ಮಂಗಳೂರು(ಹೊಸದಿಲ್ಲಿ): ಲೋಕಸಭೆಯಲ್ಲಿ ಗಂಭೀರ ಭದ್ರತಾ ಲೋಪ ಉಂಟಾಗಿದ್ದು, ಇಬ್ಬರು ವೀಕ್ಷಕರ ಗ್ಯಾಲರಿಯಿಂದ ಸಂಸದರತ್ತ ನುಗ್ಗಿದ್ದಾರೆ. ಈ ವೇಳೆ ಭಯಭೀತರಾದ ಸಂಸದರು ಲೋಕಸಭೆಯಿಂದ ಹೊರಬಂದಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಸಂಸದ ದಾನಿಶ್ ಅಲಿ, ವೀಕ್ಷಕರ ಗ್ಯಾಲರಿಯಿಂದ ಸಂಸದರತ್ತ ನುಗ್ಗಿದ ಇಬ್ಬರು ಅಪರಿಚಿತರ ಪೈಕಿ ಒಬ್ಬಾತನ ಪಾಸ್ ನೋಡಿದಾಗ ಆತನ ಹೆಸರು ಸಾಗರ್ ಎಂಬುದಾಗಿ ತಿಳಿದುಬಂದಿದೆ ಮತ್ತು ಈತನಿಗೆ ಮೈಸೂರಿನ ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರ ಕಚೇರಿಯಿಂದ ಪಾಸ್ ನೀಡಲಾಗಿತ್ತೆಂದು ತಿಳಿದು ಬಂದಿದೆ ಎಂದು ಹೇಳಿದ್ದಾರೆ. ಸಂಸದರು ಕುಳಿತಿರುವ ಸ್ಥಳದತ್ತ ಜಿಗಿದ ಇನ್ನೊಬ್ಬನ ಪರಿಚಯ ಇನ್ನಷ್ಟೇ ಆಗಬೇಕಿದೆ ಎಂದು ಅವರು ಹೇಳಿದ್ದಾರೆ. ಲೋಕಸಭೆಯ ಸಿಸಿಟಿವಿಯಿಂದ ತಿಳಿದು ಬಂದಂತೆ ಗಾಢ ನೀಲಿ ಶರ್ಟ್ ಧರಿಸಿದ ಒಬ್ಬ ಭದ್ರತಾ ಸಿಬ್ಬಂದಿಯನ್ನು ತಪ್ಪಿಸಿ ಓಡುತ್ತಿರುವಂತೆಯೇ ಇನ್ನೊಬ್ಬಾತ ಸಂದರ್ಶಕರ ಗ್ಯಾಲರಿಯಿಂದ ಟಿಯರ್ ಗ್ಯಾಸ್ ರೀತಿಯ ವಸ್ತುಗಳನ್ನು ಎಸೆದಿದ್ದಾನೆ. ಲೋಕಸಭಾ ಸಂಸದರು ಮತ್ತು ಭದ್ರತಾ ಸಿಬ್ಬಂದಿ ಇಬ್ಬರನ್ನೂ ಹಿಡಿಯುವಲ್ಲಿ ಸಫಲರಾಗಿದ್ದಾರೆ.
ಈ ಗದ್ದಲದ ನಂತರ ಪ್ರತಿಕ್ರಿಯಿಸಿದ ಸಂಸದ ದಾನಿಶ್ ಅಲಿ ಒಂದು ಸಂದರ್ಶಕರ ಪಾಸ್ ಪತ್ತೆಯಾಗಿದ್ದು ಅದು ಬಿಜೆಪಿಯ ಮೈಸೂರು ಸಂಸದ ಪ್ರತಾಪ್ ಸಿಂಹ ಅವರ ಕಚೇರಿಯಿಂದ ನೀಡಲಾಗಿತ್ತೆಂದು ತಿಳಿದು ಬಂದಿದೆ ಎಂದಿದ್ದಾರೆ. ಏನೇ ಆದರೂ ಸಂಸತ್ತಿನೊಳಗೆ ಪ್ರವೇಶಿಸಬೇಕಾದರೆ ಐದು ಹಂತದ ಭದ್ರತೆಯನ್ನು ದಾಟಿ ಒಳಬರಬೇಕಿದೆ. ಸಂಸತ್ತಿನ ಹೊರಗೆ ಕೂಡ ಒಬ್ಬ ಪುರುಷ ಹಾಗೂ ಮಹಿಳೆಯನ್ನು ವಶಪಡಿಸಿಕೊಳ್ಳಲಾಗಿದ್ದು ಅವರ ಬಳಿಯೂ ಕ್ಯಾನ್‌ಗಳಿದ್ದವು. ಅವು ಸ್ಫೋಟಿಸಿ ಕೆಂಪು ಮತ್ತು ಹಳದಿ ಹೊಗೆ ಹರಡಿಕೊಂಡಿತ್ತು. ಈ ಭದ್ರತಾ ಲೋಪದ ಬೆನ್ನಲ್ಲೇ ಸದನವನ್ನು ಮುಂದೂಡಲಾಗಿದೆ.