ಮಂಗಳೂರು(ಬಂಟ್ವಾಳ): ವಿವಾಹಿತ ಮಹಿಳೆಯೊಬ್ಬರನ್ನು ಮದುವೆಯಾಗುವುದಾಗಿ ನಂಬಿಸಿ, ದೈಹಿಕ ಸಂಪರ್ಕ ಬೆಳೆಸಿ, ಬಳಿಕ ಹಲ್ಲೆ ನಡೆಸಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ ವ್ಯಕ್ತಿಯೊಬ್ಬರ ವಿರುದ್ಧ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರುದಾರ ಮಹಿಳೆಯ ಪತಿಯ ಸ್ನೇಹಿತನಾಗಿರುವ ತಸ್ಲೀಂ ಆರಿಫ್ ಅತ್ಯಾಚಾರವೆಸಗುವುದರ ಜೊತೆಗೆ ಕೊಲೆ ಬೆದರಿಕೆ ಹಾಕಿದ್ದಾನೆ. ಮಹಿಳೆಯ ಪತಿಯೊಂದಿಗೆ ಆಗಾಗ ಮನೆಗೆ ಬರುತ್ತಿದ್ದ ತಸ್ಲೀಂ ಮತ್ತು ಮಹಿಳೆ ನಡುವೆ ಸಲುಗೆ ಏರ್ಪಟ್ಟು ಮೊಬೈಲ್ ನಂಬರ್ ಪಡೆದು ಮಹಿಳೆಯ ಪತಿ ಮನೆಯಲಿಲ್ಲದ ವೇಳೆ ಮನೆಗೆ ಬರುತ್ತಿದ್ದ ಎನ್ನಲಾಗಿದೆ. ಸಲುಗೆ ಬರಬರುತ್ತಾ ದೈಹಿಕ ಸಂಪರ್ಕದವರೆಗೂ ಬಂದು ನಿಂತಿದೆ. ಮದುವೆಯಾಗುವುದಾಗಿ ನಂಬಿಸಿ ಹಲವು ಬಾರಿ ಇವರ ಮಧ್ಯೆ ದೈಹಿಕ ಸಂಪರ್ಕವು ನಡೆದುಹೋಗಿದೆ. ಪತ್ನಿ ಮತ್ತು ಮಿತ್ರನ ದ್ರೋಹ ತಿಳಿದ ಪತಿ ಆಕೆಯಿಂದ ದೂರವಾಗಿದ್ದಾನೆ. ಇಷ್ಟಾಗುತ್ತಲೇ ಮಹಿಳೆ ತಸ್ಲೀಂ ನೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಿದ್ದಳು. ಅದ್ಯಾವುದೋ ಕ್ಷುಲ್ಲಕ ಕಾರಣಕ್ಕೆ ತಸ್ಲೀಂ ಮಹಿಳೆಯ ಮೇಲೆ ಹಲ್ಲೆ ನಡೆಸಿರುವುದಲ್ಲದೇ ನಿನ್ನನ್ನು ಮತ್ತು ನಿನ್ನ ಮಕ್ಕಳನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾನೆ ಎಂದು ಮಹಿಳೆ ಬಂಟ್ವಾಳ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಲೊರೆಟ್ಟೋ ಪದವು ನಿವಾಸಿ ಅಬ್ದುಲ್ ಅಝೀಝ್ ಎಂಬವರ ಪತ್ನಿಯಾಗಿದ್ದು ಮೂರು ಮಕ್ಕಳ ತಾಯಿಯಾಗಿರುವ ಈ ಮಹಿಳೆಯ ಸ್ಥಿತಿ ಕಟ್ಟಿಕೊಂಡವನೂ ಇಲ್ಲದೆ, ಇಟ್ಟುಕೊಂಡವನೂ ಇಲ್ಲದೆ ಅಡಕತ್ತರಿಯಲ್ಲಿ ಸಿಕ್ಕ ಅಡಕೆಯಂತಾಗಿದೆ.