ ಉಳಿಸಿರುವುದರಿಂದ ಅಪಘಾತಗಳು, ಪ್ರಾಣಹಾನಿ ಸಂಭವಿಸುತ್ತಿದೆ. ಈ ಕುರಿತು ಹಲವು ಬಾರಿ ಎಚ್ಚರಿಸಿದರೂ ಸ್ಥಳೀಯ, ಶಾಸಕ, ಸಂಸದರು, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆ. ಇದೀಗ ಟ್ರಕ್ ಒಂದು ಟೋಲ್ ಗೇಟ್ ಗೆ ಡಿಕ್ಕಿ ಹೊಡೆದು ಟೋಲ್ ಗೇಟ್ ನ ಅವಶೇಷಗಳು ಕುಸಿಯುವ ಭೀತಿ ಎದುರಾಗಿದೆ, ಸ್ಥಳದಲ್ಲಿ ಅಪಾಯಕಾರಿ ಸ್ಥಿತಿ ನಿರ್ಮಾಣಗೊಂಡಿದೆ. ಸಂಬಂಧ ಪಟ್ಟವರು ತಕ್ಷಣವೇ ಅಪಾಯಕಾರಿ ಸ್ಥಿತಿಯಲ್ಲಿರುವ ಟೋಲ್ ಗೇಟ್ ಅನ್ನು ತೆರವುಗೊಳಿಸಿ ಹೆದ್ದಾರಿಯಲ್ಲಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡದಿದ್ದಲ್ಲಿ ನಿರುಪಯುಕ್ತ ಟೋಲ್ ಗೇಟ್ ತೆರವುಗೊಳಿಸಲು ಹೋರಾಟ ಸಮಿತಿಯೇ ಮತ್ತೊಮ್ಮೆ “ನೇರ ಕಾರ್ಯಾಚರಣೆ” ಯಂತಹ ಹೋರಾಟಕ್ಕೆ ಕರೆ ನೀಡಬೇಕಾಗುತ್ತದೆ ಎಂದು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಎಚ್ಚರಿಕೆ ನೀಡಿದೆ.

LEAVE A REPLY

Please enter your comment!
Please enter your name here