ಮಂಗಳೂರು(ಬೆಂಗಳೂರು): ಬೆಂಗಳೂರಿನ ಸೌಂದರ್ಯ ಕಣ್ತುಂಬಿಕೊಳ್ಳಲು ಸಾಧ್ಯವಾಗುವಂತಹ ದೇಶದ ಅತೀ ಎತ್ತರದ ವೀಕ್ಷಣಾ ಗೋಪುರವನ್ನು ಕಬ್ಬನ್ ಉದ್ಯಾನದ ಅಥವಾ ಯಶವಂತಪುರದ ಬಳಿ ನಿರ್ಮಿಸಲು ರಾಜ್ಯ ಸರಕಾರ ಚಿಂತನೆ ನಡೆಸಿದೆ.
ಬೆಂಗಳೂರಿನಲ್ಲಿ ಡಿ.26ರಂದು ‘ಬಿಗ್ ಬ್ಯಾನ್ಯನ್ ಗ್ರೂಪ್’ ವೀಕ್ಷಣಾ ಗೋಪುರ ನಿರ್ಮಾಣ ಕುರಿತು ಆಯೋಜಿಸಿದ್ದ ಪ್ರಾತ್ಯಕ್ಷಿಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವೀಕ್ಷಿಸಿದರು. ಚೀನಾದ ಶಾಂಘೈನಲ್ಲಿನ ‘ಶಾಂಘೈ ಟವರ್’ ಯೋಜನೆಯನ್ನು ಪ್ರೇರಣೆಯಾಗಿಟ್ಟುಕೊಂಡು ಆಸ್ಟ್ರಿಯಾದ ಕೂಪ್ ಹಿಮ್ಮೆಲ್ಬ್ ಎಲ್ ಎಯು ಸಂಸ್ಥೆಯು ವಿಶ್ವ ವಿನ್ಯಾಸ ಸಂಸ್ಥೆ ಸಹಯೋಗದಲ್ಲಿ ಸ್ಕೈಡೆಕ್ ವೀಕ್ಷಣಾ ಗೋಪುರ ನಿರ್ಮಿಸಲು ವಿನ್ಯಾಸ ಸಿದ್ಧಪಡಿಸಿದೆ. 10 ಎಕರೆ ಜಾಗದಲ್ಲಿ 360 ಮೀಟರ್ ಎತ್ತರದ ವೀಕ್ಷಣಾ ಗೋಪುರ ನಿರ್ಮಾಣ ಮಾಡಲು ಸಿದ್ಧತೆಗಳು ನಡೆದಿವೆ. ಯೋಜನೆ ಕಾರ್ಯಗತವಾದರೆ ನಾಗರಿಕರು ಆಕಾಶದಿಂದ ಕಾಣುವ ಬೆಂಗಳೂರಿನ ಸೌಂದರ್ಯವನ್ನು ಸವಿಯಬಹುದು. ಶಾಂಘೈ ಟವರ್ 600 ಮೀಟರ್ ಎತ್ತರದಲ್ಲಿದ್ದು, ಬೆಂಗಳೂರಿನ ಗೋಪುರ ಅಷ್ಟು ಎತ್ತರದಲ್ಲಿ ನಿರ್ಮಾಣವಾಗದಿದ್ದರೂ ದೇಶದ ಅತಿ ಎತ್ತರದ ವೀಕ್ಷಣಾ ಗೋಪುರವಾಗಲಿದೆ. ಗೋಪುರ ನಿರ್ಮಾಣಕ್ಕೆ ತಗಲುವ ವೆಚ್ಚ, ಅಗತ್ಯ ಸೌಲಭ್ಯಗಳ ನಿರ್ಮಾಣ ಕುರಿತು ಸರ್ಕಾರ ಕಾರ್ಯ ಯೋಜನೆ ರೂಪಿಸುತ್ತಿದೆ.
ತಮಿಳುನಾಡಿದ ರಾಮೇಶ್ವರದ ಗೋಪುರ 323 ಮೀ ಎತ್ತರವಿದೆ. ಗುಜರಾತ್‌ನ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಏಕತಾ ಪ್ರತಿಮೆ ನಂತರ 182 ಮೀ ಎತ್ತರವಿದೆ. ಈಗ ಮಾಡಿರುವ ನಿರ್ಧಾರದಂತೆ ಬೆಂಗಳೂರಿನಲ್ಲಿ 360 ಮೀ ಗೋಪುರಕ್ಕೆ ಸರ್ಕಾರ ಸಮ್ಮತಿಸಿದರೆ ದೇಶದಲ್ಲೇ ಎತ್ತರದ ವಿಕ್ಷಣಾ ಗೋಪುರ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಸದ್ಯ ಜಗತ್ತಿನಲ್ಲಿ ದುಬೈನ ಬುರ್ಜ್ ಖಲೀಫಾ (828 ಮೀ), ಶಾಂಘೈನ ಶಾಂಘೈ ಟವರ್ (632), ಚೀನಾದ ಶೆಂಜೆನ್‌ನ ಪಿಂಗ್ ಆನ್ ಫೈನಾನ್ಸ್ ಸೆಂಟರ್ (599), ಚೀನಾದ ಗುಂವಾಂಗ್ಶುವಿನ ಕ್ಯಾಂಟನ್ ಟವರ್ (597), ದಕ್ಷಿಣ ಕೊರಿಯಾದ ಲಾಟ್ಟೆ ವರ್ಲ್ಡ್ ಟವರ್ (555) ವಿಶ್ವದ ಎತ್ತರದ ವೀಕ್ಷಣಾ ಗೋಪುರಗಳಾಗಿವೆ. ಗೋಪುರದ ತಳಭಾಗದಲ್ಲಿ ವಾಣಿಜ್ಯ ಮಳಿಗೆಗಳು, ಆಹಾರ, ಆಟ, ವಿಶ್ರಾಂತಿ ಕೊಠಡಿ, ಶೌಚಾಲಯಗಳು ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲಾಗುತ್ತದೆ.