ಮಂಗಳೂರು : ಬಂಟ್ವಾಳ ತಾಲೂಕಿನ ಕಡೇಶ್ವಾಲ್ಯ ಗ್ರಾಮದ ಅಮೈ ಎಂಬಲ್ಲಿ ಕಾರ್ಯಾಚರಣೆ ನಡೆಸಿದ ದಕ್ಷಿಣ ಕನ್ನಡ ಸಿಇಎನ್ ಪೊಲೀಸ್ ಸಿಬ್ಬಂದಿಗಳು ಡಾಂಬರು ಕಳ್ಳತನದಲ್ಲಿ ಭಾಗಿಯಾಗಿದ್ದ ಹತ್ತು ಮಂದಿಯನ್ನು ಬಂಧಿಸಿದ್ದಾರೆ.
ಶಂಕಿತರು ಎಂಆರ್‌ಪಿಎಲ್‌ನಿಂದ ಟ್ಯಾಂಕರ್‌ಗಳ ಮೂಲಕ ಸಾಗಿಸುತ್ತಿದ್ದ ಬಿಟುಮೆನ್ ಅನ್ನು ವರ್ಗಾಯಿಸುವ ಪ್ರಕ್ರಿಯೆಯಲ್ಲಿದ್ದಾಗ ದಾಳಿ ನಡೆಸಿದ ಸಿಇಎನ್ ಠಾಣೆಯ ಇನ್ಸ್‌ಪೆಕ್ಟರ್ ಮಂಜುನಾಥ್ ಮತ್ತು ಇತರ ಅಧಿಕಾರಿಗಳು ಹತ್ತು ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರನ್ನು ವಿಜಯಕುಮಾರ್ ಶೆಟ್ಟಿ, ಸುಧಾಕರ ಶೆಟ್ಟಿ, ಮಹಮ್ಮದ್ ಇಮ್ರಾನ್, ಅಶ್ರಫ್ ಎಂ, ವೀರೇಂದ್ರ ಎಸ್ ಆರ್, ಮಾದಸ್ವಾಮಿ, ಪ್ರಭಾಕರನ್, ನವೀನ್ ಕುಮಾರ್ ಎಂಜಿ, ಮಹಮ್ಮದ್ ನಿಸಾರ್ ಮತ್ತು ಮಹಮ್ಮದ್ ಸಿಹಾಬುದ್ದೀನ್ ಎಂದು ಗುರುತಿಸಲಾಗಿದೆ.
ಆರೋಪಿಗಳು ಉಡುಪಿಯ ವಿಜಯಕುಮಾರ್ ಶೆಟ್ಟಿ ಅವರ ಸೂಚನೆಯಂತೆ ಸುಧಾಕರ ಕೊಟ್ಟಾರಿ ಯಾನೆ ಸುಧಾಕರ ಶೆಟ್ಟಿ ಸಹಾಯದೊಂದಿಗೆ ಕಾರ್ಯನಿರ್ವಹಿಸುತ್ತಿದ್ದರು ಎಂದು ವಿಚಾರಣೆ ವೇಳೆ ಹೇಳಿದ್ದಾರೆ. ಬಂಧಿತರಿಂದ ಆರು ಟ್ಯಾಂಕರ್‌ಗಳು, ಡಾಂಬರು ಕಳ್ಳತನಕ್ಕೆ ಬಳಸುತ್ತಿದ್ದ ತೂಕದ ಮಾಪಕ, ಗ್ಯಾಸ್ ಸಿಲಿಂಡರ್, ಕದ್ದ ಡಾಂಬರು ಸಂಗ್ರಹಿಸುವ ಕಬ್ಬಿಣದ ತೊಟ್ಟಿ, ಒಂಬತ್ತು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.