ಮಂಗಳೂರು (ತುಮಕೂರು): ಹಂದಿ ಬೇಟೆಯಾಡಲು ಬಳಸುವ ಮದ್ದಿನ ಉಂಡೆ ಶಾಲೆಯ ಪಕ್ಕದಲ್ಲಿ ಮಕ್ಕಳ ಕೈಗೆ ಸಿಕ್ಕಿದ್ದು ಬಾಲ್ ಎಂದು ಭಾವಿಸಿರುವ ಮಕ್ಕಳು ಅದರೊಂದಿಗೆ ಆಟವಾಡಿದ ಘಟನೆ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಮಾದೇನಹಳ್ಳಿಯಲ್ಲಿ ನಡೆದಿದೆ.
ಯುವರಾಜ ಎಂಬ ಬಾಲಕನಿಗೆ ಸ್ಫೋಟಕ ಸಿಕ್ಕಿದ್ದು, ಗೆಳೆಯ ಶ್ರೀನಿವಾಸ್ ಎಂಬ ಹುಡುಗನಿಗೆ ಅದನ್ನು ನೀಡಿದ್ದ. ಸ್ಫೋಟಕ ಉಂಡೆಯನ್ನು ಮನೆಗೆ ಒಯ್ದ ಶ್ರೀನಿವಾಸ್ ಅದನ್ನು ತಂದೆಗೆ ನೀಡಿದ್ದಾನೆ. ಇದು ಯಾವುದೋ ಮಾಟ ಮಂತ್ರದ ಬಾಲ್ ಇರಬೇಕೆಂದು ಭಾವಿಸಿದ ಶ್ರೀನಿವಾಸ್ ತಂದೆ ಅದನ್ನು ದೂರಕ್ಕೆ ಎಸೆದಿದ್ದಾರೆ. ಶ್ರೀನಿವಾಸ್ ತಂದೆ ಎಸೆದಿದ್ದ ಉಂಡೆಯನ್ನು ಬೀದಿನಾಯಿ ಕಚ್ಚಿದ್ದು ಸ್ಫೋಟ ಸಂಭವಿಸಿದ್ದು ನಾಯಿ ಸ್ಥಳದಲ್ಲೇ ಸಾವನ್ನಪ್ಪಿದೆ. ಅದೃಷ್ಟವಶಾತ್ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಮಗನ ಕೈಯಲ್ಲಿದ್ದ ಮದ್ದಿನ ಉಂಡೆ ಸ್ಫೋಟಕ ಎಂದು ತಿಳಿಯುತ್ತಿದ್ದಂತೆ ಬೆಚ್ಚಿಬಿದ್ದ ಬಾಲಕನ ತಂದೆ ಶಾಲೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬುಕ್ಕಾಪಟ್ಟಣ ಪೊಲೀಸರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಸ್ಫೋಟಗೊಂಡ ಸ್ಥಳ, ಪತ್ತೆಯಾದ ಜಾಗ ಪರಿಶೀಲಿಸಿರುವ ಪೊಲೀಸರು. ಮಕ್ಕಳೊಂದಿಗೆ ಮಾಹಿತಿ ಪಡೆದು ವಿಚಾರಣೆ ಮುಂದುವರಿಸಿದ್ದಾರೆ. ಆದರೆ ಶಾಲೆ ಬಳಿ ಮದ್ದಿನ ಉಂಡೆ ಎಸೆದವರು ಯಾರು ಎನ್ನುವ ಬಗ್ಗೆ ತನಿಖೆಯಿಂದ ತಿಳಿದು ಬರಬೇಕಿದೆ.