ಮಂಗಳೂರು(ಹೊಸದಿಲ್ಲಿ): ವಿವಿಧ ವಿಶ್ವವಿದ್ಯಾಲಯಗಳಿಂದ ಮಾಸ್ಟರ್ ಆಫ್ ಫಿಲಾಸಫಿ ಅಥವಾ ಎಂಫಿಲ್ ಕೋರ್ಸುಗಳನ್ನು ಕೈಗೊಳ್ಳುವ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯ ಅನುದಾನ ಆಯೋಗ ಯುಜಿಸಿ ಎಚ್ಚರಿಕೆ ನೀಡಿದ್ದು, ಎಂಎಫಿಲ್ ಕೋರ್ಸ್ ಈಗಾಗಲೇ ರದ್ದುಗೊಳಿಸಿರುವುದಾಗಿ ತಿಳಿಸಿದೆ. ರದ್ದುಗೊಂಡ ಹೊರತಾಗಿಯೂ ಕೆಲವು ವಿವಿಗಳು ಈ ಕೋರ್ಸುಗಳನ್ನು ನಡೆಸುತ್ತಿವೆ ಎಂಬುದನ್ನು ಯುಜಿಸಿ ಗಂಭೀರವಾಗಿ ಪರಿಗಣಿಸಿದೆ.
ಎಂಫಿಲ್ ಕೋರ್ಸುಗಳನ್ನು ನಿಲ್ಲಿಸುವಂತೆ ಯುಜಿಸಿ ಈಗಾಗಲೇ ವಿವಿಗಳಿಗೆ ಸೂಚಿಸಿದೆಯಲ್ಲದೆ ಶೈಕ್ಷಣಿಕ ವರ್ಷ 2023-24ರಲ್ಲಿ ಈ ಕೋರ್ಸಿಗಾಗಿ ಪ್ರವೇಶಾತಿಗಳನ್ನು ಸ್ಥಗಿತಗೊಳಿಸುವಂತೆ ಸೂಚಿಸಿದೆ. ಇನ್ನು ಮುಂದೆ ಎಂಫಿಲ್ ಒಂದು ಮಾನ್ಯತೆ ಪಡೆದ ಪದವಿಯಲ್ಲ ಎಂದು ಯುಜಿಸಿ ಹೇಳಿದೆ. ಯುಜಿಸಿ ನಿಬಂಧನೆಗಳು 2022 ಇದರ ನಿಯಮ 14 ಎಂಫಿಲ್ ಕೋರ್ಸುಗಳನ್ನು ಕೈಗೊಳ್ಳುವುದನ್ನು ನಿಷೇಧಿಸಿದೆ ಎಂದು ಯುಜಿಸಿ ಹೇಳಿದೆ.