ಮಂಗಳೂರು(ಬೆಂಗಳೂರು): ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಾದನಾಯಕನಹಳ್ಳಿಯ ತಿರುಮಲಪುರದಲ್ಲಿ ತಡರಾತ್ರಿ ನಡೆದಿದೆ.
ಕೊಡಗು ಮೂಲದ ಹೆಸರುಘಟ್ಟದ ಆರ್.ಆರ್ ಕಾಲೇಜುನಲ್ಲಿ ಪ್ರಥಮ ವರ್ಷದ ಬಿಇ ಇನ್ಫಾರ್ಮೇಶನ್ ಸೈನ್ಸ್ ವ್ಯಾಸಂಗ ಮಾಡುತ್ತಿದ್ದ ವಿಶು ಉತ್ತಪ್ಪ (19) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಯಾಗಿದ್ದಾನೆ. ಚಿಕ್ಕಬಿದರಕಲ್ಲು ಬಳಿಯ ತಿರುಮಲಪುರದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ವಿಶು ಉತ್ತಪ್ಪ ನೈಸ್ ಕಂಪನಿಯಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ರವಿ ತಿಮ್ಮಯ್ಯ ಅವರ ಒಬ್ಬನೇ ಪುತ್ರನಾಗಿದ್ದಾನೆ. ರವಿ ತಿಮ್ಮಯ್ಯ ಅವರು ಕೊಡಗಿನಲ್ಲಿ ಪರವಾನಗಿ ಪಡೆದ ಡಬ್ಬಲ್ ಬ್ಯಾರಲ್ ಗನ್ ಹೊಂದಿದ್ದು ತಾವು ಕೆಲಸ ಮಾಡುತ್ತಿದ್ದ ಕಡೆ ಅಗತ್ಯವಿಲ್ಲದಿದ್ದರಿಂದ ಗನ್ ಮನೆಯಲ್ಲಿಯೇ ಇಟ್ಟು ಹೋಗುತ್ತಿದ್ದರು. ನಿನ್ನೆ ಮಧ್ಯಾಹ್ನ ವಿಶು ಉತ್ತಪ್ಪ ಮನೆಯಲ್ಲಿದ್ದು ಆತನನ್ನು ವಿಚಾರಿಸಿ ತಂದೆ ತಾಯಿ ಮನೆಯ ಸಾಮಾನುಗಳನ್ನು ತರಲು ಕಾರಿನಲ್ಲಿ ಹೋರಹೋಗಿದ್ದರು. ಕೆಲವೇ ಸಮಯದ ಬಳಿಕ ವಿಶು ಉತ್ತಪ್ಪ ತಾಯಿಗೆ ಮೊಬೈಲ್ ಕರೆ ಮಾಡಿ ನನ್ನನ್ನು ಕ್ಷಮಿಸಿ ಎಂದು ಹೇಳಿದ್ದಾನೆ. ಸಮಾಧಾನಪಡಿಸಿದ ತಾಯಿಗೆ ಮತ್ತೊಮ್ಮೆ ಕರೆ ಮಾಡಿ ನನ್ನನ್ನು ಕ್ಷಮಿಸಿ ನಾನು ಗುಂಡು ಹಾರಿಸಿಕೊಂಡಿದ್ದೇನೆ ಎಂದು ಹೇಳಿದ್ದಾನೆ. ತಕ್ಷಣವೇ ಕಾರಿನಲ್ಲಿ ತಂದೆ-ತಾಯಿ ವಾಪಾಸು ಮನೆಗೆ ಬಂದಾಗ ಗಾಯಗೊಂಡ ಸ್ಥಿತಿಯಲ್ಲೇ ವಿಶು ಉತ್ತಪ್ಪ ಬಾಗಿಲು ತೆಗೆದಿದ್ದು ಕೂಡಲೇ ಆತನನ್ನು ಸ್ಥಳೀಯ ಪ್ರಕ್ರಿಯಾ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೇ ವಿಶು ಉತ್ತಪ್ಪ ಮೃತಪಟ್ಟಿದ್ದಾನೆ. ವಿಶು ಉತ್ತಪ್ಪ ಎದೆಯ ಎಡಭಾಗಕ್ಕೆ ಗುಂಡು ಹಾರಿಸಿಕೊಂಡಿದ್ದು, ಮಾದನಾಯಕನಹಳ್ಳಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ವಿಶುವಿನ ಮೊಬೈಲ್ ಫೋನ್ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.