ನೂರು ಪದಗಳಿಗೆ ಮಿಗಿಲಾದ ಒಂದು ಚಿತ್ರ-ವೈರಲ್‌ ಆದ ಹೃದಯಸ್ಪರ್ಶಿ ಚಿತ್ರ

ಮಂಗಳೂರು(ಕೊಯಂಬತ್ತೂರು): ತಮಿಳುನಾಡು ಸರ್ಕಾರದ ಪರಿಸರ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸುಪ್ರಿಯಾ ಸಾಹು ಜ.2ರಂದು ಸಾಮಾಜಿಕ ಮಾಧ್ಯಮ ʼಎಕ್ಸ್ʼನಲ್ಲಿ ಫೋಟೋವೊಂದನ್ನು ಹಂಚಿಕೊಂಡಿದ್ದು, ಅಂತರ್ಜಾಲದಲ್ಲಿ ವೈರಲ್ ಆಗಿದೆ. ತಮಿಳುನಾಡಿನ ಕೊಯಂಬತ್ತೂರು ಮತ್ತು ಪೊಲ್ಲಾಚಿ ಜಿಲ್ಲೆಗಳಿಗೆ ಹಬ್ಬಿಕೊಂಡಿರುವ ಆನಮಲೈ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅರಣ್ಯ ಸಿಬ್ಬಂದಿ ರಕ್ಷಿಸಿದ ಮರಿ ಆನೆಯೊಂದು ತನ್ನ ತಾಯಿಯ ಪಕ್ಕದಲ್ಲಿ ಮಲಗಿರುವ ಹೃದಯಸ್ಪರ್ಶಿ ಫೋಟೋ ಎಲ್ಲರ ಮನಸೆಳೆದಿದೆ.

ಡಿಸೆಂಬರ್ 30ರಂದು ಮರಿ ಆನೆ ತನ್ನ ತಾಯಿಯಿಂದ ಬೇರ್ಪಟ್ಟು ತಾಯಿಯನ್ನು ಹುಡುಕುತ್ತಿರುವುದನ್ನು ಅರಣ್ಯಾಧಿಕಾರಿಗಳು ಗಮನಿಸಿದ್ದು, ರಕ್ಷಣಾ ಕಾರ್ಯಾಚರಣೆ ಕೈಗೊಂಡು ಮರಿಯಾನೆಯನ್ನು ರಕ್ಷಿಸಿದ್ದಾರೆ. ಡ್ರೋನ್‌ ಮತ್ತು ಅನುಭವಿ ಅರಣ್ಯ ವೀಕ್ಷಕರ ನೆರವಿನಿಂದ, ಆನೆ ಹಿಂಡನ್ನು ಪತ್ತೆ ಮಾಡಿ, ಮರಿಯಾನೆಯನ್ನು ಸುರಕ್ಷಿತವಾಗಿ ತಾಯಿಯೊಂದಿಗೆ ಸೇರಿಸಲಾಯಿತು. ವನ್ಯಜೀವಿ ರಕ್ಷಣಾ ಕಾರ್ಯಾಚರಣೆ ಬಹುಸೂಕ್ಷ್ಮ ಕಾರ್ಯಾಚರಣೆಯಾಗಿದ್ದು, ಪ್ರಾಣಿಗಳನ್ನು ಅದರಲ್ಲೂ ಮರಿಗಳ ಕಾರ್ಯಾಚರಣೆ ಸಂದರ್ಭ ಮಾನವ ಸ್ಪರ್ಷದ ಗುರುತು, ವಾಸನೆ ತಿಳಿದರೆ, ಉಳಿದ ಪ್ರಾಣಿಗಳು ಅವುಗಳನ್ನು ಹತ್ತಿರಕ್ಕೂ ಬಿಟ್ಟುಕೊಳ್ಳುವುದಿಲ್ಲ. ಆ ಪ್ರಾಣಿಗಳು ತಾಯಿ ಮರಿಗಳಾದರೂ ಸರಿ, ದೂರ ಮಾಡುತ್ತವೆ. ಈ ಕಾರಣದಿಂದ ಮರಿಗಳು ಸಾಯುವ ಸ್ಥಿತಿ ನಿರ್ಮಾಣವಾಗುವುದು ಇದೆ. ಇದೇ ಕಾರಣಕ್ಕೆ  ಅಮ್ಮನಿಂದ ಬೇರ್ಪಟ್ಟಿದ್ದ ನಾಲ್ಕೈದು ತಿಂಗಳ ಮರಿಯಾನೆಯನ್ನು ರಕ್ಷಿಸಿದ ಸಿಬ್ಬಂದಿಗಳು, ಮಾನವ ಸ್ಪರ್ಶದ ಕುರುಹು ಮರೆಮಾಚಲು ಕೆಸರಿನ ಮಣ್ಣನ್ನು ಅದರ ಮೇಲೆ ಮೆತ್ತಿ, ಆನೆಯ ಹಿಂಡಿನ ಹತ್ತಿರಕ್ಕೆ ಕೊಂಡೊಯ್ದು ಅದನ್ನು ಬಿಟ್ಟು ತಾಯಿ ಜೊತೆ ಸೇರಿಸಲಾಗುತ್ತದೆ. ತಾಯಿಯ ಮಡಿಲು ಸೇರಿದ ಮರಿಯಾನೆ ಅಮ್ಮನ ಕಾಲಬುಡದಲ್ಲಿ ಮಲಗಿದ ದೃಶ್ಯ ಹೃದಯಸ್ಪರ್ಶಿಯಾಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

https://twitter.com/supriyasahuias/status/1742189495464972676/photo/1

LEAVE A REPLY

Please enter your comment!
Please enter your name here