ಮಂಗಳೂರು(ಕಡಬ): ಒಕ್ಕಲಿಗ ಸಮಾಜದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ದೇ ನನ್ನ ಮುಖ್ಯಮಂತ್ರಿ ಸ್ಥಾನಕ್ಕೆ ಮುಳುವಾಯಿತು ಎಂಬ ಸ್ಪೋಟಕ ಹೇಳಿಕೆಯನ್ನು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ನೀಡಿದ್ದಾರೆ. ಡಿ.26ರಂದು ಕಡಬ ಒಕ್ಕಲಿಗ ಗೌಡ ಸೇವಾ ಸಂಘದ ವತಿಯಿಂದ ನಿರ್ಮಾಣಗೊಳ್ಳಲಿರುವ ನೂತನ ಸಮುದಾಯ ಭವನದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಪಕ್ಷದ ನಾಯಕರ ವಿರುದ್ಧ ತಮ್ಮ ಆಕ್ರೊಶ ಹೊರಹಾಕಿದರು.
ನಾನು ಮುಖ್ಯ ಮಂತ್ರಿಯಾಗಿದ್ದಾಗ ಬೆಂಗಳೂರಿನ ಒಕ್ಕಲಿಗ ಮುಖಂಡರು ಹಾಗೂ ನಾನು ಸೇರಿಕೊಂಡು ಬೈರವೈಕ್ಯ ಆದಿಚುಂಚನಗಿರಿ ಶ್ರೀ ಬಾಲಗಂಗಾಧರ ಸ್ವಾಮೀಜಿಯವರ ದೊಡ್ಡ ಕಾರ್ಯಕ್ರಮವನ್ನು ಆಯೋಜಿಸಿದ್ದೆವು. ಆ ಸಮಾರಂಭದಲ್ಲಿ ನಾನು ಒಕ್ಕಲಿಗ ಸಮಾಜದಲ್ಲಿ ಹುಟ್ಟಿ ಆದಿಚುಂಚನಗಿರಿ ಸ್ವಾಮೀಜಿಯವರ ಆಶೀರ್ವಾದ ಪಡೆದು ರಾಜ್ಯದ ಮುಖ್ಯಮಂತ್ರಿಯಾದೆ ಎಂದು ಹೇಳಿದ್ದೆ. ಆ ಹೇಳಿಕೆಯೇ ನನ್ನ ಸ್ಥಾನಕ್ಕೆ ಮುಳುವಾಯಿತು. ‘ಮುಖ್ಯಮಂತ್ರಿ ಸ್ಥಾನದಿಂದ ಇಳಿಯಪ್ಪಾ’ ಎಂದು ಹೇಳಿದರು ಎಂದು ಬೇಸರ ವ್ಯಕ್ತಪಡಿಸಿದ ಸದಾನಂದ ಗೌಡ ಪರೋಕ್ಷವಾಗಿ ಅಂದಿನ ರಾಜ್ಯ ಬಿಜೆಪಿ ನಾಯಕರ ವಿರುದ್ಧ ಕೆಂಡಕಾರಿದರು. ಬಿಜೆಪಿ ಪಕ್ಷ ಎಲ್ಲವನ್ನೂ ಕೊಟ್ಟಿದೆ ಎಂದು ಹೇಳಿದ ಡಿವಿಎಸ್ ಇಂದಿನ ರಾಜಕೀಯ ವ್ಯವಸ್ಥೆಯ ವಿರುದ್ಧ ಕಿಡಿಕಾರಿದರು.
ಸಮಾಜ, ನನ್ನ ಪಕ್ಷ ಮೂವತ್ತು ವರ್ಷದಲ್ಲಿ ನನಗೆ ಎಲ್ಲವನ್ನೂ ಕೊಟ್ಟಿದೆ. ಚುನಾವಣಾ ರಾಜಕಾರಣದಿಂದ ನಿವೃತ್ತಿಯನ್ನು ಘೋಷಿಸುತ್ತಿದ್ದೇನೆ ಎಂದು ತನ್ನ ಹಿಂದಿನ ಹೇಳಿಕೆಯನ್ನು ಪುನರುಚ್ಚರಿಸಿದ ಸದಾನಂದ ಗೌಡ ಮುಂದಿನ ದಿನ ಪಕ್ಷಕ್ಕಾಗಿ ದುಡಿಯುವ ದಿನ ಮಾತ್ರ ಉಳಿದಿದೆ. ಜನರ ಕೆಲಸ ಮಾಡಲು ನನ್ನ ಅನುಭವ ಸಾಕು ಎಂದು ಹೇಳಿದರು. ಇಂದು ಪ್ರಾಮಾಣಿಕ ರಾಜಕಾರಣಕ್ಕೆ ಬೆಲೆ ಇಲ್ಲ. ಹರಕು ನಾಲಗೆ, ಚೀಲತುಂಬಾ ದುಡ್ಡು ಗುಂಪುಗಾರಿಕೆಯಿಂದಲೇ ರಾಜಕೀಯ ನಡೆಯುತ್ತಿದೆ. ಆದರೆ ಪ್ರಜಾಪ್ರಭುತ್ವದಲ್ಲಿ ರಾಜಕಾರಣ ಬೇಕೇ ಬೇಕು. ಉಳಿದ ಪಕ್ಷಗಳಿಗಿಂತ ನನ್ನ ಪಕ್ಷ ಒಳ್ಳೆಯದು ಎನ್ನುವ ನೆಲೆಯಲ್ಲಿ ಪಕ್ಷದ ಕೆಲಸ ಮಾಡುತ್ತೇನೆ ಎಂದರು.