ಹಿರಿಯ ತಮಿಳು ನಟ, ಡಿಎಂಡಿಕೆ ನಾಯಕ ಕ್ಯಾಪ್ಟನ್ ವಿಜಯಕಾಂತ್ ನಿಧನ

ಮಂಗಳೂರು(ಚೆನ್ನೈ): ಡಿಎಂಡಿಕೆ ಸ್ಥಾಪಕ ಹಾಗೂ ಹಿರಿಯ ನಟ ವಿಜಯಕಾಂತ್‌ ಚೆನ್ನೈನ ಆಸ್ಪತ್ರೆಯೊಂದರಲ್ಲಿ ಡಿ.28ರಂದು ನಿಧನರಾದರು. ಅವರಿಗೆ 71 ವರ್ಷ ವಯಸ್ಸಾಗಿತ್ತು. ಅವರಿಗೆ ಕೋವಿಡ್‌ ದೃಢಪಟ್ಟಿತ್ತೆಂದು ತಿಳಿದು ಬಂದಿದೆ.

ನವೆಂಬರ್‌ ತಿಂಗಳಿನಲ್ಲೂ ಅವರನ್ನು ಚೆನ್ನೈನ ಎಂಐಒಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆಗ ಅವರು ಕೆಮ್ಮು ಮತ್ತು ಗಂಟಲು ನೋವಿನಿಂದ ಬಳಲುತ್ತಿದ್ದರು. ಆ ಸಂದರ್ಭ 14 ದಿನಗಳ ಕಾಲ ಅವರು ವೈದ್ಯರ ನಿಗಾದಲ್ಲಿದ್ದರು. ಕ್ಯಾಪ್ಟನ್‌ ಎಂದೇ ಜನಪ್ರಿಯರಾಗಿರುವ ವಿಜಯಕಾಂತ್‌ ಅವರು 154 ತಮಿಳು ಚಲನಚಿತ್ರಗಳಲ್ಲಿ ನಟಿಸಿದ್ದರು. ಬಳಿಕ ಅವರು ಸಕ್ರಿಯ ರಾಜಕಾರಣಕ್ಕೆ ಧುಮುಕಿದ್ದರು. ದಕ್ಷಿಣ ಭಾರತೀಯ ಕಲಾವಿದರ ಸಂಘದಲ್ಲಿ ಸಕ್ರಿಯರಾಗಿದ್ದ ವಿಜಯಕಾಂತ್‌ ಅವರು 2005ರಲ್ಲಿ ದೇಸೀಯ ಮುರ್ಪೊಕ್ಕು ದ್ರಾವಿಡ ಕಝಗಂ ಪಕ್ಷ ಸ್ಥಾಪಿಸಿದ್ದರು, 2006ರಲ್ಲಿ ಅವರ ಪಕ್ಷ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು. ಆದರೆ ಕೇವಲ ಶೇ.10 ಮತಗಳನ್ನು ಪಡೆಯುವಲ್ಲಿ ಸಫಲವಾಗಿತ್ತಲ್ಲದೆ ಪಕ್ಷದ ಪ್ರಮುಖನನ್ನು ಹೊರತುಪಡಿಸಿ ಇತರೆಲ್ಲರೂ ಸೋತಿದ್ದರು. 2011ರಲ್ಲಿ ಎಐಎಡಿಎಂಕೆ ಜೊತೆ ಹೊಂದಾಣಿಕೆಯೊಂದಿಗೆ 41 ಕ್ಷೇತ್ರಗಳಲ್ಲಿ ಸ್ಪರ್ಧಿಸಿ 26ರಲ್ಲಿ ಅವರ ಪಕ್ಷ ಜಯ ಸಾಧಿಸಿ ಮುಖ್ಯ ವಿಪಕ್ಷ ಸ್ಥಾನ ಪಡೆಯಿತು. 2011-2016 ಅವಧಿಯಲ್ಲಿ ಅವರು ತಮಿಳುನಾಡು ವಿಧಾನಸಭೆಯ ವಿಪಕ್ಷ ನಾಯಕರಾಗಿದ್ದರು. ನಂತರ ಅವರು ಎಐಎಡಿಎಂಕೆಯೊಂದಿಗೆ ಹೊಂದಾಣಿಕೆ ಕಡಿದುಕೊಂಡಿದ್ದರು. ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಅವರು ವಿರುಧಾಚಲಂ ಮತ್ತು ರಿಷಿವಂದಿಯಂ ಕ್ಷೇತ್ರಗಳನ್ನು ಪ್ರತಿನಿಧಿಸಿದ್ದರು.

LEAVE A REPLY

Please enter your comment!
Please enter your name here