ನನ್ನನ್ನು ಪುನಹ ಚಿಕಿತ್ಸೆಗೆಂದು ಆಸ್ಪತ್ರೆಗೆ ಕಳುಹಿಸುವ ಬದಲು ಜೈಲಿನಲ್ಲೇ ಸಾಯಲು ಬಿಡಿ ಮೈ ಲಾರ್ಡ್
ಇದು ಕಳೆದ ಎರಡು ದಿನಗಳ ಹಿಂದೆ ಒಂದು ಕಾಲದ ದೇಶದ ಶ್ರೀಮಂತರ ಪಟ್ಟಿಯಲ್ಲಿ 1.9 ಬಿಲಿಯನ್ ಡಾಲರ್ ಆಸ್ತಿಗಳೊಂದಿಗೆ 16ನೇ ಸ್ಥಾನ ಅಲಂಕರಿಸಿದ್ದ ಜೆಟ್ ಏರ್ ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಮುಂಬೈ ಹೈಕೋರ್ಟಿನ ನ್ಯಾಯಾಧೀಶರ ಮುಂದೆ ಕೈಮುಗಿದು ಬೇಡಿಕೊಂಡ ಮಾತುಗಳು.
1949ರಲ್ಲಿ ಪಂಜಾಬಿನ ಬಡ ಕುಟುಂಬವೊಂದರಲ್ಲಿ ಜನಿಸಿದ ನರೇಶ್ ಗೋಯಲ್ ಪ್ರಾಥಮಿಕ ಶಿಕ್ಷಣ ಅಲ್ಲಿಯ ಸರಕಾರಿ ಶಾಲೆಯೊಂದರಲ್ಲಿ ಆಗುತ್ತದೆ. ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡ ನರೇಶ್ ಆಮೇಲೆ ಬೆಳೆಯುವುದು ಸಂಬಂಧಿಕರ ಮನೆಯೊಂದರಲ್ಲಿ. ಅಲ್ಲಿದ್ದುಕೊಂಡೇ ಪಾಟಿಯಾಲದ ಸರಕಾರಿ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಡಿಗ್ರಿ ಪಡೆಯುತ್ತಾರೆ. ಓದುವುದರ ಜೊತೆ ಕೆಲಸಕ್ಕಾಗಿ ಅಲೆಯುತ್ತಿದ್ದಾಗ 1967 ರಲ್ಲಿ ಸಂಬಂಧಿಕರು ಒಬ್ಬರು ನಡೆಸುತ್ತಿದ್ದ ಟ್ರಾವೆಲ್ ಏಜೆನ್ಸಿಯಲ್ಲಿ ಕ್ಯಾಶಿಯರ್ ಆಗಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಆಗ ಅವರಿಗೆ ಇದ್ದ ಸಂಬಳ ತಿಂಗಳಿಗೆ 300 ರೂಪಾಯಿಗಳು. ಅಲ್ಲಿಂದ ಅವರು ಸೇರಿಕೊಳ್ಳುವುದು ಲೆಬನೀಸ್ ಇಂಟರ್ನ್ಯಾಷನಲ್ ಏರ್ ಲೈನ್ ಸಂಸ್ಥೆಯ ಸೇಲ್ಸ್ ಅಂಡ್ ಮಾರ್ಕೆಟಿಂಗ್ ವಿಭಾಗಕ್ಕೆ. ಅಲ್ಲಿ ಸ್ವಲ್ಪ ಸಮಯ ಕೆಲಸ ಮಾಡಿದ ನಂತರ ಅವರ ಜೀವನದಲ್ಲಿ ದೊಡ್ಡ ಬ್ರೇಕ್ ಸಿಗುವುದು ಇರಾಕಿ ಏರ್ವೇಸ್ ನಲ್ಲಿ ಪಬ್ಲಿಕ್ ರಿಲೇಶನ್ ಮ್ಯಾನೇಜರ್ ಆಗಿ ಸೇರಿಕೊಂಡ ಬಳಿಕ. ಅಂತರಾಷ್ಟ್ರೀಯ ಹಾರಾಟ, ಹಲವು ಗಣ್ಯರ, ಉನ್ನತ ಅಧಿಕಾರಿಗಳ ಜೊತೆ ಒಡನಾಟಗಳು ಇವೆಲ್ಲವೂ ಗೊಯಲ್ ರನ್ನು ಟ್ರಾವೆಲ್ ಕ್ಷೇತ್ರದಲ್ಲಿ ಉದ್ದಿಮೆಯ ತಜ್ಞರನ್ನಾಗಿ ಮಾಡಲು ಬಹಳ ಸಹಾಯವಾಯಿತು. ಅಲ್ಲಿಂದ ಇನ್ನೂ ಮುಂದುವರೆದು ಮಿಡ್ಲ್ ಈಸ್ಟ್, ರಾಯಲ್ ಜೋರ್ಡಾನ್, ಫಿಲಿಪೈನ್ಸ್ ಏರ್ಲೈನ್ಸ್ ಮುಂತಾದ ಕಡೆಗಳಲ್ಲಿ ಸ್ವಲ್ಪ ದಿನಗಳ ಕಾಲ ಉದ್ಯೋಗ ಮಾಡುತ್ತಾರೆ.
ಈ ಎಲ್ಲಾ ಅನುಭವಗಳು ಅವರಿಗೆ ಜೆಟ್ ಏರ್ ಎಂಬ ಒಂದು ಟ್ರಾವೆಲ್ ಸಂಸ್ಥೆಯನ್ನು ಪ್ರಾರಂಭಿಸಲು ಪ್ರೇರಣೆಯಾಗುತ್ತದೆ. ಸಣ್ಣ ಬoಡವಾಳದೊoದಿಗೆ 80ರ ದಶಕದಲ್ಲಿ ಪ್ರಾರಂಭಗೊಂಡ ಸಂಸ್ಥೆಗೆ ಆರಂಭದಲ್ಲಿಯೇ ಏರ್ ಫ್ರಾನ್ಸ್, ಕೆತೆ ಪೆಸಿಫಿಕ್ ನಂತಹ ಅಂತರಾಷ್ಟ್ರೀಯ ವಿಮಾನ ಸಂಸ್ಥೆಗಳ ಏಜೆನ್ಸಿ ದೊರೆತು ಯಶಸ್ಸಿನ ಒಂದೊಂದೇ ಮೆಟ್ಟಿಲು ಹತ್ತಲು ಆರಂಭವಾಗುತ್ತದೆ. ಇದರಿಂದ ವಿಮಾನಯಾನ ನಿರ್ವಹಣೆಯ ಕಲೆಯನ್ನು ಸಂಪೂರ್ಣ ಕರಗತ ಮಾಡಿಕೊಂಡ ಗೊಯಲ್ 1992 ರಲ್ಲಿ ದೆಹಲಿಯನ್ನು ಮೂಲವಾಗಿಟ್ಟು ಹುಟ್ಟು ಹಾಕುವ ಸಂಸ್ಥೆಯೇ ಜೆಟ್ ಏರ್ವೇಸ್ ಇಂಡಿಯಾ ಲಿಮಿಟೆಡ್. ಲೀಸ್ ಆಧಾರದಲ್ಲಿ ಹೊರದೇಶದಿಂದ ವಿಮಾನಗಳು ಬರುತ್ತವೆ. ನೋಡುತ್ತಿದ್ದಂತೆ ಮೇ 5, 1993 ರಂದು ಜೆಟ್ ಏರ್ವೇಸಿನ ಮೊದಲ ವಿಮಾನ ದೆಹಲಿಯಿಂದ ಮುಂಬೈಗೆ ಟೇಕ್ ಆಫ್ ಆಗುತ್ತದೆ.
ಆ ದಿನಗಳಲ್ಲಿ ಕೇಂದ್ರದಲ್ಲಿದ್ದದ್ದು ಪಿ.ವಿ. ನರಸಿಂಹರಾವ್ ನೇತೃತ್ವದ ಕಾಂಗ್ರೆಸ್ ಸರಕಾರ. ವಿತ್ತ ಮಂತ್ರಿ ಆಗಿದ್ದದ್ದು ಈ ದೇಶ ಕಂಡ ಅತ್ಯುತ್ತಮ ಆರ್ಥಿಕ ತಜ್ಞ ಮನಮೋಹನ್ ಸಿಂಗ್ ಅವರು. ವಿಶ್ವದ ನಾನಾ ಕಡೆಯಿಂದ ಹೂಡಿಕೆದಾರರನ್ನು ಆಕರ್ಷಿಸಲು ಓಪನ್ ಪಾಲಿಸಿ ಕಾನೂನುಗಳು ಬಂದಿದ್ದವು. ನಾಗರಿಕಯಾನದಲ್ಲೂ ಅದೇ ರೀತಿ ಓಪನ್ ಸ್ಕೈ ಪಾಲಿಸಿಗಳು ಬಂದವು. ಯಾವುದೇ ನಿರ್ಬಂಧವಿಲ್ಲದೆ ಎಷ್ಟು ಬೇಕಾದರೂ ದೇಶದ ಆಗಸಗಳನ್ನು ವಿಮಾನ ಹಾರಾಟಕ್ಕೆ ಉಪಯೋಗಿಸಬಹುದು ಎಂದು ಕೇಂದ್ರ ಸರಕಾರ ಘೋಷಿಸಿತ್ತು. ಇದರ ಸಂಪೂರ್ಣ ಲಾಭ ಪಡೆದ ಜೆಟ್ ಸಂಸ್ಥೆ ದೇಶದಾದ್ಯಂತ 500ಕ್ಕೂ ಹೆಚ್ಚು ನಗರಗಳಿಗೆ ವಿಮಾನ ಹಾರಾಟವನ್ನು ವಿಸ್ತರಿಸಿತು. ಅಲ್ಲಿಂದ ಇನ್ನೂ ಮುಂದಕ್ಕೆ ಹೋಗಿ 2004ರಲ್ಲಿ ಅಂತರಾಷ್ಟ್ರೀಯ ಹಾರಾಟಗಳು ಆರಂಭವಾಯಿತು. ಅತಿ ಕಡಿಮೆ ಅವಧಿಯಲ್ಲಿ ಯಶಸ್ಸು ಎಲ್ಲಿಯವರೆಗೆ ಬಂತೆಂದರೆ ಜೆಟ್ ಎಂಬುದು ಅತ್ಯುತ್ತಮ ಸೇವೆಯೊಂದಿಗೆ ಸರಿಯಾದ ಸಮಯಕ್ಕೆ ಪ್ರಯಾಣಿಕರನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಿಸುವ ವಿಮಾನ ಸಂಸ್ಥೆ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿತು.
ಯಶಸ್ಸಿನ ದಾರಿಯಲ್ಲಿ ನಾಗಾಲೋಟದಿಂದ ಓಡುತ್ತಿದ್ದ ಜೆಟ್ ಸಂಸ್ಥೆಯು 22 ಪರ್ಸೆಂಟ್ ಮಾರ್ಕೆಟ್ ಶೇರು ಕೂಡ ಪಡೆಯುತ್ತದೆ. ಕೆನರಾ ಬ್ಯಾಂಕ್ 800 ಕೋಟಿ ಸಾಲ ನೀಡುತ್ತದೆ. ನರೇಶ್ ಗೋಯಲ್ ಗೆ ಐಎಟಿಎ ಬೋರ್ಡ್ ಆಫ್ ಡೈರೆಕ್ಟರ್ ಸ್ಥಾನ ಕೂಡ ಸಿಗುತ್ತದೆ. ಯಾರ ಕಣ್ಣು ದೃಷ್ಟಿ ತಾಗಿತೋ ಗೊತ್ತಿಲ್ಲ ನರೇಶ್ ಗೋಯಲ್ ಮೊದಲ ತಪ್ಪು ಹೆಜ್ಜೆ ಇಡುವುದು 2006ರಲ್ಲಿ ನಷ್ಟದಲ್ಲಿ ಮುಳುಗಿದ್ದ ಸಹಾರ ಏರ್ ಲೈನ್ ಅನ್ನು ಟೇಕ್ ಓವರ್ ಮಾಡುವುದರಿಂದ. ನಿಧಾನವಾಗಿ ಜಾಗತಿಕ ಮಟ್ಟದಲ್ಲಿ ಆರ್ಥಿಕ ಬಿಕ್ಕಟ್ಟು ಆರಂಭವಾಗಿರುತ್ತದೆ. ವಿಮಾನ ಸಂಸ್ಥೆಗಳು ಕೂಡ ಇದರಿಂದ ಹೊರತಾಗಿರುವುದಿಲ್ಲ. ಹೆಚ್ಚಿನ ಖಾಸಗಿ ವಿಮಾನ ಸಂಸ್ಥೆಗಳು ನಷ್ಟದಲ್ಲಿ ಮುಳುಗುತ್ತವೆ. ಕೆಲವು ಸಂಸ್ಥೆಗಳಿಗೆ ಸರಕಾರಗಳ ಬೆಂಬಲ ಇರುತ್ತದೆ. ಅಂತೂ ಇಂತೂ ನಷ್ಟದಲ್ಲೇ ಸಾಗುತ್ತಿದ್ದ ಜೆಟ್ ಸಂಸ್ಥೆಯ ಮುಖ್ಯ ಅಧಿಕಾರಿಯ ಹುದ್ದೆಯಿಂದ 2019 ರಲ್ಲಿ ನರೇಶ್ ಗೋಯಲ್ ಕೆಳಗಿಳಿಯ ಬೇಕಾಗುತ್ತದೆ. ಅದೇ ವರ್ಷ ಏಪ್ರಿಲ್ 17ರಂದು ರಾತ್ರಿ 10.30 ಕ್ಕೆ ಅಮೃತಸರದಿಂದ ಮುಂಬೈಗೆ ತನ್ನ ಕೊನೆಯ ಹಾರಾಟವನ್ನು ನಡೆಸಿದ ಜೆಟ್ ಏರ್ ವೇಸ್ ತನ್ನೆಲ್ಲ ಹಾರಾಟಗಳನ್ನು ನಿಲ್ಲಿಸಿ ನೆಲಕ್ಕೆ ಇಳಿಯುತ್ತದೆ.
ಕೆನರಾ ಬ್ಯಾಂಕ್ ತನಗೆ ಬಾಕಿ ಬರಲು ಇದ್ದ ದುಡ್ಡಿಗೋಸ್ಕರ ಕೇಸು ಫೈಲು ಮಾಡುತ್ತದೆ. ಇಡಿ, ಸಿಬಿಐ ದಾಳಿ ಮಾಡಿ ವಿಚಾರಣೆ ನಡೆಸುತ್ತವೆ. ಯಾವ ಕಡೆಯಿಂದಲೂ ಬಚಾವಾಗಲು ಸಾಧ್ಯವಾಗದ ನರೇಶ್ ಗೋಯಲ್ ಅವರನ್ನು 2023 ಸೆಪ್ಟೆಂಬರ್ 1 ರಂದು ಕೆನರಾ ಬ್ಯಾಂಕಿನಲ್ಲಿ ಮಾಡಿದ್ದ 538 ಕೋಟಿ ಸಾಲವನ್ನು ಮರುಪಾವತಿಸಲು ಸಾಧ್ಯವಾಗದ ಕಾರಣ ಬಂಧಿಸಲಾಗುತ್ತದೆ. ಕಳೆದ ನಾಲ್ಕು ತಿಂಗಳುಗಳಿಂದ ಮುಂಬೈ ಅರ್ಥರ್ ರೋಡ್ ಜೈಲಿನಲ್ಲಿ ಬಂದಿಯಾಗಿರುವ 75 ವರ್ಷದ ನರೇಶ್ ಗೋಯಲ್ ಎರಡು ದಿನಗಳ ಹಿಂದೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮುಂಬೈ ಹೈಕೋರ್ಟಿನ ನ್ಯಾಯಾಧೀಶರು ವಿಚಾರಣೆ ನಡೆಸುವಾಗ ಹೇಳಿದ್ದು ಹೀಗೆ…. ಮೈ ಲಾರ್ಡ್ ಸಾಲವನ್ನು ಮುಗಿಸುವ ಪ್ರಯತ್ನದಲ್ಲಿ ವ್ಯಾಪಾರ ಮನೆ ಮಠ ಸರ್ವಸ್ವವನ್ನು ಕಳೆದುಕೊಂಡಿದ್ದೇನೆ. ನನ್ನ ಪತ್ನಿ ಕ್ಯಾನ್ಸರ್ ರೋಗದ ನಾಲ್ಕನೇ ಸ್ಟೇಜಿನಲ್ಲಿದ್ದಾಳೆ. ಬದುಕುಳಿಯುವ ಸಾಧ್ಯತೆ ತೀರಾ ಕಡಿಮೆ. ನನ್ನ ಮಕ್ಕಳಿಗೂ ಆರೋಗ್ಯ ಸಮಸ್ಯೆ ಇದೆ. ನಾನಿನ್ನು ಜೀವಿಸುವುದಕ್ಕೆ ಯಾವುದೇ ಅರ್ಥವಿಲ್ಲ. ನನಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವ ಬದಲು ದಯವಿಟ್ಟು ನನ್ನನ್ನು ಜೈಲಿನಲ್ಲಿಯೇ ಸಾಯಲು ಬಿಡಿ ಎಂದು. ತಿಂಗಳಿಗೆ 300 ರೂಪಾಯಿ ಸಂಬಳದಿಂದ ಜೀವನ ಆರಂಭಿಸಿ ತನ್ನ ಕಠಿಣ ಪರಿಶ್ರಮದಿಂದ ಜೀವನದಲ್ಲಿ ಪ್ರಚಂಡ ಯಶಸ್ಸು ಗಳಿಸಿ ಹತ್ತಿರತ್ತಿರ ಎರಡು ಬಿಲಿಯನ್ ಡಾಲರ್ ಆಸ್ತಿಯ ಒಡೆಯನಾಗಿದ್ದ ನರೇಶ್ ಗೋಯಲ್ ಇಂದು ಸರ್ವಸ್ವವನ್ನು ಕಳೆದುಕೊಂಡು ಜೈಲುವಾಸ ಅನುಭವಿಸುತ್ತಿದ್ದಾರೆ. ಕೈಯಲ್ಲಿ ದುಡ್ಡಿರುವಾಗ ಒಂದೇ ಉದ್ಯಮವನ್ನು ನಂಬಿ ಕುಳಿತುಕೊಳ್ಳದೆ ಬೇರೆ ಬೇರೆ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದರೆ ಖಂಡಿತವಾಗಿಯೂ ಈ ದುಸ್ಥಿತಿ ಅವರಿಗೆ ಬರುತ್ತಿರಲಿಲ್ಲವೇನೋ….
ಬರಹ: ಇಕ್ಬಾಲ್ ಸಂಪೋಳಿ