ಮಂಗಳೂರು: ಶ್ರೀರಂಗಪಟ್ಟಣ 3ನೇ ಅಪರ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ದ್ವೇಷಭಾಷಣ ಪ್ರಕರಣದ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ಜ.10ರಂದು ನಡೆಯಿತು.
ದೂರುದಾರ ನಜ್ಮಾ ನಝೀರ್ ಚಿಕ್ಕನೇರಳೆ ಪರವಾಗಿ ಬೆಂಗಳೂರಿನ ಹಿರಿಯ ವಕೀಲ ಎಸ್ ಬಾಲನ್ ವಿಸ್ತೃತವಾಗಿ ವಾದ ಮಂಡಿಸಿದ್ದಾರೆ. ಸುಪ್ರಿಂ ಕೋರ್ಟ್ ಮತ್ತು ಹಲವು ಹೈಕೋರ್ಟ್ ಗಳ ತೀರ್ಪುಗಳ ಪ್ರಕಾರ ಆರೋಪಿ ಕಲ್ಲಡ್ಕ ಪ್ರಭಾಕರ್ ಭಟ್ ನಿರೀಕ್ಷಣಾ ಜಾಮೀನಿಗೆ ಅನರ್ಹರಾಗಿದ್ದು, ದೇಶದ ಭದ್ರತೆ, ಸೌಹಾರ್ದತೆಗೆ ಕಂಟಕವಾಗಿದೆ. ಈ ಹಿಂದಿನ ಐಪಿಸಿ ಮಾತ್ರವಲ್ಲ, ಈಗಿನ ನ್ಯಾಯ ಸಂಹಿತಾ ಮತ್ತು ಸಾಕ್ಷ್ಯ ಅಧಿನಿಯಮದ ಪ್ರಕಾರವೂ ಆರೋಪಿ ನಿರೀಕ್ಷಣಾ ಜಾಮೀನಿಗೆ ಅನರ್ಹರಾಗಿದ್ದಾರೆಂದು ಕಾನೂನು, ಕಾಯ್ದೆಗಳನ್ನು ಉಲ್ಲೇಖಿಸಿ ವಾದ ಮಂಡಿಸಿದ್ದಾರೆ. ಇದೇ ವೇಳೆ ಕಲ್ಲಡ್ಕ ಭಟ್ ಪರ ವಕೀಲರು ಮತ್ತು ಸರ್ಕಾರಿ ವಕೀಲರು ವಾದ ಮಂಡಿಸಿದರು. ದೂರುದಾರರ ಪರವಾಗಿ ಹಿರಿಯ ವಕೀಲರಾದ ಎಸ್ ಬಾಲನ್ ಮತ್ತು ಲಕ್ಷ್ಮಣ ಚೀರನಹಳ್ಳಿ ಉಪಸ್ಥಿತರಿದ್ದರು. ನಿರೀಕ್ಷಣಾ ಜಾಮೀನಿನ ಅರ್ಜಿಯ ಬಗೆಗಿನ ವಾದ ಮುಕ್ತಾಯಗೊಂಡಿದ್ದು ಆದೇಶವನ್ನು ಜ.17 ಕ್ಕೆ ಕಾಯ್ದಿರಿಸಲಾಗಿದೆ.