ಮಂಗಳೂರು: ಖುಷಿಯಾಗಿದ್ದರೂ ಎಣ್ಣೆ ಬೇಕು. ದುಃಖದಲ್ಲಿದ್ದರೂ ಎಣ್ಣೆ ಬೇಕು. ಪಾರ್ಟಿಗೂ ಎಣ್ಣೆ ಬೇಕು, ಸೆಲೆಬ್ರೇಶನ್ ಗೂ ಎಣ್ಣೆ ಬೇಕು. ಎಣ್ಣೆ ಇಲ್ಲದೇ ಯಾವುದೇ ಕಾರ್ಯಕ್ರಮ ಕಂಪ್ಲೀಟ್ ಆಗುವುದಿಲ್ಲ ಎನ್ನುವ ಒಂದು ವರ್ಗವಿದೆ. ಇದು ಎಣ್ಣೆಪ್ರಿಯರ ವನ್ ಆ್ಯಂಡ್ ವೋನ್ಲಿ ಫೆವರೇಟ್ ಸುದ್ದಿ.
ಎಣ್ಣೆ ಸಿಗುವುದೇ ಕಷ್ಟವಾಗಿದ್ದ ಕೋವಿಡ್ ಅವಧಿಯಲ್ಲಿ ಮದ್ಯ ಪ್ರಿಯರು ತಮ್ಮ ಬ್ರ್ಯಾಂಡ್ ಗೆ ಅಂಟಿಕೊಳ್ಳದೆ ಪಾಲಿಗೆ ಬಂದದ್ದೇ ಪಂಚಾಮೃತ ಎಂದು ಸಿಕ್ಕಿದ್ದನ್ನು ಖರೀದಿಸಿ ಉಪಯೋಗಿಸಿದ್ದರು. ಯಾವುದೇ ಬೇಡಕೆ ಇಲ್ಲದೆ ತಮ್ಮ ಪಾಡಿಗೆ ಸುಖವೀವ ಸುರಾಪಾನದೊಂದಿಗೆ ನೆಮ್ಮದಿಯಾಗಿದ್ದ ಮದ್ಯ ಪ್ರಿಯರು ಹೊಸದೊಂದು ಬೇಡಿಕೆಯನ್ನು ಸರಕಾರದ ಮುಂದಿಟ್ಟಿದ್ದಾರೆ. ನಮ್ಮನ್ನು ಕುಡುಕರೆಂದು ಕರೆದು ಅವಮಾನಿಸಬೇಡಿ ಮದ್ಯ ಪ್ರಿಯರೆಂದು ಮರ್ಯಾದೆಯಿಂದ ಕರೆದು ಗೌರವಕೊಡಿ ಎಂದು ಮದ್ಯಪಾನ ಪ್ರಿಯರ ಹೋರಾಟಗಾರರ ಸಂಘ ಬೇಡಿಕೆಯನ್ನಿಟ್ಟಿದೆ. ಮಾತ್ರವಲ್ಲ ತಮ್ಮ ಬೇಡಿಕೆಯನ್ನು ಈಡೇರಿಸುವಂತೆ ಒತ್ತಾಯಿಸಿ “ನಿತ್ಯ ದುಡಿ, ಸತ್ಯ ನುಡಿ, ಸ್ವಲ್ಪ ಕುಡಿ, ಮನೆಗೆ ನಡಿ” ಎಂಬ ಘೋಷ ವಾಕ್ಯದಡಿ ಬೆಳಗಾವಿ ಸುವರ್ಣ ಸೌಧದ ಮುಂದೆ ಪ್ರತಿಭಟನೆಯನ್ನು ನಡೆಸಿದ್ದಾರೆ.
ಮದ್ಯ ಮಾರಾಟದಿಂದ ಬರುವ ವಾರ್ಷಿಕ ಆದಾಯದಲ್ಲಿ ಶೇ.10 ರಷ್ಟನ್ನು ಮದ್ಯ ಗ್ರಾಹಕರ ಕಲ್ಯಾಣಕ್ಕಾಗಿ ಮೀಸಲಿಡಬೇಕು. ಮದ್ಯಪಾನ ಮಾಡುವವರ ಪ್ರತಿಭಾವಂತ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಬೇಕು. ಮಂಡಳಿ ಸ್ಥಾಪಿಸಬೇಕು. 10 ಲಕ್ಷ ಪರಿಹಾರ ನೀಡಬೇಕು. ಮದ್ಯ ಪ್ರಿಯರು ಮೃತ ಪಟ್ಟರೆ ಕುಟುಂಬ ಸದಸ್ಯರ ಮದುವೆ ಕಾರ್ಯಕ್ರಮಗಳಿಗೆ 2 ಲಕ್ಷ ನೀಡಬೇಕು. ಮದ್ಯದ ಬೆಲೆ ಏರಿಕೆ ಸಂದರ್ಭದಲ್ಲಿ ಸಂಘದ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬೆಲೆ ಏರಿಕೆ ಮಾಡಬೇಕು. ಮದುಶಾಲೆಯಲ್ಲಿ ಗುಣಮಟ್ಟದ ಆಹಾರ ಮತ್ತು ಸ್ವಚ್ಛ ಶೌಚಾಲಯಗಳನ್ನು ನಿರ್ಮಿಸಬೇಕು. ಎಂಆರ್ ಪಿ ಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಮದ್ಯದಂಗಡಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮದ್ಯಪ್ರಿಯ ಹೋರಾಟಗಾರರ ಸಂಘ ಸರಕಾರವನ್ನು ಆಗ್ರಹಿಸಿದೆ. ಸರಕಾರಕ್ಕೆ ಅತ್ಯಧಿಕ ತೆರಿಗೆ ನೀಡುವ ಗ್ರಾಹಕರು ನಾವಾಗಿದ್ದು ನಮ್ಮ ಬೇಡಿಕೆಗಳನ್ನು ಮನ್ನಿಸಿ ಮತ್ತು ಈಡೇರಿಸಿ ಎಂದು ಮನವಿ ಪತ್ರ ಸ್ವೀಕರಿಸಲು ಪ್ರತಿಭಟನಾ ಸ್ಥಳಕ್ಕೆ ಬಂದ ಸಚಿವ ಸಂತೋಷ್ ಲಾಡ್ ಅವರಲ್ಲಿ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ದೇವಾಲಯ ಮತ್ತು ಶಾಲಾ ಆವರಣದ ಬಳಿ ಇರುವ ಬಾರ್ ಗಳನ್ನು ಮುಚ್ಚಿಸಿ ಇಲ್ಲಿನ ಪ್ರಾವಿತ್ರ್ಯತೆಯನ್ನು ಕಾಪಾಡುವಂತೆ ಪ್ರತಿಭಟನಾಕಾರರು ಮನವಿ ಮಾಡಿದ್ದಾರೆ. ಮದ್ಯಪ್ರಿಯರ ಮನವಿ ನೋಡಿ ಸುಸ್ತಾದ ಸಚಿವರು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದರು.