ಅತಿಥಿ ಉಪನ್ಯಾಸಕರಿಗೆ 5 ಸಾವಿರ ರೂ. ವೇತನ ಹೆಚ್ಚಳ – ಆರೋಗ್ಯ ವಿಮೆ ಸೌಲಭ್ಯ, ನಿವೃತ್ತರಾಗುವಾಗ 5 ಲಕ್ಷ ರೂ. ಧನಸಹಾಯ – ರಾಜ್ಯ ಸರಕಾರ

ಮಂಗಳೂರು (ಬೆಂಗಳೂರು): ರಾಜ್ಯಾದ್ಯಂತ ಕಳೆದ ಕೆಲವು ದಿನಗಳಿಂದ ಹಲವು ಬೇಡಿಕೆಗಳನ್ನಿಟ್ಟುಕೊಂಡು ಪ್ರತಿಭಟನೆ ನಡೆಸುತ್ತಿದ್ದ ಅತಿಥಿ ಉಪನ್ಯಾಸಕರ ಸಮಸ್ಯೆಗಳಿಗೆ ಸ್ಪಂದಿಸಿದ ರಾಜ್ಯ ಸರಕಾರವು ವೇತನ ಹೆಚ್ಚಳ ಮತ್ತು ಆರೋಗ್ಯ ವಿಮೆ ಸೇರಿದಂತೆ ಮಹತ್ವದ ಘೋಷಣೆ ಮಾಡಿದೆ.

ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅತಿಥಿ ಉಪನ್ಯಾಸಕರು ಹಲವು ಸಮಸ್ಯೆಗಳನ್ನು ಸರಕಾರದ ಮುಂದೆ ಇಟ್ಟಿದ್ದರು, ಅದರಲ್ಲಿ ಖಾಯಂ ಗೊಳಿಸಬೇಕೆನ್ನವುದು ಅವರ ಪ್ರಮುಖ ಬೇಡಿಕೆಯಾಗಿತ್ತು ಎಂದು ತಿಳಿಸಿದರು. ಅತಿಥಿ ಉಪನ್ಯಾಸಕರ ವೇತನವನ್ನು 5 ಸಾವಿರ ಹೆಚ್ಚಳ ಮಾಡುವ ನಿರ್ಧಾರ ಮಾಡಲಾಗಿದ್ದು, ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿಗೆ ನೀಡಿದ್ದಾರೆ. ಅಲ್ಲದೆ ಅತಿಥಿ ಉಪನ್ಯಾಸಕರನ್ನು ಗೌರವದಿಂದ ನಡೆಸಿಕೊಂಡು ಅವರ ಕೆಲಸದ ಒತ್ತಡ ಕಡಿಮೆ ಬಗ್ಗೆಯೂ ಸೂಚನೆ ನೀಡಲಾಗಿದೆ ಎಂದರು.

ನಿವೃತ್ತ ಉಪನ್ಯಾಸಕರಿಗೆ 5 ಲಕ್ಷ

60 ವರ್ಷ ಪೂರೈಸಿದ ಅತಿಥಿ ಉಪನ್ಯಾಸಕರು ಕೆಲಸದಿಂದ ನಿವೃತ್ತರಾಗುವ ವೇಳೆಯಲ್ಲಿ 5 ಲಕ್ಷ ನೀಡಲಾಗುವುದು ಎಂದು ತೀರ್ಮಾನ ತೆಗೆದುಕೊಳ್ಳಲಾಗಿದೆ. ಅವರಿಗೆ ಆರೋಗ್ಯ ವಿಮೆ , 5 ವರ್ಷ ಮೇಲ್ಪಟ್ಟು ಸೇವೆ ಸಲ್ಲಿಸಿದ ಅತಿಥಿ ಉಪನ್ಯಾಸಕರನ್ನು ಸಹಾಯಕ ಉಪನ್ಯಾಸಕರ ನೇಮಕಾತಿ ಸಂದರ್ಭದಲ್ಲಿ ಪರಿಗಣಿಸಲಾಗುವುದು ಎಂದು ಹೇಳಿದರು.

ಅತಿಥಿ ಉಪನ್ಯಾಸಕರಿಗೆ 5 ಲಕ್ಷದವರೆಗೆ ಉಚಿತ ಚಿಕಿತ್ಸೆ ಸಿಗುವಂತಹ ಆರೋಗ್ಯ ವಿಮೆ ಕಲ್ಪಿಸಲಾಗಿದ್ದು, ಅತಿಥಿ ಉಪನ್ಯಾಸಕರು ಮಾಸಿಕ 400 ರೂ. ಭರಿಸಬೇಕು. ಉಳಿದ ಹಣವನ್ನು ಸರ್ಕಾರ ತುಂಬಲಿದೆ. ತಾಂತ್ರಿಕ ಶಿಕ್ಷಣ ಇಲಾಖೆ ಅಧೀನದಲ್ಲಿರುವ ಎಂಜಿನಿಯರಿಂಗ್‌, ಪಾಲಿಟೆಕ್ನಿಕ್‌ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೂ ಈ ಎಲ್ಲ ಸೌಲಭ್ಯಗಳೂ ಅನ್ವಯವಾಗಲಿವೆ ಎಂದು ಅವರು ತಿಳಿಸಿದರು.

ಅತಿಥಿ ಉಪನ್ಯಾಸಕರ ಬಹುತೇಕ ಬೇಡಿಕೆಗಳನ್ನು ಈಡೇರಿಸಲು ಸರಕಾರ ಮುಂದಾಗಿದೆ. ಅತಿಥಿ ಉಪನ್ಯಾಸಕರು ತಮ್ಮ ಪ್ರತಿಭಟನೆಯನ್ನು ಹಿಂಪಡೆದುಕೊಳ್ಳಬೇಕು. ಈ ಪ್ರತಿಭಟನೆಗಳಿಂದ ಸಾಕಷ್ಟು ತೊಂದರೆಯಾಗುತ್ತಿದೆ, ಇಲ್ಲದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

LEAVE A REPLY

Please enter your comment!
Please enter your name here