ಚೆಕ್ ಬೌನ್ಸ್ ಕೇಸ್ – ಸಚಿವ ಮಧು ಬಂಗಾರಪ್ಪಗೆ 7 ಕೋಟಿ ರೂ. ದಂಡ – ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ

ಮಂಗಳೂರು (ಬೆಂಗಳೂರು): ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ 6 ಕೋಟಿ 96 ಲಕ್ಷದ 70 ಸಾವಿರ ರೂಪಾಯಿ ದಂಡ‌ ವಿಧಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ. ದಂಡ ಪಾವತಿಸದಿದ್ದರೆ 6 ತಿಂಗಳು ಸೆರೆವಾಸ‌ ಅನುಭವಿಸಲು ಆದೇಶಿಸಿದೆ.

6 ಕೋಟಿ 96 ಲಕ್ಷದ 70 ಸಾವಿರ ರೂ. ದಂಡದ ಹಣದಲ್ಲಿ 6,96,60,000 ದೂರುದಾರರಿಗೆ ಪರಿಹಾರವಾಗಿ ನೀಡಬೇಕು. ಇನ್ನುಳಿದ 10 ಸಾವಿರ ರೂಪಾಯಿ ಸರ್ಕಾರಕ್ಕೆ ದಂಡವಾಗಿ ನೀಡಲು ಕೋರ್ಟ್ ಆದೇಶಿಸಿದೆ.

ಆಕಾಶ್ ಆಡಿಯೋ ಕಂಪನಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಮಧು ಬಂಗಾರಪ್ಪ ಅವರು ರಾಜೇಶ್ ಎಕ್ಸ್ಪೋರ್ಟ್ ಸಂಸ್ಥೆಗೆ 6.60 ಕೋಟಿ ಬಾಕಿ ಪಾವತಿಗೆ ಚೆಕ್ ನೀಡಿದ್ದರು. ಆದರೆ 2011ರಲ್ಲಿ ಮಧು ಬಂಗಾರಪ್ಪ ನೀಡಿದ್ದ ಚೆಕ್ ಬೌನ್ಸ್ ಆಗಿತ್ತು. ಈ ಹಿನ್ನೆಲೆಯಲ್ಲಿ ರಾಜೇಶ್ ಎಕ್ಸ್ಪೋರ್ಟ್ ಸಂಸ್ಥೆ ಮಧು ಬಂಗಾರಪ್ಪ ವಿರುದ್ಧ ಕೇಸ್ ದಾಖಲಿಸಿತ್ತು.

ಕೋರ್ಟಿನಲ್ಲಿ ಕೇವಲ 50 ಲಕ್ಷ ರೂ. ನೀಡಿ ಉಳಿದ ಹಣ ಪಾವತಿಸಿರಲಿಲ್ಲ. ಜನವರಿ 30ರೊಳಗೆ 6.10 ಲಕ್ಷ ಪಾವತಿಸುವುದಾಗಿ ಮಧು ಬಂಗಾರಪ್ಪ ಮುಚ್ಚಳಿಕೆ ಬರೆದುಕೊಟ್ಟಿದ್ದರು. ಆದರೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್, ಮುಚ್ಚಳಿಕೆಯನ್ನು ನಿರಾಕರಿಸಿದೆ. ಈ ಹಿಂದೆಯೂ ಮಧು ಬಂಗಾರಪ್ಪ ನೀಡಿದ್ದ ಮುಚ್ಚಳಿಕೆ ಪಾಲಿಸಿಲ್ಲ. ಹೀಗಾಗಿ  ನ್ಯಾಯಾಧೀಶ ಜೆ. ಪ್ರೀತ್ ಮಧು ಬಂಗಾರಪ್ಪ ಮನವಿಯನ್ನು ತಿರಸ್ಕರಿಸಿದ್ದಾರೆ.

LEAVE A REPLY

Please enter your comment!
Please enter your name here