ಬೀದಿಬದಿ ವ್ಯಾಪಾರಿಗಳ ಐತಿಹಾಸಿಕ ಹೆಜ್ಜೆ-ದಕ್ಷಿಣ ಕನ್ನಡ ಬೀದಿಬದಿ ವ್ಯಾಪಾರಸ್ಥರ ಸಹಕಾರ ಸಂಘ ಉದ್ಘಾಟನೆ

ಮಂಗಳೂರು: ಬೀದಿಬದಿ ವ್ಯಾಪಾರಿಗಳ ಆರ್ಥಿಕ ಹಿತರಕ್ಷಣೆ ಮತ್ತು ಸ್ವಾವಲಂಬಿ ಬದುಕಿಗಾಗಿ ದಕ್ಷಿಣ ಕನ್ನಡ ಬೀದಿಬದಿ ವ್ಯಾಪಾರಸ್ಥರ ಸಹಕಾರ ಸಂಘ (ನಿ) ಉದ್ಘಾಟನೆ ಕಾರ್ಯಕ್ರಮ ಜ.10ರಂದು ನಗರದ ಕುದ್ಮುಲ್ ರಂಗ ರಾವ್ ಪುರಭವನದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ದೀಪ ಬೆಳಗಿಸಿ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು ಬೀದಿಬದಿ ವ್ಯಾಪಾರಿಗಳು ಸ್ವಾವಲಂಬಿಗಳಾಗಲು ಕೇಂದ್ರ ಮತ್ತು ರಾಜ್ಯ ಸರಕಾರ ಅನೇಕ ಕಾರ್ಯಕ್ರಮ ಹಮ್ಮಿಕೊಂಡಿದೆ. ಮಂಗಳೂರು ಮಹಾನಗರ ಪಾಲಿಕೆ ಬೀದಿಬದಿ ವ್ಯಾಪಾರಿಗಳಿಗಾಗಿ ನಗರದ ಹೃದಯ ಭಾಗದಲ್ಲಿ ಬೃಹತ್ ಬೀದಿ ವ್ಯಾಪಾರ ವಲಯ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ ಹಾಗೂ ನಗರದ ಎಲ್ಲಾ 60ವಾರ್ಡ್ ಗಳಲ್ಲಿ ಬೀದಿಬದಿ ವ್ಯಾಪಾರಿಗಳ ಸಮೀಕ್ಷೆ ನಡೆಸಿ ಪ್ರತಿ ವಾರ್ಡ್ ಗಳಲ್ಲಿ ನಗರ ಪಾಲಿಕೆ ವ್ಯಾಪಾರ ವಲಯ ನಿರ್ಮಿಸಿ ಕೊಡಲಿದೆ ಎಂದು ಭರವಸೆ ನೀಡಿದ ಅವರು, ಬೀದಿಬದಿ ವ್ಯಾಪಾರಿಗಳು ಸಹಕಾರ ಸಂಘ ರಚಿಸಿರುವುದು ಬೀದಿಬದಿ ವ್ಯಾಪಾರಿಗಳನ್ನು ಪ್ರಗತಿಶೀಲರನ್ನಾಗಿ ಮಾಡಲು ಅನುಕೂಲವಾಗಲಿದೆ ಎಂದು ಶುಭ ಹಾರೈಸಿದರು. ಪ್ರಾಸ್ತಾವಿಕ ಮಾತುಗಳನ್ನಾಡಿದ ಸಂಘದ ಅಧ್ಯಕ್ಷ ಬಿ.ಕೆ ಇಮ್ತಿಯಾಝ್ ಬೀದಿಬದಿ ವ್ಯಾಪಾರಿಗಳ ರಕ್ತ ಹೀರುತ್ತಿರುವ ಬಡ್ಡಿ ದಂಧೆಕೋರರಿಂದ ಮುಕ್ತಿಗೊಳಿಸಲಿಕ್ಕಾಗಿ ಮತ್ತು ಬೀದಿ ವ್ಯಾಪಾರಿಗಳನ್ನು ಗುರಿಯಾಗಿಸಿಕೊಂಡು ಪಂಗನಾಮ ಹಾಕುತ್ತಿದ್ದ ಬ್ಲೇಡ್ ಕಂಪೆನಿಗಳಿಂದ ಬೀದಿ ವ್ಯಾಪಾರಿಗಳನ್ನು ರಕ್ಷಿಸಿ ಆರ್ಥಿಕ ಸ್ವಾವಲಂಬಿಗಳಾಗಿ ಮಾಡಿ ಅವರನ್ನು ಪ್ರಗತಿಶೀಲರನ್ನಾಗಿ ಮಾಡುವ ನಿಟ್ಟಿನಲ್ಲಿ ಸಹಕಾರ ಸಂಘವನ್ನು ರಚಿಸಲಾಗಿದೆ ಎಂದರು. ಪಾಲಿಕೆಯ ವಿಪಕ್ಷ ನಾಯಕ ಪ್ರವೀಣ್ ಚಂದ್ರ ಆಳ್ವ ಅವರು ಸಹಕಾರ ಸಂಘದ ಸದಸ್ಯರಿಗೆ ಷೇರು ಪ್ರಮಾಣ ಪತ್ರ ವಿತರಿಸಿ ಬೀದಿಬದಿ ವ್ಯಾಪಾರಿಗಳ ಸಹಕಾರ ಸಂಘ ಮಾಡಿರುವುದು ಒಂದು ಐತಿಹಾಸಿಕ ಹೆಜ್ಜೆ ಎಂದು ಶ್ಲಾಘಸಿ ನಗರದ ಅಭಿವೃದ್ಧಿಗೆ ಬೀದಿ ವ್ಯಾಪಾರಿಗಳು ಕೈಜೋಡಿಸಬೇಕೆಂದು ಕರೆ ನೀಡಿದರು.

ಮುಖ್ಯ ಅತಿಥಿಯಾಗಿದ್ದ ಪದ್ಮಶ್ರೀ ಹಾಜಬ್ಬ ಹರೇಕಳ ಮಾತನಾಡುತ್ತಾ ನಾನು ಸ್ವತಃ ಬೀದಿ ವ್ಯಾಪಾರಿಯಾಗಿ  ಹೊಟ್ಟೆಪಾಡಿನ ಕಷ್ಟಗಳು ನನಗೆ ಚೆನ್ನಾಗಿ ತಿಳಿದಿದೆ. ನಾನು ಪ್ರಧಾನಿ, ರಾಷ್ಟ್ರಪತಿಗಳಿಂದ ಪ್ರಶಸ್ತಿ ಸ್ವೀಕರಿಸಿರಬಹುದು ಆದರೆ ನನ್ನ ಕಷ್ಟದ ದಿನಗಳ ಬಗ್ಗೆ ಇನ್ನೂ ನೆನಪಿದೆ ಎಂದ ಅವರು ಬೀದಿವ್ಯಾಪಾರಿಗಳು ಎಂದೂ ಸ್ವಾಭಿಮಾನವನ್ನು ಬಿಟ್ಟು ಕೊಡುವವರಲ್ಲ ಎಂದರು. ಕಾರ್ಮಿಕ ಮುಖಂಡ ಸುನಿಲ್ ಕುಮಾರ್ ಬಜಾಲ್, ಭಗವತಿ ಕೋ ಆಪರೇಟಿವ್ ಬ್ಯಾಂಕಿನ ಅಧ್ಯಕ್ಷರಾದ ಬಿ ಎಂ ಮಾಧವ, ಪರಿವರ್ತನ ಗ್ರಾಮೀಣ ಸೊಸೈಟಿಯ ನಿರ್ದೇಶಕ ಡಿ ಕೃಷ್ಣಾನಂದ, ಚಿಂತಕಿ ಡಾ ರೀಟಾ ನೋರೋನ್ಹ, ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್,ಸಾಮರಸ್ಯ ಮಂಗಳೂರಿನ ಅಧ್ಯಕ್ಷೆ ಮಂಜುಳಾ ನಾಯಕ್, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಕೃಷ್ಣಪ್ಪ ಸಾಲಿಯಾನ್,ಸಂಘದ ಉಪಾಧ್ಯಕ್ಷ ಹರೀಶ್ ಪೂಜಾರಿ ಶುಭ ಹಾರೈಸಿ ಮಾತನಾಡಿದ ಈ ಕಾರ್ಯಕ್ರಮದಲ್ಲಿ ಹಲವು ಸಂಘ ಸಂಘಟನೆಯ ಪದಾಧಿಕರಿಗಳು ಸೇರಿದಂತೆ ನೂರಾರು ಬೀದಿ ವ್ಯಾಪಾರಿಗಳು ಉಪಸ್ಥಿತರಿದ್ದರು. ಸಂಘದ ನಿರ್ದೇಶಕ ಪ್ರವೀಣ್ ಕುಮಾರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರೆ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕುಮಾರಿ ಶ್ರೇಯ ವಂದಿಸಿದರು.

LEAVE A REPLY

Please enter your comment!
Please enter your name here