ಮಂಗಳೂರು(ಬೆಂಗಳೂರು): ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಕೊಬ್ಬರಿ ಖರೀದಿಯ ಬೆಂಬಲ ಬೆಲೆಯನ್ನು ಹೆಚ್ಚಿಸಲು ಅನುಮೋದನೆ ದೊರೆತಿದೆ ಎಂದು ರಾಜ್ಯ ವಿಪಕ್ಷ ನಾಯಕ ಆರ್ ಅಶೋಕ್ ಎಕ್ಸ್ ನಲ್ಲಿ ಬರೆದುಕೊಂಡಿದ್ದಾರೆ.
ಮಿಲ್ಲಿಂಗ್ ಕೊಬ್ಬರಿ ಹಾಗೂ ಪೂರ್ಣ ಕೊಬ್ಬರಿಗೆ ಕ್ರಮವಾಗಿ ಪ್ರತಿ ಕ್ವಿಂಟಾಲ್ಗೆ 300 ರೂಪಾಯಿ ಹಾಗೂ 250 ರೂಪಾಯಿ ಹೆಚ್ಚಳ ಮಾಡಲಾಗಿರುವ ಬಗ್ಗೆ ವಿಪಕ್ಷ ನಾಯಕ ಆರ್. ಅಶೋಕ ಎಕ್ಸ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ರೈತರ ಪರಿಶ್ರಮಕ್ಕೆ ನ್ಯಾಯ ಒದಗಿಸಲು, ಅನ್ನದಾತರ ಆದಾಯ ಹೆಚ್ಚಿಸಲು ಕೇಂದ್ರ ಬಿಜೆಪಿ ಸರಕಾರ ಬದ್ಧತೆ ತೋರಿದೆ. ರಾಜ್ಯದ ತೆಂಗು ಬೆಳೆಗಾರರ ಮನವಿಗೆ ಸ್ಪಂದಿಸಿದ ಪ್ರಧಾನಿಯವರಿಗೆ ಕೃತಜ್ಞತೆಗಳು ಎಂದು ಎಕ್ಸ್ ನಲ್ಲಿ ಬರೆದುಕೊಂಡಿದ್ದಾರೆ. ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡ ಬಡಗಲಪುರ ನಾಗೇಂದ್ರ ಮಾತನಾಡಿ, ಕಳೆದ 5 ರಿಂದ 6 ವರ್ಷಗಳಿಂದ ಕೊಬ್ಬರಿ ಬೆಲೆ ಕ್ವಿಂಟಾಲ್ಗೆ 18 ಸಾವಿರ ರೂ.ಗಳಿಂದ ಕೇವಲ 7,000 ರೂ.ಗೆ ಕುಸಿದಿರುವ ಕಾರಣ ರಾಜ್ಯದ ತೆಂಗು ಬೆಳೆಗಾರರು ತೀವ್ರ ಸಂಕಷ್ಟದಲ್ಲಿದ್ದಾರೆ. ಕೇಂದ್ರ ಸರ್ಕಾರದ ರೈತ ವಿರೋಧಿ ಆಮದು-ರಫ್ತು ನೀತಿಯೇ ಬೆಲೆ ಕುಸಿತಕ್ಕೆ ಪ್ರಮುಖ ಕಾರಣ ಎಂದು ಆರೋಪಿಸಿದ್ದರು.