ಮಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ತಿರುಮಲಶೆಟ್ಟಿಹಳ್ಳಿಯ ಆಸ್ಪತ್ರೆಯ ಆವರಣದ ಕಸದ ತೊಟ್ಟಿಯಲ್ಲಿ ಹೆಣ್ಣು ಭ್ರೂಣ ಪತ್ತೆಯಾದ ಹಿನ್ನೆಲೆಯಲ್ಲಿ ಆಸ್ಪತ್ರೆ ಸೀಲ್ ಮಾಡಲಾಗಿದ್ದು, ಮಹಿಳಾ ನರ್ಸ್ ಸೇರಿದಂತೆ ನಾಲ್ವರು ನೌಕರರನ್ನು ವಶಕ್ಕೆ ಪಡೆಯಲಾಗಿದೆ.
ಆರೋಗ್ಯ ಅಧಿಕಾರಿಗಳ ತಂಡ ಡಿ.13 ರಂದು ತಮ್ಮ ದಿನನಿತ್ಯದ ತಪಾಸಣೆಯ ಭಾಗವಾಗಿ ಆಸ್ಪತ್ರೆಗೆ ಭೇಟಿ ನೀಡಿದ್ದಾಗ ಹೆಣ್ಣು ಭ್ರೂಣ ಕಂಡು ಅವರು ಆಘಾತಕ್ಕೊಳಗಾಗಿದ್ದಾರೆ. ತಪಾಸಣೆ ವೇಳೆ ಆಪರೇಷನ್ ಥಿಯೇಟರ್ನಲ್ಲಿ ಮಹಿಳೆಯೊಬ್ಬರು ಮಲಗಿರುವುದು ಕಂಡು ಬಂದಿದ್ದು, ಕಸದ ತೊಟ್ಟಿಯಲ್ಲಿ ಎಸೆದಿರುವ ಭ್ರೂಣ ಆಕೆಯದ್ದೇ ಎಂದು ಶಂಕಿಸಲಾಗಿದೆ. ಬೆಂಗಳೂರು, ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಲ್ಲಿ ಭ್ರೂಣ ಹತ್ಯೆ ಹಗರಣ ಬೆಳಕಿಗೆ ಬಂದ ನಂತರ ಹಲವರನ್ನು ಬಂಧಿಸಲಾಗಿದೆ. ರಾಜ್ಯ ಸರ್ಕಾರ ಇಂತಹ ಕಾನೂನುಬಾಹಿರ ಚಟುವಟಿಕೆಗಳ ತನಿಖೆಯನ್ನು ರಾಜ್ಯ ಪೊಲೀಸ್ ಅಪರಾಧ ತನಿಖಾ ವಿಭಾಗಕ್ಕೆ ವರ್ಗಾಯಿಸಿದೆ. ರಾಜ್ಯ ಆರೋಗ್ಯ ಆಯುಕ್ತರು ಇತ್ತೀಚೆಗೆ ಹೊರಡಿಸಿದ ಸುತ್ತೋಲೆಯಲ್ಲಿ ಕ್ಲಿನಿಕ್, ಡಯಾಗ್ನೋಸ್ಟಿಕ್ ಲ್ಯಾಬೋರೇಟರಿಗಳು ಸೇರಿದಂತೆ ಎಲ್ಲಾ ವೈದ್ಯಕೀಯ ಸೌಲಭ್ಯಗಳನ್ನು ನೀಡುವ ಸಂಸ್ಥೆಗಳನ್ನು ಪರಿಶೀಲಿಸುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ನಕಲಿ ವೈದ್ಯರು ನಡೆಸುತ್ತಿರುವ ಅನಧಿಕೃತ ಕ್ಲೀನಿಕ್ ಗಳನ್ನು ಸೀಲ್ ಮಾಡುವಂತೆ ಸೂಚಿಸಿದ್ದಾರೆ.