ಮಂಗಳೂರು(ನವದೆಹಲಿ): ದೇಶ ವಿರೋಧಿ ಮತ್ತು ಪ್ರತ್ಯೇಕತಾವಾದ ಚಟುವಟಿಕೆಗಳಲ್ಲಿ ತೊಡಗಿರುವ ಹಾಗೂ ಭಯೋತ್ಪಾದನೆಗೆ ಬೆಂಬಲ ನೀಡುತ್ತಿರುವ ಮುಸ್ಲಿಂ ಲೀಗ್ ಜಮ್ಮು–ಕಾಶ್ಮೀರ ಮಸರತ್ ಆಲಂ ಬಣ ಸಂಘಟನೆ ಮೇಲೆ ಕೇಂದ್ರ ಸರ್ಕಾರ ಡಿ.27ರಂದು ನಿಷೇಧ ಹೇರಿದೆ.
ಸಂಘಟನೆಯನ್ನು ನಿಷೇಧಿಸುವ ನಿರ್ಧಾರ ಕುರಿತು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ‘ರಾಷ್ಟ್ರದ ಏಕತೆ, ಸಾರ್ವಭೌಮತೆ ಮತ್ತು ಸಮಗ್ರತೆಗೆ ವಿರುದ್ಧವಾಗಿ ಕೆಲಸ ಮಾಡುವವರ ಮೇಲೆ ಕಠಿಣ ಕ್ರಮ ಜರುಗಿಸುವ ಸ್ಪಷ್ಟ ಸಂದೇಶವನ್ನು ನರೇಂದ್ರ ಮೋದಿ ಸರ್ಕಾರ ನೀಡುತ್ತದೆ’ ಎಂದಿದ್ದಾರೆ. ‘ಎಂಎಲ್‌ಜೆಕೆ–ಎಂಎ ಸಂಘಟನೆಯನ್ನು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿಯಲ್ಲಿ ನಿಷೇಧಿಸಲಾಗಿದೆ. ಈ ಸಂಘಟನೆಯ ಸದಸ್ಯರು ಜಮ್ಮು ಮತ್ತು ಕಾಶ್ಮೀರದಲ್ಲಿ ಇಸ್ಲಾಮಿಕ್ ಕಾನೂನು ಜಾರಿಗೊಳಿಸಲು ಜನರನ್ನು ಪ್ರಚೋದಿಸುತ್ತಿದ್ದಾರೆ’ ಎಂದು ತಿಳಿಸಿದ್ದಾರೆ.