ಮಂಗಳೂರು (ಸಕಲೇಶಪುರ): ನವಜಾತ ಶಿಶು ಮಾರಾಟ ಪ್ರಕರಣದ ಆರೋಪದ ಹಿನ್ನೆಲೆಯಲ್ಲಿ ಸಕಲೇಶಪುರ ಗ್ರಾಮಾಂತರ ಠಾಣೆ ಪೊಲೀಸರು ಐವರನ್ನು ಬಂಧಿಸಿದ್ದಾರೆ. ಹರಗರವಳ್ಳಿಯ ಗಿರಿಜಾ, ಹಿರಿಯೂರಿನ ಆಶಾ ಕಾರ್ಯಕರ್ತೆ ಸುಮಿತ್ರಾ, ಹೊಸಳ್ಳಿಯ ಸುಬ್ರಮಣಿ, ಶ್ರೀಕಾಂತ್ ಹಾಗೂ ಚಿಕ್ಕಮಗಳೂರು ಮೂಲದ ಉಷಾ ಬಂಧಿತ ಆರೋಪಿಗಳು.
ಜ.2ರಂದು ಜಿಲ್ಲಾ ಮಕ್ಕಳ ರಕ್ಷಾಣಾಧಿಕಾರಿ ಕಾಂತರಾಜು, ಜಿಲ್ಲಾ ಅಂಗನವಾಡಿ ಮೇಲ್ವಿಚಾರಕಿ ಉಮಾಶ್ರೀ ಹಾಗೂ ಸಕಲೇಶಪುರ ಸಿಡಿಪಿಒ ಶಶಿಕಲಾ ಹಾಗೂ ಮಕ್ಕಳ ಸಹಾಯವಾಣಿ ಸಿಬ್ಬಂದಿ, ಹೊಸಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ವೇಳೆ ಮಗು ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ.
ಮಗುವಿನ ತಾಯಿ ಗಿರಿಜಾ ಮತ್ತು ಅವರ ಪತಿ ಎಸ್ಟೇಟ್ ಮಾಲಿಕರಾದ ಸೋಮಶೇಖರ್ ಸುಬ್ರಮಣಿ ಎಂಬುವರ ಕಾಪಿ ಎಸ್ಟೇಟ್ ನಲ್ಲಿ ಕೂಲಿ ಕೆಲಸ ಮಾಡಿಕೊಂಡು ಅಲ್ಲೇ ವಾಸವಾಗಿದ್ದರು. ಗಿರಿಜಾ ದಂಪತಿಗೆ ಈಗಾಗಲೇ ಇಬ್ಬರು ಮಕ್ಕಳಿದ್ದು, ನ.13ರಂದು ಗಂಡು ಮಗುವಿಗೆ ಜನ್ಮ ನೀಡಿದ್ದರು. ತಾಯಿ-ಮಗುವನ್ನು ನ.15ರಂದು ಕೆಲಸ ಮಾಡುತ್ತಿದ್ದ ತೋಟದ ಮನೆಗೆ ಕರೆ ತರಲಾಗಿತ್ತು. ಆದರೆ ಈ ಮಗುವನ್ನು ಸಾಕಲು ಕಷ್ಟ ಎಂದು ಹಿರಿಯೂರು ಆಶಾ ಕಾರ್ಯಕರ್ತೆ ಸುಮಿತ್ರಾ ಸಹಾಯದಿಂದ ಉಷಾ ಎಂಬುವವರಿಗೆ ನ.16ರಂದು ಮಾರಾಟ ಮಾಡಲಾಗಿತ್ತು ಎಂದು ಹಾಸನ ಎಸ್ಪಿ ಮಹಮ್ಮದ್ ಸುಜಿತಾ ಮಾಹಿತಿ ನೀಡಿದ್ದಾರೆ. ಸಕಲೇಶಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.